(ನ್ಯೂಸ್ ಕಡಬ) newskadaba.com ಕಡಬ, ಅ.17. ಜ್ಯಾತತೀತ ನಿಲುವಿನೊಂದಿಗೆ ದಲಿತರನ್ನು ಉದ್ಧಾರ ಮಾಡುತ್ತಾ ಬಂದಿರುವ ಕಾಂಗ್ರೆಸ್ ಈಗಿನ ಜಿಲ್ಲಾ ಉಸ್ತುವಾರಿ ಸಚಿವರಂತಹ ದಲಿತ ವಿರೋಧಿ ನಾಯಕರಿಂದ ದೀನ ದಲಿತ ಕಡೆಗಣನೆ ನಡೆಯುತ್ತಿದೆ. ಡಿ.ಸಿ.ಮನ್ನಾ ಭೂಮಿಯಲ್ಲಿ ಕೂಡ ಅನ್ಯಾಯ ಮಾಡುತ್ತಿರುವ ಕಾಂಗ್ರೆಸ್ ನಾಯಕರ ಬಗ್ಗೆ ದಲಿತರು ಎಚ್ಚರವಾಗಬೇಕಾಗಿದೆ ಎಂದು ದಲಿತ್ ಸೇವಾ ಸಮಿತಿ ತಾಲೂಕು ಅಧ್ಯಕ್ಷ ರಾಜು ಹೊಸ್ಮಠ ಹೇಳಿದ್ದಾರೆ.
ಅವರು ಅಲಂಕಾರು ರೈತ ಭವನದಲ್ಲಿ ಭಾನುವಾರ ನಡೆದ ದಲಿತ್ ಸೇವಾ ಸಮಿತಿ ಮಾಸಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ಅಲಂಕಾರು ಗ್ರಾಮದಲ್ಲಿ 62ಎಕ್ರೆ ಡಿ.ಸಿ. ಮನ್ನಾ ಭೂಮಿಯಿದೆ. ಈ ಭೂಮಿಯನ್ನು ಭೂ ರಹಿತ ದಲಿತ ಕುಟುಂಬಗಳಿಗೆ ಹಂಚುವುದಲ್ಲದೆ ಡಿ.ಸಿ. ಮನ್ನಾ ಭೂಮಿ ಆತಿಕ್ರಮಿಸಲ್ಪಟ್ಟಿದೆ ಎಂದು ದೃಡಿಕರಿಸಲು ಸರ್ವೆ ಇಲಾಖೆಯಿಂದ ತಕ್ಷಣ ಅಳತೆ ಮಾಡಿಸಿ ದಲಿತರಿಗೆ ನೀಡುವ ಬಗ್ಗೆ ಜಿಲ್ಲಾಧಿಕಾರಿಗಳು ತುರ್ತು ಕ್ರಮ ಕೈ ಗೊಳ್ಳಬೇಕಾಗಿದೆ. ಸ್ವಾತಂತ್ರ್ಯ ನಂತರ ಡಾ. ಬಾಬಾಸಾಹೇಬ್ ಅಂಬೇಡ್ಕರ್ರವರ ಸಂವಿಧಾನ ಬದ್ಧ ಕಾನೂನಿನ ಅಡಿಯಲ್ಲಿ ದಲಿತರಿಗೆ ಎಲ್ಲಾ ರೀತಿಯ ಸಕಲ ಸೌಕರ್ಯಗಳನ್ನು ಒದಗಿಸುತ್ತ ಬಂದಿರುವ ಕಾಂಗ್ರೆಸ್ ಪಕ್ಷದ ಈಗಿನ ಈ ಜಿಲ್ಲೆಯ ದಲಿತ ವಿರೋಧಿ ನಾಯಕರಿಂದ ಬಡ ವರ್ಗದ ದೀನ ದಲಿತರಾದ ನಾವು ಸೌಲಭ್ಯಗಳಿಂದ ವಂಚಿತರಾಗಿದ್ದು ಇದಕ್ಕೆ ಸಾಕ್ಷಿ ಎಂಬಂತೆ ಕೆಲವು ದಿನಗಳ ಹಿಂದೆ ಬಿ,ಸಿ.ರೋಡ್ ಮಿನಿ ವಿಧಾನ ಸೌಧದ ಎದುರು ನಡೆದ ಉಪವಾಸ ಸತ್ಯಾಗ್ರಹದಲ್ಲಿ ವಿವಿಧ ಪಕ್ಷಗಳ ರಾಜಕೀಯ ನಾಯಕರು ನಮ್ಮ ಕಷ್ಟವನ್ನು ಪರಿಗಣಿಸಿ ಸಮಾಧನದ ಮಾತುಗಳನ್ನಾಡಿ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಚರ್ಚಿಸುವುದಾಗಿ ಹೇಳಿದ್ದರೂ ಒಬ್ಬ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ನಾಯಕನಾಗಿ ಈ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ರಮಾನಾಥ ರೈಯವರು ಸತ್ಯಾಗ್ರಹದ ಬಳಿಯಿಂದಲೇ ತೆರಳಿದರೂ ಸೌಜನ್ಯಕ್ಕಾದರೂ ನಮ್ಮನ್ನು ಮಾತನಾಡಿಸದೇ ಇರುವುದು ದಲಿತರ ಬಗ್ಗೆ ಅವರಿಗೆ ಎಷ್ಟು ಕಾಳಜಿ ಇದೆ ಎಂಬುದನ್ನು ನಾವು ಅರ್ಥೈಸಿಕೊಳ್ಳಬೇಕಾಗಿದೆ.
ತಾಲೂಕು ಡಿ.ಸಿ. ಮನ್ನಾ ಭೂಮಿ ಗುರುತಿಸುವಿಕೆಯ ಟಾಸ್ಕ್‌ಪೋರ್ಸ್ ಸಮಿತಿಯಲ್ಲಿ ಡಿ.ಸಿ.ಮನ್ನಾ ಭೂಮಿಯ ಬಗ್ಗೆ ಸಂಪೂರ್ಣ ಮಾಹಿತಿ ಇರುವ ದಲಿತ ಪರ ಸಂಘಟನೆಗಳ ಮುಖಂಡರನ್ನು ಬಿಟ್ಟು ಒಟ್ಟಿನಲ್ಲಿ ದಲಿತರ ಸಮಿತಿಯಾಗಬೇಕೆಂದು ತಮ್ಮಿಷ್ಟದಂತೆ ಕೆಲವರನ್ನು ಸಮಿತಿಯಲ್ಲಿ ಸೇರಿಸಿ ಅನ್ಯಾಯ ಎಸಗಿರುವುದಲ್ಲದೆ ಮೇಲ್ವಾರ್ಗದವರು ಆಕ್ರಮಿಸಿಕೊಂಡಿರುವ ಡಿ.ಸಿ.ಮನ್ನಾ ಭೂಮಿ ದಲಿತರ ಪಾಲಾಗಬಹುದೆಂದು ಈ ರೀತಿಯ ಕುಟಿಲ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ನಾಯಕರು ದಲಿತರ ಬಗ್ಗೆ ಕಾಳಜಿ ವಹಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಉತ್ತರ ನೀಡಬೇಕಾದೀತು ಎಂದು ಎಚ್ಚರಿಸಿದರು.
ಈ ಸಂದರ್ಭ ಇತ್ತೀಚೆಗೆ ನಿಧನರಾದ ಕು.ನಂದಿನಿ ಮನವಳಿಕೆ ಅವರಿಗೆ ಒಂದು ನಿಮಿಷದ ಮೌನಪ್ರಾರ್ಥನೆ ಸಲ್ಲಿಸಲಾಯಿತು. ಅಲಂಕಾರು ಗ್ರಾಮ ಶಾಖೆಯ ಅಧ್ಯಕ್ಷ ಮೋಹನ ಶರವೂರು ಅಧ್ಯಕ್ಷತೆ ವಹಿಸಿದ್ದರು. ಅಲಂಕಾರು ಗ್ರಾಮ ಶಾಖೆಯ ಗೌರವಾಧ್ಯಕ್ಷ ಬಾಬು ಮರುವಂತಿಲ, ಮುಗೇರ ಯುವ ವೇದಿಕೆ ಅಧ್ಯಕ್ಷ ಕೃಷ್ಣ ಗಾಣಂತಿ, ತಾಲೂಕು ಮಾಜಿ ಗೌರವಾಧ್ಯಕ್ಷ ಶೀನ ಮೂಲೆತ್ತಮಜಲು, ಕಡಬ ಹೋಬಳಿ ಕಾರ್ಯದರ್ಶಿ ಸುರೇಶ್ ತೋಟಂತ್ತಿಲ ಉಪಸ್ಥಿತರಿದ್ದರು. ಅಲಂಕಾರು ಶಾಖಾ ಕಾರ್ಯದರ್ಶಿ ಹರ್ಷಿತ ನಗ್ರಿ ವರದಿ ವಾಚಿಸಿದರು. ಕೇಶವ ಕುಪ್ಲಾಜೆ ಸ್ವಾಗತಿಸಿ ವಂದಿಸಿದರು.