(ನ್ಯೂಸ್ ಕಡಬ) newskadaba.com ನವದೆಹಲಿ, ಅ.14. ಗುರುವಾರ ಕಳುವಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಕಾರು ಉತ್ತರಪ್ರದೇಶದ ಘಾಜಿಯಾಬಾದ್‌ನಲ್ಲಿ ಪತ್ತೆಯಾಗಿದೆ.
ಅಕ್ಟೋಬರ್ 12 ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ರಾಜ್ಯ ಸರ್ಕಾರದ ಸಚಿವಾಲಯದ ಬಳಿ ನಿಲ್ಲಿಸಿದ್ದ ನೀಲಿ ಬಣ್ಣದ ವ್ಯಾಗನಾರ್ ಕಾರನ್ನು ಕಳ್ಳರು ಕದ್ದೊಯ್ದಿದ್ದರು.
ಉತ್ತರಪ್ರದೇಶ ಪೊಲೀಸರು ಕಾರನ್ನು ಪತ್ತೆ ಮಾಡಿ ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದರೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದ್ರೆ ಕಳ್ಳತನಕ್ಕೆ ಸಂಬಂಧಿಸಿದಂತೆ ಯಾವುದೇ ಬಂಧನವಾಗಿಲ್ಲ. ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ಕಳ್ಳನನ್ನು ಪತ್ತೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಳ್ಳನ ಮುಖ ಚಹರೆ ಕಾಣಿಸಿದ್ದು, ಆತನ ಫೋಟೋವನ್ನ ದೆಹಲಿಯ ವಿವಿಧ ಜಿಲ್ಲೆಗಳಲ್ಲಿ ಹಂಚಿದ್ದಾರೆ.
ಕಾರ್ ಕಳ್ಳತನವಾಗಿದ್ದಕ್ಕೆ ಸಿಎಂ ಅರವಿಂದ್ ಕೇಜ್ರಿವಾಲ್ ಶುಕ್ರವಾರದಂದು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಅವರಿಗೆ ಕಾರು ಕಳ್ಳತನವಾಗಿರುವ ಬಗ್ಗೆ ಪತ್ರ ಬರೆದಿದ್ದರು.
ವಿದೇಶಿ ಸ್ನೇಹಿತರೊಬ್ಬರು ಕೇಜ್ರಿವಾಲ್ ಅವರಿಗೆ ಈ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಕೇಜ್ರಿವಾಲ್ ಆಮ್ ಆದ್ಮಿ ಪಕ್ಷ ಕಟ್ಟುವ ಸಂದರ್ಭದಲ್ಲಿ ಮತ್ತು ದೆಹಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಇದೇ ಕಾರಿನಲ್ಲಿ ತೆರಳುತ್ತಿದ್ದರು.