(ನ್ಯೂಸ್ ಕಡಬ) newskadaba,ಮಂಗಳೂರು ಜೂ. 20: ಲಾಕ್‌ಡೌನ್ ನಿಯಮ ಉಲ್ಲಂಘಿಸಿ ನಗರದ ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ ಅದ್ದೂರಿಯಾಗಿ ಮದುವೆ ನಡೆಯುತ್ತಿತ್ತು. ಸ್ಥಳಕ್ಕೆ ಮಂಗಳೂರು ಮಹಾನಗರ ಪಾಲಿಕೆ ( ಮನಪಾ) ಸಹಾಯಕ ಆಯುಕ್ತ ಮತ್ತು ಕಂದಾಯ ಇಲಾಖೆಯ ಉಪ ಆಯುಕ್ತ ಜಂಟಿ ದಾಳಿ ನಡೆಸಿ ಮದುವೆ ನಿಲ್ಲಿಸಿದ್ದಾರೆ.

ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯ, ಎಕ್ಕೂರಿನ ಭಾಸ್ಕರಚಂದ್ರ ಶೆಟ್ಟಿಯವರ ಪುತ್ರಿಯ ವಿವಾಹ ಸೇರಿದಂತೆ ನಾಲ್ಕು ಜೋಡಿಗಳ ಮದುವೆಯನ್ನು ಏರ್ಪಡಿಸಲಾಗಿತ್ತು. ಮದುವೆ ಹಿನ್ನೆಲೆ ದೇವಸ್ಥಾನದ ಮುಂಭಾಗದಲ್ಲಿ 40ಕ್ಕೂ ಹೆಚ್ಚು ಕಾರು ನಿಂತಿದ್ದವು. ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.ಲಾಕ್‌ಡೌನ್ ಹಿನ್ನೆಲೆ ಮನೆಯಲ್ಲಿ ಮದುವೆ ನಡೆಸಲು ಅನುಮತಿಯಿದ್ದರೂ, 25 ಜನರು ಮೀರದಂತೆ ಸರಳ ಸಮಾರಂಭ ನಡೆಸಬೇಕು. ಆದರೆ, ಕಾನೂನು ಮಿತಿ ಮೀರಿ ದೇವಸ್ಥಾನದಲ್ಲಿ ಅದ್ದೂರಿ ಮದುವೆ ನಡೆಯುತ್ತಿತ್ತು. ಹಾಗಾಗಿ, ದಾಳಿ ನಡೆಸಿದ ಅಧಿಕಾರಿಗಳು ಸಮಾರಂಭದ ಆಯೋಜಕರನ್ನು ತರಾಟೆಗೆ ತೆಗೆದುಕೊಂಡರು. ಮದುವೆಗೆ ಅವಕಾಶ ಕೊಟ್ಟಿದ್ದ ದೇವಸ್ಥಾನದ ಆಡಳಿತ ಸಮಿತಿ ವಿರುದ್ಧ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ.