(ನ್ಯೂಸ್ ಕಡಬ) newskadaba,ಬೆಂಗಳೂರು ಜೂ.19: 2ನೇ ಹಂತದ ಕರ್ನಾಟಕ ಅನ್ಲಾಕ್ ಭಾಗವಾಗಿ ಪಾಸಿಟಿವಿಟಿ ರೇಟ್ ಆಧಾರದ ಮೇಲೆ ಕೆಲವು ಜಿಲ್ಲೆಗಳಲ್ಲಿ ಮಾತ್ರ ನಿರ್ಬಂಧ ಸಡಿಲಿಸಿ ಬೆಳಗ್ಗೆಯಿಂದ ಸಂಜೆ 5ರವರೆಗೆ ಎಲ್ಲ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.
ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಬೆಂಗಳೂರು ನಗರ ಜಿಲ್ಲೆ, ಗದಗ, ರಾಯಚೂರು, ಬಾಗಲಕೋಟೆ, ಕಲಬುರಗಿ, ಹಾವೇರಿ, ರಾಮನಗರ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಿಗೆ ಮಾತ್ರ ಈ ಸಡಿಲಿಕೆ ಅನ್ವಯವಾಗಲಿದೆ. ಜತೆಗೆ ಈ ಜಿಲ್ಲೆಗಳಲ್ಲಿ ಸೋಮವಾರದಿಂದ (ಜೂನ್ 21) ಸರ್ಕಾರಿ ಬಸ್ಗಳ ಶೇ 50ರ ಅವಕಾಶದೊಂದಿಗೆ ಓಡಾಟಕ್ಕೆ ಅನುಮತಿ ನೀಡಲಾಗಿದ್ದು ಇನ್ನಷ್ಟು ವಿನಾಯಿತಿಗಳನ್ನು ರಾಜ್ಯ ಸರ್ಕಾರ ಘೋಷಿಸಿದೆ. ಆದರೆ ಶೇ 5 ಕ್ಕಿಂತ ಹೆಚ್ಚಿನ ಪಾಸಿಟಿವಿಟಿ ದರ ಇರುವ 13 ಜಿಲ್ಲೆಗಳಾದ ಹಾಸನ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಕೊಡಗು, ಧಾರವಾಡ, ಬಳ್ಳಾರಿ, ಚಿತ್ರದುರ್ಗ ಹಾಗೂ ವಿಜಯಪುರ ಜಿಲ್ಲೆಗಳಿಗೆ ಈ ಸಡಿಲಿಕೆ ಅನ್ವಯ ಆಗುವುದಿಲ್ಲ ಎಂದು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಇಂದು ಘೋಷಿಸಿರುವ ನಿಯಮಗಳು ಜುಲೈ 5ರವರೆಗೂ ಮುಂದುವರೆಯಲಿದೆ.ಪ್ರತಿದಿನ ಸಂಜೆ 7ಗಂಟೆಯಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ ಎಲ್ಲ ಜಿಲ್ಲೆಗಳಲ್ಲೂ ಮುಂದುವರೆಯಲಿದೆ. ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 5ರವರೆಗೆ ಕರ್ಫ್ಯೂ ಸಹ ರಾಜ್ಯದಲ್ಲಿ ಎಂದಿನಂತೆ ಮುಂದುವರೆಯಲಿದೆ .