(ನ್ಯೂಸ್ ಕಡಬ) newskadaba.com ಕಡಬ, ಅ.17. ಇಲ್ಲಿಯ ಅಂಬೇಡ್ಕರ್ ಭವನವನ್ನು ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ರಾಜಕೀಯ ಪಕ್ಷಗಳ ಸಭೆ ಸಮಾರಂಭಗಳಿಗೆ ನೀಡಿ ದುರುಪಯೋಗ ಪಡಿಸಿಕೊಳ್ಳುವ ಬಗ್ಗೆ ದಲಿತ ಸಂಘರ್ಷ ಸಮಿತಿ ವತಿಯಿಂದ ಕಡಬ ಗ್ರಾ.ಪಂ.ಅಧ್ಯಕ್ಷರ ಮುಖಾಂತರ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ಸಲ್ಲಿಸಲಾಯಿತು.
ಅಂಬೇಡ್ಕರ್ ಭವನವನ್ನು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಆದೇಶದಂತೆ ದಲಿತ ವರ್ಗದವರಿಗೆ ಸಭೆ ನಡೆಸಲು ಮತ್ತು ಸರಕಾರಿ ಕಾರ್ಯಕ್ರಮಗಳಿಗೆ ಮಾತ್ರ ಬಳಸಲು ಅವಕಾಶವಿದ್ದು ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಚೆನ್ನಪ್ಪ ಗೌಡ ಕಜೆಮೂಲೆಯವರು ರಾಜಕೀಯ ಪಕ್ಷಗಳ ಸಭೆಯನ್ನು ನಡೆಸಲು ಅನುಮತಿ ನೀಡುತ್ತಿದ್ದಾರೆ. ಈ ಬಗ್ಗೆ ವಿಚಾರಿಸಿದರೆ ಸಮಂಜಸ ಉತ್ತರ ನೀಡದೆ ತಮ್ಮ ಬೇಜವಾಬ್ದಾರಿಯನ್ನು ತೋರ್ಪಡಿಸುತ್ತಿದ್ದು ಈ ಬಗ್ಗೆ ತಾಲೂಕು ಪಂಚಾಯತ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ದಲಿತ ಸಂ.ಸಮಿತಿ ಜಿಲ್ಲಾ ಪ್ರತಿನಿಧಿ ಗಿರೀಶ್ ಕುಟ್ರುಪ್ಪಾಡಿ, ತಾಲೂಕು ಮಹಿಳಾ ಸಂಚಾಲಕಿ ಸುಂದರಿ ಕಲ್ಲುಗುಡ್ಡೆ, ದಲಿತ ಮುಖಂಡರಾದ ವಸಂತ ಕುಬಲಾಡಿ, ರಾಜೇಶ್ ನಿಡ್ಡೊ, ಶೋಭಾ ದೋಂತಿಲಡ್ಕ, ಪಾರ್ವತಿ ಕೋಡಿಂಬಾಳ, ಶೇಖರ ಮರುವಂತಿಲ, ಕೇಶವ ಕೋಡಿಂಬಾಳ, ಉಮೇಶ್ ಕೋಡಿಂಬಾಳ, ಸುಂದರ ಕುತ್ಯಾಡಿ, ಸತೀಶ್ ದೋಂತಿಲಡ್ಕ, ಕುಶಲ ದೋಂತಿಲಡ್ಕ, ವಿಜಯ ದೋಂತಿಲಡ್ಕ, ಮೊದಲಾದವರು ಉಪಸ್ಥಿತರಿದ್ದರು.
ಗ್ರಾ.ಪಂ.ನಲ್ಲಿ ಮೊದಲಿನಿಂದಲೂ ಆಡಳಿತ ಮಂಡಳಿ ತೀರ್ಮಾನದಂತೆ ಅಂಬೇಡ್ಕರ್ ಭವನವನ್ನು ವಿವಿಧ ರಾಜಕೀಯ ಪಕ್ಷಗಳ ಕಾರ್ಯಕ್ರಮ ಸೇರಿದಂತೆ ಇತರೇ ಕಾರ್ಯಕ್ರಮಗಳಿಗೆ ನೀಡಲಾಗುತ್ತಿದ್ದು ನಾವು ಅದನ್ನೇ ಅನುಸರಿಸುತ್ತಿದ್ದೇವೆ. ಈ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳಿಂದ ಯಾವುದೇ ರಾಜಕೀಯ ಕಾರ್ಯಕ್ರಮಗಳಿಗೆ ನೀಡದಂತೆ ಆದೇಶ ಬಂದಿರುವುದಿಲ್ಲ. ಆದೇಶ ಬಂದರೆ ನಾವು ಮುಂದಕ್ಕೆ ನೀಡದಂತೆ ಕ್ರಮಕೈಗೊಳ್ಳಬಹುದು ಎಂದು ಕಡಬ ಗ್ರಾ.ಪಂ. ಪಂಚಾಯತ್ ಅಭಿವೃದ್ದಿ ಅಧಿಕಾರಿ ಚೆನ್ನಪ್ಪ ಗೌಡ ತಿಳಿಸಿದರು.