(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.24: ಮಹಾನಗರ ಬೆಂಗಳೂರಿನಲ್ಲಿ ಗುರುವಾರ ಬೆಳಗ್ಗೆಯೇ ಪಾಲಿಕೆಯ ಮಾಜಿ ಸದಸ್ಯೆಯ ಹತ್ಯೆಯಾಗಿದೆ. ಛಲವಾದಿಪಾಳ್ಯದ ಫ್ಲವರ್ ಗಾರ್ಡನ್ ನಲ್ಲಿ ಬಿಜೆಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಅವರ ಕಚೇರಿ ಮುಂದೆಯೇ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಒಳಗಿದ್ದ ರೇಖಾ ಕದಿರೇಶ್ ಅವರನ್ನು ಹೊರಗೆ ಕರೆದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ತೀವ್ರ ಹಲ್ಲೆ ನಡೆಸಿದ್ದಾರೆ. ರಕ್ತಸ್ರಾವವಾಗಿ ಕೆಳಗೆ ಬಿದ್ದ ಅವರನ್ನು ಸ್ಥಳದಲ್ಲಿದ್ದವರು ಕೂಡಲೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.ರೇಖಾ ಅವರು ಮೃತಪಟ್ಟ ಬಗ್ಗೆ ಆಸ್ಪತ್ರೆಯ ಡಾ ಸಂಜೀವ್ ಪಾಟೀಲ್ ಖಚಿತಪಡಿಸಿದ್ದಾರೆ.ಬೆಂಗಳೂರಿನ ಫ್ಲವರ್ ಗಾರ್ಡನ್ ಸಮೀಪ ಈ ಘೋರ ಘಟನೆ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ನಡೆದಿದೆ. ಸುತ್ತಮುತ್ತ ಜನರು ವಾಸಿಸುತ್ತಿರುವ ಪ್ರದೇಶವಾಗಿದೆ. ರೇಖಾ ಕದಿರೇಶ್ ಅವರು ಕೆಲಸ ಮಾಡುತ್ತಿರುವ ಕಚೇರಿಯ ಹೊರಗೆ ಹಾಡಹಗಲೇ ಈ ಘಟನೆ ನಡೆದಿದ್ದು ಆಘಾತ ಮೂಡಿಸಿದೆ.ಪತಿಯನ್ನು ಕೊಂದ ಮೂರು ವರ್ಷಗಳ ನಂತರ ಪತ್ನಿಯ ಹತ್ಯೆಯನ್ನು ದುಷ್ಕರ್ಮಿಗಳು ನಡೆಸಿದ್ದಾರೆ.