(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.14. ಮಹಾಮಳೆಯಿಂದಾಗಿ ಸಾವು-ನೋವು ಸಂಭವಿಸಿದ ಬೆಂಗಳೂರಿನ ಕೆಲವು ಸ್ಥಳಗಳಿಗೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಪ್ರತ್ಯೇಕವಾಗಿ ಭೇಟಿ ನೀಡಿದರು.
ಸಚಿವರಾದ ರಾಮಲಿಂಗಾರೆಡ್ಡಿ, ಡಿ.ಕೆ. ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಅವರಿಗೆ ಸಾಥ್ ನೀಡಿದರು. ಇನ್ನು ಪ್ರತ್ಯೇಕವಾಗಿ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಸದಾನಂದಗೌಡರು ಲಗ್ಗೆರೆಯಲ್ಲಿ ಕೊಚ್ಚಿ ಹೋದ ಮೃತ ದಂಪತಿ ಮತ್ತು ಅರ್ಚಕ ವಾಸುದೇವ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಭೇಟಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಮೃತ ಕುಟುಂಬಗಳಿಗೆ ಒಂದು ಲಕ್ಷ ಹಾಗೂ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ನೀಡುವುದಾಗಿ ಘೋಷಣೆ ಮಾಡಿದರು.
ಮಳೆ ನೀರಲ್ಲಿ ಕೊಚ್ಚಿ ಹೋದ ಸ್ಥಳಕ್ಕೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ, ಮೃತರ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ವಾಸುದೇವ ಭಟ್ ಅವರ ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನು ಸರ್ಕಾರ ಭರಿಸಲಿದೆ. ಜೊತೆಗೆ ಮೃತರ ಪತ್ನಿಗೆ ಉದ್ಯೋಗ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಈ ಬಾರಿ ಹೆಚ್ಚು ಮಳೆ ಬಂದಿರುವುದು ಇದಕ್ಕೆಲ್ಲಾ ಕಾರಣ. ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ರಾಜಕಾಲುವೆ ಹೂಳು ತೆಗೆಯಲೂ ಬಿಡುವಿಲ್ಲದೇ ಮಳೆ ಸುರಿಯುತ್ತಿರುವುದು ಇದಕ್ಕೆ ಕಾರಣ. ರಾತ್ರಿ ಮಳೆಗೆ ಜೀವ ತೆತ್ತವರ ಬಗ್ಗೆ ಬಹಳ ದುಃಖವಾಗಿದೆ. ಕೂಡಲೇ ಅವರ ಕುಟುಂಬಕ್ಕೆ ಪರಿಹಾರ ಕೊಡುತ್ತೇವೆ ಎಂದರು.