ಮಂಗಳೂರು: ನವಮಂಗಳೂರು ಬಂದರ್ (ಎನ್ಎಂಪಿಟಿ)ನಲ್ಲಿ ಕಂಟೈನರ್ ಲಾರಿ ನಿಯಂತ್ರಣ ತಪ್ಪಿ ಸಮುದ್ರಪಾಲಾಗಿ ನಾಪತ್ತೆಯಾಗಿದ್ದ ಪ್ರಕರಣದಲ್ಲಿ ಲಾರಿ ಸಹಿತ ಕ್ಲೀನರ್ ಭೀಮಪ್ಪ(22) ಅವರ ಮೃತದೇಹವೂ ಇದೀಗ ಪತ್ತೆಯಾಗಿದೆ.
ಭೀಮಪ್ಪ ಲಾರಿ ಸಹಿತ ಸಮುದ್ರದಲ್ಲಿ ಕಣ್ಮರೆಯಾಗಿದ್ದರು. ಶೋಧ ಮುಂದುವರಿದಿತ್ತು. ಇದೀಗ ಲಾರಿಯೊಳಗಡೆಯೇ ಇದ್ದ ಅವರ ಮೃತದೇಹವನ್ನು ನೀರಿನಿಂದ ಮೇಲೆತ್ತಲಾಗಿದೆ.ಎನ್ಎಂಪಿಟಿ ಬಂದರಿಗೆ ಹಡಗಿನಲ್ಲಿ ಬರುವ ಸರಕು ಸಾಗಾಟದ ಕಂಟೈನರ್ ಲಾರಿ ನಿನ್ನೆ ರಾತ್ರಿ 10.30ಕ್ಕೆ ಎನ್ಎಂಪಿಟಿಯ 14ನೇ ಬರ್ತ್ನಲ್ಲಿ ನಿಯಂತ್ರಣ ತಪ್ಪಿ ನೀರಿಗೆ ಬಿದ್ದಿತ್ತು. ಇದನ್ನು ಟಗ್ ಬೋಟ್ ಸಿಬ್ಬಂದಿ ನೋಡಿ ಮಾಹಿತಿ ನೀಡಿದ್ದು, ರಾತ್ರಿಯೇ ಸಿಐಎಸ್ಎಫ್ ಸಿಬ್ಬಂದಿ ಪತ್ತೆ ಕಾರ್ಯಾಚರಣೆ ನಡೆಸಿದ್ದರು. ಪರಿಣಾಮ ಕಂಟೈನರ್ ಲಾರಿ ಚಾಲಕ ರಾಜೇಸಾಬ ರಾತ್ರಿ 11.30ಕ್ಕೆ ಪತ್ತೆಯಾಗಿದ್ದರು. ಆದರೆ, ಆಸ್ಪತ್ರೆಗೆ ಕೊಂಡೊಯ್ಯುವ ದಾರಿಯಲ್ಲಿ ಮೃತಪಟ್ಟಿದ್ದರು.