(ನ್ಯೂಸ್ ಕಡಬ) newskadaba.com ಕಡಬ, ಅ.26. ಮರ್ದಾಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಸುಂಕದಕಟ್ಟೆ ಸಮೀಪ ರಸ್ತೆಯ ಬದಿಯಲ್ಲಿ ಮರವೊಂದು ರಸ್ತೆಗೆ ಬೀಳುವ ಹಂತದಲ್ಲಿದ್ದು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ.
ಅರಣ್ಯ ಇಲಾಖಾ ವಸತಿಗೃಹದ ಕಚೇರಿ ಸಮೀಪವೇ ಈ ಅಪಾಯಕಾರಿ ಮರ ಸಂಪೂರ್ಣವಾಗಿ ಒಣಗಿ ರಸ್ತೆಗೆ ಬೀಳುವ ಹಂತದಲ್ಲಿದ್ದರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ತೆರವುಗೊಳಿಸುವ ಮನಸ್ಸು ಮಾಡುತ್ತಿಲ್ಲ.
ಈ ರಸ್ತೆಯಲ್ಲಿ ದಿನನಿತ್ಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಾವಿರಾರು ಯಾತ್ರಾರ್ಥಿ ವಾಹನಗಳು ಸಂಚಾರಿಸುತ್ತಿದ್ದು ಅಲ್ಲದೆ ಪ್ರತಿನಿತ್ಯ ವಿದ್ಯಾರ್ಥಿಗಳು, ಸಾರ್ವಜನಿಕರು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ. ಅಪಾಯಕಾರಿ ಮರದ ಕೆಳಭಾಗದಲ್ಲಿ ಹೆಚ್.ಟಿ. ವಿದ್ಯುತ್ ಲೈನ್ ಕೂಡ ಹಾದು ಹೋಗಿದ್ದು ಆಕಸ್ಮಾತ್ ಮರ ನೆಲಕುರುಳಿದರೆ ಅನಾಹುತವಾಗುವ ಸಂಭವ ಹೆಚ್ಚು. ಈ ಭಾಗದಲ್ಲಿ ಮರಗಳು ಮುರಿದು ಬಿದ್ದು ಹಲವು ಬಾರಿ ಸಂಚಾರಕ್ಕೆ ತೊಡಕಾದ ಉದಾಹರಣೆ ಇದೆ.
ಅಲ್ಲದೆ ಕಳೆದ ಫೆ.16ರಂದು ಅಪಾಯಕಾರಿ ಧೂಪದ ಮರ ವಿದ್ಯುತ್ ಲೈನ್ ಮೇಲೆ ಬಿದ್ದು ವಿದ್ಯುತ್ ಕಂಬ ತುಂಡಾಗಿ ರಸ್ತೆಯಲ್ಲಿ ಸಂಚಾರಿಸುತ್ತಿದ್ದ ಬೈಕ್ ಸವಾರನ ಮೇಲೆ ಬಿದ್ದು ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇನ್ನು ಜನರ ಮನಸ್ಸಿನಿಂದ ಮಾಸಿಲ್ಲ. ಅಲ್ಲದೆ ಅನೇಕ ಧೂಪದ ಮರಗಳು ರಸ್ತೆಯ ಬದಿಯಲ್ಲಿ ಸಾಲು ಸಾಲಾಗಿ ಅಪಾಯವನ್ನು ಆಹ್ವಾನಿಸುತ್ತಿದೆ. ಆದರೂ ಅರಣ್ಯ ಇಲಾಖೆ ಮಾತ್ರ ತನಗೆ ಯಾವುದೇ ಸಂಬಂಧವಿಲ್ಲದಂತೆ ವರ್ತಿಸುತ್ತಿದೆ.