(ನ್ಯೂಸ್ ಕಡಬ) newskadaba.com ಕಡಬ, ಅ.25. ಇಲ್ಲಿನ ಹೃದಯ ಭಾಗದಲ್ಲಿರುವ ರಾಯಲ್ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡ ನಸೀಬ್ ಬೋರ್ವೆಲ್ ಮತ್ತು ಅರ್ಥ್ ಮೂವರ್ಸ್ ಶಾಖಾ ಕಚೇರಿಯನ್ನು ಪುತ್ತೂರು ಬದ್ರಿಯಾ ಜುಮ್ಮಾ ಮಸೀದಿಯ ಮುದರ್ರಿಸ್ ಎಸ್.ಬಿ ಮೊಹಮ್ಮದ್ ದಾರಿಮಿಯವರು ಸೋಮವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಜನರೊಂದಿಗೆ ಪ್ರಾಮಾಣಿಕತೆಯಿಂದ ವರ್ತಿಸಿ ವ್ಯಾಪಾರದಲ್ಲಿ ಬಂದ ಲಾಭದಲ್ಲಿ 1 ಅಂಶ ಜನರ ಒಳಿತಿಗಾಗಿ ವಿನಿಯೋಗಿಸಿ ಸೇವೆಗೈಯುವುದೇ ಸಮಾಜ ಸೇವೆ ಎಂದರು. ಹಿಂದು ಸಂಪ್ರದಾಯದಲ್ಲಿ ಸರ್ವೇ ಜನೋ ಸುಖಿನೋ ಭವಂತು ಎಂದು ಸಾರಿದರೆ ಇಸ್ಲಾಂ ಧರ್ಮದಲ್ಲಿ ಸತ್ಯ ಶಾಂತಿ ವಿಶ್ವಾಸ ಪ್ರೀತಿಯನ್ನು ಸಾರುವ ಮೂಲಕ ಎಲ್ಲರೂ ಆತ್ಮೀಯತೆಯಿಂದ ಅನ್ಯೋನ್ಯತೆಯಿಂದ ಬಾಳಿ ಇಹಪರಗಳಲ್ಲಿ ವಿಜಯಿಗಳಾಗಬೇಕೆಂದು ಸಾರುತ್ತದೆ. ಕೆಲವು ಉದ್ರೇಕಕಾರಿ ಶಕ್ತಿಗಳಿಂದ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದು ಕೋಮು ಪ್ರಚೋದನೆಗೆ ಕಾರಣವಾಗುತ್ತಿದ್ದು ಇಂತಹ ಯಾವುದೇ ಅಹಿತಕರ ಘಟನೆಗಳಿಗೆ ಎಡೆಮಾಡಿಕೊಡದೆ ಜನರ ಸೇವೆಯೇ ನಮ್ಮ ಗುರಿಯೆಂದು ಜೀವನ ನಡೆಸಿದಲ್ಲಿ ಎಲ್ಲರಿಗೂ ಒಳಿತಾಗುತ್ತದೆ ಎಂದು ಹೇಳಿದ ಅವರು ನಸೀಬ್ ಬೋರ್ವೆಲ್ ಮತ್ತು ಅರ್ಥ್ ಮೂವರ್ಸ್‌ನ ಮಾಲಕ ಅಬೂಬಕ್ಕರ್ರವರು ಇಡೀ ಸಮಾಜದ ಪ್ರೀತಿಯನ್ನು ಗಳಿಸುವುದರ ಮೂಲಕ ಸರ್ವ ಜನರಿಗೆ ತನ್ನ ಸೇವೆಯನ್ನು ನೀಡುವುದರೊಂದಿಗೆ ದುಡಿದ ಸಂಪತ್ತಿನಲ್ಲಿ ಒಂದಂಶವನ್ನು ಸಮಾಜಕ್ಕೆ ವಿನಿಯೋಗಿಸುವ ಒಬ್ಬ ಉದಾರ ದಾನಿಯಾಗಿದ್ದು ಮುಂದೆಯೂ ಇವರ ದುಡಿಮೆ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.
ಕಡಬ ರಹ್ಮಾನಿಯಾ ಟೌನ್ ಜುಮ್ಮಾ ಮಸೀದಿಯ ಮುದರ್ರಿಸ್ ಹಾಜಿ ಇಬ್ರಾಹಿಂ ದಾರಿಮಿ ದುಃವಾಶೀರ್ವಚನದೊಂದಿಗೆ ಸಂಸ್ಥೆಗೆ ಶುಭಹಾರೈಸಿದರು.
ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಬೋರ್ವೆಲ್ ಉಳಿಸಿ ಹೋರಾಟ ಸಮಿತಿಯ ಅಧ್ಯಕ್ಷರು ಸುಳ್ಯ ವಿಧಾನಸಭಾ ಕಾಂಗ್ರೆಸ್ ಉಸ್ತುವಾರಿಗಳಾದ ಹೇಮನಾಥ್ ಶೆಟ್ಟಿ ಕಾವು ಮಾತನಾಡಿ ಜನರ ಸೇವೆಯೊಂದಿಗೆ ಜನಪರ ಕೆಲಸಗಳನ್ನು ಮಾಡುವ ಮೂಲಕ ಸಮಾಜಕ್ಕೆ ಕಿಂಚಿತ್ತು ಕೊಡುಗೆ ನೀಡುವುದರೊಂದಿಗೆ ಮಾದರಿ ವ್ಯಕ್ತಿಯಾಗಿ ಬೆಳೆಯುವುದೇ ನಮ್ಮ ಮುಂದಿನ ಜೀವನಕ್ಕೆ ಹಾಗೂ ಕುಟುಂಬಕ್ಕೆ ದಾರದೀಪವಾಗಲು ಸಾಧ್ಯ. ನಸೀಬ್ ಬೋರ್ವೆಲ್ನ ಅಬೂಬಕ್ಕರ್ ಈಗಾಗಲೇ ಜಿಲ್ಲೆಯಾದ್ಯಂತ ಅದೆಷ್ಟೋ ಕೃಷಿಕರಿಗೆ ಬೋರ್ವೆಲ್ ಕೊರೆಯುವ ಮೂಲಕ ನೀರಿನ ವ್ಯವಸ್ಥೆಯನ್ನು ಕಲ್ಪಿಸಿದ್ದು ಇದೀಗ 25ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಸುಸಂದರ್ಭದಲ್ಲಿ ಕಡಬ ಪರಿಸರದಲ್ಲಿ ತನ್ನ ಶಾಖೆಯನ್ನು ತೆರೆಯುವುದರ ಮೂಲಕ ಈ ಭಾಗದ ಜನರಿಗೆ ಪ್ರಯೋಜನವಾಗುವಂತೆ ಕಚೇರಿಯನ್ನು ತೆರೆಯುವುದರ ಮೂಲಕ ಜನರ ಸೇವೆಗೆ ಮುಂದಾಗಿರುವುದು ಶ್ಲಾಘನೀಯವಾಗಿದೆ ಎಂದು ಶುಭಹಾರೈಸಿದರು.
ಕಡಬ ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್ರವರು ಮಾತನಾಡಿ ಮಾತು ಕಡಿಮೆ ದುಡಿಮೆಯ ಶಕ್ತಿ ಅಪಾರವಾಗಿರುವ ನಸೀಬ್ ಬೋರ್ವೆಲ್ಸ್‌ನ ಮಾಲಕ ಅಬೂಬಕ್ಕರ್ರವರು ಕಡಬ ತಾಲೂಕು ಕೇಂದ್ರದಲ್ಲಿ ತನ್ನ ಬೋರ್ವೆಲ್ ಹಾಗೂ ಅರ್ಥ್ ಮೂವರ್ಸ್‌ನ ಸಂಸ್ಥೆಯನ್ನು ಪ್ರಾರಂಭಿಸುವುದರೊಂದಿಗೆ ಕೃಷಿ ಆಧಾರಿತ ಕಡಬದ ಜನತೆಗೆ ಸಂತೋಷದ ವಿಚಾರವಾಗಿದ್ದು ಇಂತಹ ಹಲವಾರು ಸೌಲಭ್ಯಗಳು ಕೈಗಾರಿಕ ಉದ್ಯಮಗಳು ಇನ್ನೂ ಬರುವಂತಾಗಲಿ ಅಲ್ಲದೆ ಸಂಸ್ಥೆಯ ಪ್ರಾರಂಭದಲ್ಲಿಯೇ ಕಡಬ ಕ್ಷೇತ್ರದಲ್ಲಿ ಸುಮಾರು 40 ಕುಟುಂಬಗಳಿರುವ 2 ಕಾಲೋನಿ ಪ್ರದೇಶಗಳಿಗೆ ಉಚಿತವಾಗಿ ಬೋರ್ವೆಲ್ ತೆಗೆಯುವುದರ ಮೂಲಕ ಸಮಾಜಮುಖಿಯಾಗಿ ಕೆಲಸ ಮಾಡಲು ಮುಂದಾಗಿರುವುದು ಶ್ಲಾಘನೀಯವಾಗಿದೆ. ಇವರ ಸಂಸ್ಥೆಯಿಂದ ಈ ಭಾಗದ ಎಲ್ಲರಿಗೂ ಪ್ರಯೋಜನವಾಗುವಂತಾಗಲಿ ಎಂದು ಶುಭಹಾರೈಸಿದರು.
ನೆಟ್ಟಣಿಗೆ ಮಡ್ನೂರು ಜಿ.ಪಂ.ಸದಸ್ಯೆ ಅನಿತಾಹೇಮನಾಥ ಶೆಟ್ಟಿ, ಕಡಬ ಶ್ರೀದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜನಾರ್ಧನ ಗೌಡ ಪಣೆಮಜಲು, ಮಾಜಿ ಜಿ.ಪ.ಸದಸ್ಯ ಹಾಜಿ ಸಯ್ಯದ್ ಮೀರಾ ಸಾಹೇಬ್ ಕಡಬ ಅಡಿಕೆ ವರ್ತಕ ಸಂಘದ ಅಧ್ಯಕ್ಷ ಕಡಬ ರಹ್ಮಾನಿಯಾ ಟೌನ್ ಜುಮ್ಮಾ ಮಸೀದಿಯ ಅಧ್ಯಕ್ಷ ಹಾಜಿ ಎಸ್.ಅಬ್ದುಲ್ ಖಾದರ್, ಕಡಬ ನೆಲ್ಯಾಡಿ ಎಚ್.ಪಿ ಪೆಟ್ರೋಲ್ ಪಂಪ್ನ ಮಾಲಕ ಕೆ.ಪಿ ತೋಮಸ್, ಬಿಳಿನೆಲೆ ವಲಯ ಕಾಂಗ್ರೆಸ್ ಅಧ್ಯಕ್ಷ ಮನಮೋಹನ ಗೌಡ ಗೋಳ್ಯಾಡಿ ಶುಭಹಾರೈಸಿದರು. ಈಶ್ವರಮಂಗಲ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಂಜೀವ ರೈ, ಪುತ್ತೂರು ಪುರಸಭಾ ಸದಸ್ಯರಾದ ಅನ್ವರ್ ಕಾಸಿಂ, ಶಕ್ತಿಸಿಂಹ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ಸವಣೂರಿನ ಅಶ್ರಫ್, ರಾಯಲ್ ಕಾಂಪ್ಲೆಕ್ಸ್‌ನ ಮಾಲಕ ಮಹಮ್ಮದ್ ಕುಟ್ಟಿ, ಕಡಬ ಗ್ರಾ.ಪಂ.ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಹಾಜಿ ಕೆ.ಎಂ ಹನೀಪ್, ಅಶ್ರಫ್ ಶೇಡಿಗುಂಡಿ, ಸದಸ್ಯ ಎ.ಎಸ್ ಶೆರೀಫ್, ಕುಟ್ರುಪ್ಪಾಡಿ ಗ್ರಾ.ಪಂ.ಮಾಜಿ ಸದಸ್ಯ ಕ್ಷೇವಿಯರ್ ಬೇಬಿ, ಪ್ರಮುಖರಾದ ಅಬ್ದುಲ್ ರಝಾಕ್ ರಾವುತರ್ ಕೋಡಿಂಬಾಳ, ಹಾರುನ್ ಕೇಪು, ಅಬೂಬಕ್ಕರ್ ಕುದುಲೂರು, ಕಾರ್ತಿಕ್ ಕಡಬ, ಗಣೇಶ್ ಹಳ್ಳಿ ಕುಟ್ರುಪ್ಪಾಡಿ, ವರ್ಗೀಸ್ ಕುಂತೂರು ಸೇರಿದಂತೆ ಕಡಬ ಪ್ರದೇಶದ ಹಲವಾರು ಹಿತೈಷಿ ಬಂಧುಗಳು ಆಗಮಿಸಿದ್ದರು.ನಸೀಬ್ ಬೋರ್ವೆಲ್ಸ್ & ಅರ್ಥ್ ಮೂವರ್ಸ್‌ನ ಮಾಲಕ ಅಬೂಬಕ್ಕರ್ ಮುಲಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಪಾಲುದಾರ ಕರುಣಾಕರ ಕುಂತೂರು ವಂದಿಸಿದರು.