(ನ್ಯೂಸ್ ಕಡಬ) newskadaba.com ಕಡಬ, ಅ.24. ನೂಜಿಬಾಳ್ತಿಲ-ರೆಂಜಿಲಾಡಿ ನೂಜಿಬೈಲ್ ನೂಜಿಶ್ರೀ ಉಳ್ಳಾಲ್ತಿ ಅಮ್ಮನವರ ಕ್ಷೇತ್ರದಲ್ಲಿ ನೂಜಿಬೈಲ್ ತೆಗ್ರ್ ತುಳುಕೂಟೊ ವತಿಯಿಂದ ದೀಪಾವಳಿ ಪ್ರ್ರಯುಕ್ತ ದಿ.ಜಿನ್ನಪ್ಪ ಗೌಡ ಮಾರಪ್ಪೆ ಸ್ಮರಣಾರ್ಥ ನಡೆದ ಬೆನ್ನಿದ ಕಂಡೊಡ್ ನಮ್ಮ ಜವನೆರ್ ತುಳು ಕ್ರೀಡಾಕೂಟದ ಸಮಾರೋಪ ಸಮಾರಂಭ ಆದಿತ್ಯವಾರ ನಡೆಯಿತು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ನ್ಯಾಯವಾದಿ ದುರ್ಗಾಪ್ರಸಾದ್ ಕುಂಬ್ರ ಮಾತನಾಡಿ ನಮ್ಮ ತುಳುನಾಡಿನ ಆಚಾರ ವಿಚಾರ, ಜಾನಪದ ಕ್ರೀಡೆಗಳು ವಿಶ್ವದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಯುವಜನಾಂಗ ಆಧುನಿಕತೆಗೆ ಮಾರುಹೋಗಿ ತುಳುನಾಡಿನ ಆಚರಣೆಗಳನ್ನು ಮರೆತಿದ್ದಾರೆ, ಆದರೆ ಮುಂದಿನ ಪೀಳಿಗೆಗೆ ತುಳುನಾಡಿನ ಆಚರಣೆಗಳು ಉಳಿಸುವ ಜವಾಬ್ದಾರಿ ನಮ್ಮದಾಗಬೇಕು. ಹಿಂದಿನ ಕಾಲದಲ್ಲಿ ಗದ್ದೆಬೇಸಾಯವೇ ತುಳುನಾಡಿನ ಮೂಲಕೃಷಿ. ಗದ್ದೆಬೇಸಾಯದ ಆರಂಭದಿಂದಲೇ ನಮ್ಮ ಹಿರಿಯರು ಗದ್ದೆಯಲ್ಲಿ ಸಾಮೂಹಿಕವಾಗಿ ಕ್ರೀಡಾಕೂಟ, ಕಂಬಳ ಮೂಲಕ ಸಂತೋಷದಲ್ಲಿ ಕೃಷಿಚಟುವಟಿಕೆ ನಡೆಸುತ್ತಿದ್ದರು. ಅದುವೇ ತುಳುನಾಡಿನ ರೈತರಿಗೆ ಮನೋರಂಜನೆಯ ಸ್ಫರ್ಧೆಗಳಾಗಿದ್ದವು ಆದರೆ ಇಂದು ಗದ್ದೆ ಬೇಸಾಯವನ್ನು ತುಳುನಾಡಿನಲ್ಲಿ ನೋಡುವುದೇ ವಿರಳವಾಗುವ ಮೂಲಕ ತುಳುನಾಡಿನ ಕ್ರೀಡೆಗಳು ಮರೆಯಾಗಿದೆ. ಇದನ್ನು ಮುಂದಿನ ಪೀಳಿಗೆಗೆ ಉಳಿಸುವ ಮಹತ್ವದ ಜವಾಬ್ದಾರಿ ನಮ್ಮದಾಗಿದೆ. ಈ ನಿಟ್ಟಿನಲ್ಲಿ ಈ ಪುಟ್ಟಹಳ್ಳಿಯ ಪ್ರದೇಶದಲ್ಲಿ ತೆಗ್ರ್ ತುಳುಕೂಟೊ ತುಳುಕ್ರೀಡೆ ಉಳಿಸುವ ಈ ಕಾರ್ಯ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ್ಯ ಬಲ್ಲಾಳ್ ಮಾತನಾಡಿ, ನೂಜಿಬಾಳ್ತಿಲ ಈ ಗ್ರಾಮೀಣ ಪ್ರದೇಶದಲ್ಲಿ ಅನೇಕ ವರ್ಷಗಳಿಂದ ತೆಗೆರ್ ತುಳುಕೂಟೊ ವಿಶಿಷ್ಟ ಕಾರ್ಯಗಳನ್ನು ನಡೆಸುವ ಮೂಲಕ ನೂಜಿಬಾಳ್ತಿಲದಲ್ಲಿ ತುಳುನಾಡಿನ ಸಂಸ್ಕ್ರತಿಯನ್ನು ಯುವಜನತೆಗೆ ತಿಳಿಸುವ ಕೆಲಸಮಾಡುತ್ತಿದೆ. ಅಲ್ಲದೆ ಇಲ್ಲಿನ ಧಾರ್ಮಿಕ ಚಟುವಟಿಕೆಗಳಲ್ಲಿ ತನ್ನದೆ ಆದ ಸೇವೆ ನೀಡುತ್ತಾ ಬಂದಿದ್ದು ತೆಗ್ರ್ ತುಳುಕೂಟೊದಿಂದ ಇನ್ನಷ್ಟು ಸಾಮಾಜಿಕ ಕಾರ್ಯಗಳು ನಡೆಯಲಿ ಎಂದು ಶುಭಹಾರೈಸಿದರು.
ಕಡಬ ಮೆಸ್ಕಾಂ ಜೆ.ಇ. ನಾಗರಾಜ್ ಮಾತನಾಡಿ, ಕಳೆದ 4 ವರ್ಷದ ಹಿಂದೆ ಈ ಊರಿಗೆ ವರ್ಗಾವಣೆಯಾಗಿ ಬಂದಿದ್ದೇನೆ. ಇಲ್ಲಿನ ಜನರು ನೀಡುವ ಪ್ರೀತಿಗೆ ಗೌರವಕ್ಕೆ ಮಾರುಹೋಗಿದ್ದೇನೆ. ಜೀವನದಲ್ಲಿ ತುಳುನಾಡಿನ ಜನ ನೀಡುವ ಪ್ರೀತಿ, ಗೌರವ ಮರೆಯಲು ಸಾಧ್ಯವಿಲ್ಲ ತುಳುನಾಡು ಅತ್ಯಂತ ಶ್ರೇಷ್ಟ ಸಂಸ್ಕ್ರತಿಯಳ್ಳ ನಾಡಾಗಿದ್ದು. ಇಲ್ಲಿನ ಜನರಲ್ಲಿ ಸಂಘಟನೆ ಶಕ್ತಿ ಇದೆ. ಯಾವುದೇ ಕಾರ್ಯಕ್ರಮವನ್ನು ಸಾಮೂಹಿಕವಾಗಿ ಆಚರಿಸುವುದನ್ನು ಇಲ್ಲಿ ಕಂಡಿದ್ದೇನೆ. ಇಲ್ಲಿನ ಪ್ರತಿಯೊಂದು ಆಚರಣೆಗೆ, ಸಂಪ್ರದಾಯಗಳಿಗೆ ವಿಶಿಷ್ಟವಾದ ಪರಂಪರೆ ಇದೆ. ತುಳನಾಡಿನ ಯಕ್ಷಗಾನ ವಿಶ್ವಪ್ರಸಿದ್ಧಿ ಪಡೆದಿದ್ದು ತುಳನಾಡಿನ ಜನರು ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ತುಳುನಾಡಿನ ಕಂಬಳವನ್ನು ಉಳಿಸುವಲ್ಲಿ ತುಳುನಾಡಿನ ಜನತೆ ಒಂದಾಗಬೇಕು ಎಂದರು.
ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಾಲಕೃಷ್ಣ ಕೊೖಲ ಮಾತನಾಡಿ, ತುಳುನಾಡಿಗೆ ಶತಮಾನದ ಹಿಂದಿನ ಪರಂಪರೆಯಿದ್ದು. ಹಿಂದಿನ ಕಾಲದಲ್ಲಿ ನಮ್ಮ ಹಿರಿಯರಿಗೆ ಬಡತನವಿತ್ತು ಆದ್ದರಿಂದ ಕೃಷಿ ಚಟುವಟಿಕೆಯಲ್ಲಿ ಪೂಜ್ಯ ಭಾವನೆಯನ್ನು ಕಂಡು ದುಡಿಯುತ್ತಿದ್ದರು ಅವರ ದುಡಿಮೆಯ ಫಲವಾಗಿ ಇಂದು ನಮಗೆ ಸಿರಿತನ ಬಂದಿದೆ. ಆದರೆ ಇಂದು ಸಿರಿತನದ ಬದುಕಿಗೆ ಮಾರುಹೋಗಿ ನಮ್ಮ ಗದ್ದೆಗಳು ಕಣ್ಮರೆಯಾಗತೊಡಗಿದೆ. ತುಳುನಾಡಿನ ಸಂಸ್ಕ್ರಾರ, ಆಚರಣೆಗಳು ನಮಗೆ ಬೇಡವಾಗಿದೆ. ನಾವು ವಾಣಿಜ್ಯ ಕೃಷಿಗೆ ಅವಲಂಬಿಯಾಗಿ ಗದ್ದೆಬೇಸಾಯವನ್ನು ನಿರ್ಲಕ್ಷಿಸಿದ್ದೇವೆ. ನೂಜಿಯ ತೆಗ್ರ್ ತುಳುಕೂಟ ಕಳೆದ ಅನೇಕ ವರ್ಷಗಳಿಂದ ಕ್ರೀಡಾಕೂಟದ ಮೂಲಕ ಯುವ ಸಮುದಾಯವನ್ನು ಮತ್ತೆ ಗದ್ದೆಯ ಕಡೆಗೆ ಕರೆತರುವಲ್ಲಿ, ತುಳುನಾಡಿನ ಆಚರಣೆಯನ್ನು ಜನರಿಗೆ ತಿಳಿಸುವಲ್ಲಿ ಮಾಡುತ್ತಿರುವ ಈ ಪ್ರಯತ್ನ ಶ್ಲಾಘನೀಯ ಎಂದರು.
ವೇದಿಕೆಯಲ್ಲಿ ನೂಜಿಶ್ರೀ ಉಳ್ಳಾಲ್ತಿ ಅಮ್ಮನವರ ದೈವಸಾನದ ಆಡಳಿತ ಸಮಿತಿ ಅಧ್ಯಕ್ಷ ರಾಮಚಂದ್ರ ಗೌಡ ಎಳುವಾಲೆ, ಹಿರಿಯ ಸದಸ್ಯ ದೇರಣ್ಣ ಗೌಡ ಗೌಡಿಗೆ, ದೈವಸ್ಥಾನದ ಪ್ರಧಾನ ಪರಿಚಾರಕ ವಿಜಯ ಕುಮಾರ್ ಕೇಪುಂಜ, ಉದ್ಯಮಿಗಳಾದ ಪ್ರಮೋದ್ ಈಜಿಲಡ್ಕ, ಬಾಲಕೃಷ್ಣ ಶಾಂತಿಗುರಿ, ತೆಗ್ರ್ ತುಳುಕೂಟೊ ಗೌರವಾಧ್ಯಕ್ಷ ದುಗ್ಗಣ್ಣ ಗೌಡ ಹೊಸಮನೆ, ತೆಗ್ರ್ ತುಳುಕೂಟೊ ಅಧ್ಯಕ್ಷ ವಾಸುದೇವ ಗೌಡ ಕೇಪುಂಜ, ಕಾರ್ಯದರ್ಶಿ ಗಣೇಶ್ ತಲೇಕಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ರವೀಂದ್ರ ಗುರುಸ್ವಾಮಿ, ಯಶೋಧರ ಶೆಟ್ಟಿ, ದಿವಾಕರ ಗೌಡ ಕೇಪುಂಜ, ರಾಜೇಂದ್ರ ಪಳಯನಡ್ಕ, ಬಾಬು ಗೌಡ ಕಾನದಬಾಗಿಲು, ಮೋನಪ್ಪ ಗೌಡ ನಡುಗುಡ್ಡೆ, ಶೇಖರ ಗೌಡ ಮಳೇಲ, ತಿಮ್ಮಯ್ಯ ರಾಣ್ಯ ನೂಜಿ, ಹೊನ್ನಮ್ಮ ನೀರಾರಿ, ಎಲ್ಯಕ್ಕ ಗರ್ಗಸ್ಪಾಲ್, ಪ್ರಜ್ವಲ್ ಕೇಪುಂಜ, ಸೌಮ್ಯ, ಆಶಾ, ಶಿಲ್ಪ ಅವರನ್ನು ಸನ್ಮಾನಿಸಲಾಯಿತು.ನೂಜಿಬಾಳ್ತಿಲ-ರೆಂಜಿಲಾಡಿ ಗ್ರಾಮದಲ್ಲಿ ಗದ್ದೆಬೇಸಾಯ ಮಾಡುವ ಕೃಷಿಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಅತಿಥಿಗಳಿಗೆ ಉಮೇಶ್ ಜಾಲು, ಪ್ರಸಾದ್ ಗರ್ಗಸ್ಪಾಲ್, ಉಮೇಶ ಅರ್ತಿತ್ತಡಿ, ಪುರುಷೋತ್ತಮ ಪಾಲೆತ್ತಾಡಿ, ಪವನ್ ಕುಮಾರ್ ಪಿಲತ್ತಡಿ ಸೋಮಶೇಖರ ನಡುಗುಡ್ಡೆ, ವಸಂತ ಗೌಡಿಗೆ, ಯತೀಶ್ ಗೌಡ ಚಾಕೋಟೆಜಾಲ್, ಪ್ರದೀಪ್ ಬಾಂತಾಜೆ ಅತಿಥಿಗಳಿಗೆ ತುಳುನಾಡಿನ ಸಂಪ್ರದಾಯಿಕ ಎಲೆ ಅಡಿಕೆ ನೀಡಿ ಗೌರವಿಸಿದರು.
ಧೃತಿ ಕಲ್ಲುಗುಡ್ಡೆ ಪ್ರಾರ್ಥಿಸಿ, ತೆಗ್ರ್ ತುಳುಕೂಟೊ ಸಂಚಾಲಕ ಉಮೇಶ್ ಶೆಟ್ಟಿ ಸಾಯಿರಾಮ್ ಸ್ವಾಗತಿಸಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೂಜಿಬಾಳ್ತಿಲ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಗೌಡ ಉಳಿಪ್ಪು ವಂದಿಸಿದರು. ಸಿ.ಆರ್.ಪಿ. ಗಣೇಶ್ ನಡುವಾಳು, ಹರ್ಷಿತ್ ನಡುವಳಿಕೆ ಕಾರ್ಯಕ್ರಮ ನಿರೂಪಿಸಿದರು ಶಿಕ್ಷಕಿ ಪ್ರೇಮಲತಾ, ಉಪಾಧ್ಯಕ್ಷ ಡೀಕಯ್ಯ ಗೌಡ ಪಾಲೆತ್ತಾಡಿ ಜತೆ ಕಾರ್ಯದರ್ಶಿ ಚೆನ್ನಪ್ಪ ಗೌಡ ಮಾರಪ್ಪೆ ಕೋಶಾಧಿಕಾರಿ ಪರಮೇಶ್ವರ ಸಂಕೇಶ ಸಹಕರಿಸಿದರು. ಹಿರಿಯರ, ಪುರುಷರ, ಮಹಿಳೆಯರ, ಅಂಗನವಾಡಿ ಪುಟಾಣೆಗಳ, ವಿದ್ಯಾರ್ಥಿ, ವಿಧ್ಯಾರ್ಥಿನೀಯರ ವಿಭಾಗದಲ್ಲಿ ವಿವಿಧ ಕೆಸರುಗದ್ದೆ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ವಿನಾಯಕ ಗೆಳೆಯರ ಬಳಗ ಕುಂಬ್ರ ದ್ವೀತಿಯ ಶ್ರೀರಾಮ ಯುವಕ ಮಂಡಲ ಕಡಬ ರಾಮನಗರ.ಎ., ತೃತೀಯ ಸ್ಥಾನವನ್ನು ಶ್ರೀರಾಮ ಯುವಕ ಮಂಡಲ ಕಡಬ ರಾಮನಗರ ಬಿ, ಚತುರ್ಥ ಶ್ರೀರಾಮ ಕೋಡಿಂಬಾಳ, ಹಾಗೂ ಮಹಿಳೆಯರ ವಿಭಾಗದಲ್ಲಿ ರೆಂಜಿಲಾಡಿ ತಂಡ ಗೋಳಿಯಡ್ಕ, ದ್ವಿತೀಯ ನೂಜಿಶ್ರೀ ಯಶೋಧ ಬಳಗ, ಹಾಗೂ ತುಳುನಾಡಿನ ಪ್ರಸಿದ್ಧ ಅಪ್ಪಂಗಾಯಿ -ತಪ್ಪಂಗಾಯಿ ಸ್ಪರ್ಧೆಯಲ್ಲಿ ಮೋಹನ ಹಳೆನೂಜಿ ವಿಜೇತರಾದರು.