ಮಕ್ಕಾ ಮಸೀದಿಯ ಅವಹೇಳನ ಪ್ರಕರಣ ► ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ಕಡಬದಲ್ಲಿ ಮೌನ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಅ.24. ತನ್ನ ವಾಟ್ಸಪ್ ಪ್ರೋಫೈಲ್ನಲ್ಲಿ ಮುಸ್ಲಿಮರ ಪವಿತ್ರ ಕ್ಷೇತ್ರವಾದ ಮಕ್ಕಾ ಮಸೀದಿಯ ಕಅಬಾ ಶರೀಫಿನ ಚಿತ್ರದ ಮೇಲೆ ಹಿಂದೂ ದೇವರಾದ ಆಂಜನೇಯನ ವಿಗ್ರಹವನ್ನು ಚಿತ್ರಿಸಿ ಮುಸ್ಲಿಂ ಧಾರ್ಮಿಕ ಭಾವನೆಗೆ ದಕ್ಕೆ ತಂದಿರುವ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ಮಂಗಳವಾರದಂದು ಕಡಬದಲ್ಲಿ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಮೌನ ಪ್ರತಿಭಟನೆ ನಡೆಯಿತು.

 

ಗಂಡಿಬಾಗಿಲು ಕುತುಬಿಯ್ಯಾ ಜುಮಾ ಮಸೀದಿಯ ಸಯ್ಯದ್ ಅನಸ್ ತಂಙಳ್ ರವರ ದುಃವಾದೊಂದಿಗೆ ಕಡಬ ಬಾಜಿನಡಿ ಗೈಬಾನ್ ಷಾ ದರ್ಗಾ ಶರೀಫ್ ವಠಾರದಿಂದ ಮೌನ ಪ್ರತಿಭಟನೆಗೆ ಚಾಲನೆ ನೀಡಿ ಕಡಬ ಪೇಟೆಯಾದ್ಯಂತ ಮೆರವಣಿಗೆ ನಡೆದು ಕಡಬ ಮುಖ್ಯ ಬಸ್ ನಿಲ್ದಾಣದ ಎದುರು ಸಭೆ ನಡೆಯಿತು. ಈ ಸಂದರ್ಭ ಪ್ರತಿಭಟನೆಯನ್ನು ಉದ್ದೇಶಿಸಿ ಶ್ರೀ ದುಗರ್ಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಜನಾರ್ಧನ ಗೌಡ ಪಣಡಮಜಲು ಮಾತನಾಡಿ, ಹಿಂದೂ ಮುಸ್ಲಿಂ ಕ್ರಿಶ್ಚಿಯನ್ನರು ಸೌಹಾರ್ದತೆಯಿಂದ ಬಾಳುವ ಕಡಬ ಪರಿಸರದಲ್ಲಿ ಇಂತಹ ದುಷ್ಕೃತ್ಯದಿಂದ ಧಾರ್ಮಿಕ ಭಾವನೆಗೆ ದಕ್ಕೆಯಾಗಿದೆ. ಒಂದೇ ಸೂರ್ಯನ ಬೆಳಕನ್ನು ಉಪಯೋಗಿಸುವ ನಾವು ಜಾತಿಯ ಹೆಸರಿನಲ್ಲಿ ಕಚ್ಚಾಡದೆ ವಿವಿಧ ನಂಬಿಕೆಯಲ್ಲಿ ಜೀವಿಸಿದರೂ ದೇವರೊಬ್ಬನೇ ಎನ್ನುವ ಆಶಯದಂತೆ ಬದುಕಬೇಕಾಗಿದೆ ಎಂದರು.

ಕಡಬ ಸೈಂಟ್ ಜೋಕಿಮ್ಸ್ ಚರ್ಚ್‌ನ ಧರ್ಮಗುರು ರೆ|ಫಾ| ರೋನಾಲ್ಡ್ ಲೋಬೋ ಮಾತನಾಡಿ, ಸಮಾಜದ ಕೆಡುಕನ್ನು ಯಾವ ಧರ್ಮವೂ ಬಯಸುವುದಿಲ್ಲ. ಆದರೆ ಕೆಲವು ಧರ್ಮ ವಿರೋಧಿಗಳು ಇನ್ನೊಂದು ಧರ್ಮದ ತತ್ವಗಳನ್ನು ಪರಿಹಾಸ್ಯಗೊಳಿಸಿಕೊಳ್ಳುವ ಮೂಲಕ ತಾನು ನಂಬಿಕೆಯಿಟ್ಟಂತಹ ಧರ್ಮಕ್ಕೂ ದ್ರೋಹವೆಸಗುತ್ತಿದ್ದಾರೆ. ಇಂತಹ ಅಪರಾಧ ಎಸಗುವವರನ್ನು ಕರೆದು ತಿಳಿಹೇಳಿ ತಪ್ಪನ್ನು ತಿದ್ದಿಕೊಳ್ಳಬೇಕಾಗಿದೆ. ಜಾಲತಾಣಗಳಲ್ಲಿ ಯಾವುದೇ ಧರ್ಮ ನಿಂದನೆಗೆ ಅವಕಾಶ ಒದಗಿಬರದಂತೆ ಯುವ ಜನತೆ ಜಾಗೃತಗೊಳ್ಳಬೇಕು ಎಂದರು.

Also Read  ಕುತ್ತಾರಿನ ಕೊರಗಜ್ಜ ದೈವದ ದರ್ಶನ ಪಡೆದ ನಟ ಶಿವರಾಜ್‌ಕುಮಾರ್‌ ದಂಪತಿ

ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್, ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ದಾರುಲ್ ಇರ್ಷಾದ್ ಮಾಣಿಯ ಉಪ ಪ್ರಾಂಶುಪಾಲರಾದ ಹಸನ್ ಅಹ್ಸನಿ, ಹಿರಿಯ ಧಾಮರ್ಿಕ ಮುಖಂಡ ಗೋಪಾಲ್ ರಾವ್ ಕಡಬ, ಕಡಬದ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಸಿ.ಪಿಲಿಪ್, ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಬಾಲಕೃಷ್ಣ ಗೌಡ ಬಳ್ಳೇರಿ, ರಫೀಕ್ ದಾರಿಮಿ ಮೊದಲಾದವರು ಮಾತನಾಡಿದರು. ಬಳಿಕ ಮೌನ ಮೆರವಣಿಗೆಯು ಕಡಬ ಪೇಟೆಯಲ್ಲಿ ಸಾಗಿ ಕಡಬ ತಹಶೀಲ್ದಾರ್ ಕಛೇರಿಯ ಮುಂಭಾಗದಲ್ಲಿ ರಾಜ್ಯ ಹೆದ್ದಾರಿಯನ್ನು ಕೆಲಕಾಲ ತಡೆದು ಪ್ರತಿಭಟಿಸಿದರು. ಈ ಸಂದರ್ಭ ಆತೂರು ಜುಮ್ಮಾ ಮಸೀದಿಯ ಸಯ್ಯದ್ ಜಿಫ್ರಿ ಮುತ್ತುಕೋಯ ತಂಙಲ್ ಮಾತನಾಡಿ ಘಟನೆಯನ್ನು ಖಂಡಿಸಿದರು. ಬಳಿಕ ತಪ್ಪಿತ್ತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಲ್ಲದೆ ಮುಂದಿನ ದಿನಗಳಲ್ಲಿ ಇಂತಹ ಘಟನೆ ಯಾವುದೇ ಧಮರ್ೀಯರಿಂದ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಮನವಿಯನ್ನು ರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲ, ಮುಖ್ಯಮಂತ್ರಿ, ಗೃಹಮಂತ್ರಿ, ಜಿಲ್ಲಾ ಉಸ್ತುವಾರಿ ಮಂತ್ರಿ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ರವರ ಮೂಲಕ ಸಲ್ಲಿಸಲಾಯಿತು. ವಿವಿಧ ಮಸೀದಿಗಳ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ವಿವಿಧ ಜಾತಿಯ ಮುಖಂಡರು, ಸೇರಿದಂತೆ ಹಲವರು ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಹಾಜಿ ಸಯ್ಯದ್ ಮೀರಾ ಸಾಹೇಬ್ ಸ್ವಾಗತಿಸಿದರು. ಅಶ್ರಫ್ ಶೇಡಿಗುಂಡಿ ಕಾರ್ಯಕ್ರಮ ನಿರೂಪಿಸಿದರು.

Also Read  ಕಡಬ: ಐಐಸಿಟಿ ವಿದ್ಯಾಸಂಸ್ಥೆಯಲ್ಲಿ ನರ್ಸರಿ(ಮೊಂಟೆಸ್ಸರಿ) ಶಿಕ್ಷಕಿಯರ ತರಬೇತಿ ಆರಂಭ

ಡಿವೈಎಸ್ಪಿ ಶ್ರೀನಿವಾಸ್, ಪುತ್ತೂರು ಗ್ರಾಮಾಂತರ ವೃತ್ತನಿರೀಕ್ಷಕ ಗೋಪಾಲ ನಾಯ್ಕ ಎಂ., ಕಡಬ ಠಾಣಾ ಉಪನಿರೀಕ್ಷಕ ಪ್ರಕಾಶ್ ದೇವಾಡಿಗ, ಸಂಪ್ಯ ಠಾಣಾ ಉಪನಿರೀಕ್ಷಕ ಅಬ್ದುಲ್ ಖಾದರ್ ನೇತೃತ್ವದಲ್ಲಿ ಪೊಲೀಸರು ಬಂದೋಬಸ್ತು ಒದಗಿಸಿದರು.

ಕಡಬ ಪೇಟೆ ವರ್ತಕರ ಬೆಂಬಲ: ಮುಸ್ಲಿಂ ಸಂಘಟನೆಗಳ ಮನವಿಯ ಮೇರೆಗೆ ಬೆಳಿಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ ಕಡಬ ಪೇಟೆಯ ಎಲ್ಲಾ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಟೂರಿಸ್ಟ್ ಜೀಪು, ಟೆಂಪೊ ಹಾಗೂ ರಿಕ್ಷಾ ಚಾಲಕರು ವಾಹನಗಳ ಓಡಾಟವನ್ನು ಸ್ಥಗಿತಗೊಳಿಸಿ ತಮ್ಮ ಬೆಂಬಲವನ್ನು ನೀಡಿದರು

error: Content is protected !!
Scroll to Top