ಬೆಳಕಿನ ಹಬ್ಬ ದೀಪಾವಳಿ ತರದಿರಲಿ ನಿಮ್ಮ ಬಾಳಿಗೆ ಅಂಧಕಾರ ► ಡಾ|| ಮುರಲೀ ಮೋಹನ್ ಚೂಂತಾರು ಅವರ ವಿಶೇಷ ಲೇಖನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.13. ಕಾಲಚಕ್ರ ವೇಗವಾಗಿ ಚಲಿಸುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಮುಗಿದ ದೀಪಾವಳಿ ಪುನಃ ಬಂದೇ ಬಿಟ್ಟಿತು. ದೀಪಾವಳಿ ಎಂದಾಕ್ಷಣ ನಮಗೆ ನೆನಪಾಗುವುದು ಸಾಲು ಸಾಲು ದೀಪಗಳು, ಸಿಡಿಮದ್ದುಗಳು, ರಾಕೆಟ್ಗಳು ಬಾಣ ಬಿರುಸುಗಳು. ಎಲ್ಲೆಲ್ಲೂ ಸಂಭ್ರಮದ ಸಡಗರದ ವಾತಾವರಣ. ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ಹೊಸ ಬಟ್ಟೆ ತೊಟ್ಟು ಸಂಭ್ರಮಿಸುವ ಪರ್ವಕಾಲ. ಜಾತಿ, ಮತ, ಧರ್ಮಗಳ ಬೇಧವಿಲ್ಲದೆ ಚಿಕ್ಕ ಮಕ್ಕಳಿಂದ ಹಿಡಿದು ಎಂಬತ್ತರ ಆಸುಪಾಸಿನ ಮುದುಕರಿಗೂ ಎಲ್ಲಿಲ್ಲದ ಸಂಭ್ರಮ. ಮಕ್ಕಳಿಗೆ ಸುರು ಸುರುಕಡ್ಡಿ ಮತ್ತು ಹೂಕುಂಡದ ಬೆಳಕಿನ ಸುರಿಮಳೆ. ಅಜ್ಜ, ಅಜ್ಜಿಯರಿಗೆ ಮೊಮ್ಮಕ್ಕಳ ಜೊತೆ ಆಡುವ ನಲಿಯುವ ಮತ್ತು ತಮ್ಮ ಬಾಲ್ಯದ ದಿನಗಳ ಚೇಷ್ಠೆಗಳನ್ನು ಪುನಃ ಮೆಲುಕು ಹಾಕುವ ಸುಸಂದರ್ಭ. ಮಧುಮೇಹ ರೋಗವಿದ್ದರೂ ಹಬ್ಬದ ನೆನಪಲ್ಲ ಸಿಹಿತಿಂಡಿಯನ್ನು ಮೆಲ್ಲುವ ಸುವರ್ಣವಕಾಶ. ಪರವಾಗಿಲ್ಲ, ಹೊಗಲಿ ಬಿಡಿ ಹಬ್ಬದ ದಿನ ಒಂದು ಸ್ವೀಟ್ ತಿಂದಲ್ಲಿ ಏನಾಗಲ್ಲ ಬಿಡಿ ಎಂದು ಸಮಜಾಯಿಸಿ ನೀಡುವ ಸೊಸೆಯಂದಿರು ಮತ್ತು ಮಕ್ಕಳು. ಒಟ್ಟಿನಲ್ಲಿ ಊರಿಗೆ ಊರೇ ಸಂಭ್ರಮ ಸಡಗರದಿಂದ ಮಿಂದೇಳುತ್ತಿರುತ್ತದೆ.

ಒಂದು ಅಂದಾಜಿನ ಪ್ರಕಾರ ದೀಪಾವಳಿ  ಸಂದರ್ಭದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಮೌಲ್ಯದ ಸಿಡಿಮದ್ದನ್ನು ಸಿಡಿಯಲಾಗುತ್ತದೆ.  ದೀಪಾವಳಿ ಸಂಭ್ರಮ ಮತ್ತು ಸಂತಸದ ಪ್ರತೀಕವಾಗಿದ್ದರೂ, ಈ ಪಟಾಕಿ, ಸಿಡಿಮದ್ದು ಮತ್ತು ಬಾಣ ಬಿರುಸುಗಳಿಂದ ಆಗುವ ಅನಾಹುತ ಮತ್ತು ದುರಂತಗಳಿಗೆ ಏಣೆಯೇ ಇಲ್ಲ. ಅತಿಯಾದ ಸದ್ದು ಮಾಡುವ ಅಪಾಯಕಾರಿ ಪಟಾಕಿಗಳನ್ನು ಸರಕಾರ ನಿಷೇಧಿಸಿದೆ. ಈ ಸಂಬಂಧವಾಗಿ ಸ್ಪೋಟಕಗಳ ಕಾಯ್ದೆ ಮತ್ತು ನಿಯಮಗಳು ಎಂಬ ಕಾನೂನೇ ಇದ್ದರೂ ಜನರು ಮತ್ತು ವ್ಯಾಪಾರಿಗಳು ಈ ಕಾನೂನನ್ನು ಪರಿಪಾಲಿಸದಿರುವುದು ಬಹುದೊಡ್ಡ ದುರಂತವೇ ಸರಿ. ಸರಕಾರ ಕೂಡ ಈ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಮಾಡದಿರುವುದು ದುರದೃಷ್ಟಕರ ವಿಚಾರವಾಗಿದೆ.

ಉತ್ತಮ ದರ್ಜೆಯ ಗುಣಪಟ್ಟದ ಪಟಾಕಿಗಳು ಮತ್ತು ಸಿಡಿಮದ್ದಿನ ತಯಾರಿಕೆ, ಅವುಗಳ ಸಂಗ್ರಹ, ಅಪಾಯಕಾರಿ ಸಿಡಿಮದ್ದುಗಳನ್ನು ಬಳಸದಿರುವಿಕೆ ಮುಂತಾದ ಕಾನೂನನ್ನು ಯಾರು ಪಾಲಿಸುತ್ತಿಲ್ಲ. ಇದೇ ಕಾರಣದಿಂದಲೇ ವಾತಾವರಣ ಕಲುಷಿತಗೊಳ್ಳುತ್ತಿದೆ. ಶ್ವಾಸಕೋಶ ಸಂಬಂಧಿ ರೋಗಗಳಾದ ಅಸ್ತಮ ಮುಂತಾದ ಚರ್ಮರೋಗಗಳು ಇತ್ಯಾದಿಗಳು ಹಬ್ಬ ಹರಿದಿನಗಳ ಸಂದರ್ಭದಲ್ಲಿ ಉಲ್ಬಣಿಸುತ್ತಿದೆ. ಅದೇ ರೀತಿ ಬಾರೀ ಸದ್ದಿನ ಪಟಾಕಿ ಸಿಡಿಸುವುದರಿಂದ ಉಂಟಾಗುವ ಸದ್ದಿನಿಂದ  ಶ್ರವಣಶಕ್ತಿ ಕುಂದುತ್ತದೆ. ಸಾಕುಪ್ರಾಣಿಗಳು, ಪಕ್ಷಿ ಸಂಕುಲಗಳು ಬೆದರಿ ಹಿಂಸೆಗೊಳಗಾಗುತ್ತದೆ. ಪುಟ್ಟ ಮಕ್ಕಳಿಗೂ ಹಿಂಸೆಯಾಗಬಹುದು ಮತ್ತು ಮಾನಸಿಕವಾಗಿ ಕುಗ್ಗಿ ಹೋಗಬಹುದು. ಮಕ್ಕಳಿಗೆ ತುಂಬಾ ಸದ್ದಿನ ಸಿಡಿಮದ್ದನ್ನು ಸಿಡಿಸಿದಾಗ ಭಯಬೀತರಾಗಬಹುದು. ಮಾನಸಿಕವಾಗಿ ವಿಶೇಷ ಪರಿಣಾಮ ಬೀರಿ ಮಾನಸಿಕ ಸ್ಥೈರ್ಯ ಉಡುಗಿ ಹೋಗಬಹುದು. ಅಜಾಗರೂಕತೆಯಿಂದ ಸಿಡಿಮದ್ದನ್ನು ಬಳಸಿದಲ್ಲಿ ಕೈಕಾಲುಗಳಿಗೆ ಸುಟ್ಟು ಗಾಯಗಳಾಗಬಹುದು, ಕಣ್ಣುಗಳಿಗೆ ಹಾನಿಯಾಗಬಹುದು. ದೇಹದ ಇತರ ಭಾಗಗಳಿಗೂ ಗಾಯವಾಗಬಹುದು. ಬೆಂಕಿಯ ಜೊತೆ ಸರಸ ಯಾವತ್ತೂ ಒಳ್ಳೆಯದಲ್ಲ. ಆ ಕಾರಣಕ್ಕಾಗಿಯೇ ಹಲವಾರು ಮುಂಜಾಗರೂಕತಾ ಕ್ರಮಬನ್ನು ಕಡ್ಡಾಯವಾಗಿ ಪಾಲಿಸಲೇಬೇಕು.

Also Read  ಬಾಕಿ ಹಣಕಾಸು ನಿಮ್ಮ ಕೈ ಸೇರಬೇಕೆ? ಹೀಗೆ ಮಾಡಿ.

ಮುಂಜಾಗರೂಕತೆ ಮತ್ತು ಮುನ್ನೆಚ್ಚರಿಕೆ:

1. ಯಾವತ್ತೂ ಮನೆಯ ಒಳಗೆ ಪಟಾಕಿ ಸಿಡಿಮದ್ದು ಸುಡಲೇಬಾರದು. ನಾಲ್ಕು ಗೋಡೆಗಳ ನಡುವೆ ಪಟಾಕಿಯ ಜೊತೆ ಸರಸ ಯಾವತ್ತೂ ಅಪಾಯಕಾರಿ. ಮನೆಯ ಹೊರಗಡೆ ಬಯಲು ಪ್ರದೇಶದಲ್ಲಿ ಪಟಾಕಿ ಸಿಡಿಸುವುದು ಉತ್ತಮ.

2. ಮಕ್ಕಳು ಪಟಾಕಿ ಸುಡುವಾಗ ಹಿರಿಯರು ಜೊತೆಗೆ ಇರಲೇಬೇಕು. ಯಾವತ್ತೂ ಮಕ್ಕಳ ಮೇಲೆ ಒಂದು ಕಣ್ಣು ಇರಬೇಕು ಮತ್ತು ವಿಶೇಷ ಮುತುವರ್ಜಿ ಮತ್ತು ಕಾಳಜಿ ಇರಿಸಬೇಕು, ಒಮ್ಮೆ ಸಿಡಿಯಲು ಯತ್ನಿಸಿದ ಸಿಡಿಯದೇ ಇದ್ದ ಪಟಾಕಿಯನ್ನು ಪುನಃ ಸಿಡಿಸುವ ಪ್ರಯತ್ನ ಮಾಡಲೇ ಬಾರದು. ಯಾವತ್ತೂ ಉತ್ತಮ ದರ್ಜೆಯ ಗುಣಪಟ್ಟದ ಪಟಾಕಿಯನ್ನೇ ಖರೀದಿಸಿ. ಖರ್ಚು ಹೆಚ್ಚಾದರೂ ಪರವಾಗಿಲ್ಲ. ಅಗ್ಗದ ಬೆಲೆಯ ಕಳಪೆ ಗುಣಮಟ್ಟದ ಸಿಡಿಮದ್ದು ಯಾವತ್ತೂ ಅಪಾಯಕಾರಿ. ಉಚಿತವಾಗಿ ಸಿಕ್ಕಿದ ಕಳಪೆ ದರ್ಜೆಯ ಪಟಾಕಿ ಉಪಯೋಗಿಸಬೇಡಿ.

3. ಮಕ್ಕಳು ಪಟಾಕಿ ಹಚ್ಚುವಾಗ ಪರಸ್ಪರ ಚೇಷ್ಟೆ, ತುಂಟಾಟ ಮತ್ತು ಮಕ್ಕಳಾಟಿಕೆಗೆ ಅವಕಾಶ ನೀಡಬೇಡಿ. ಒಂದು ಕ್ಷಣದ ಮರೆವು ಮತ್ತು ತುಂಟಾಟ ಇನ್ನೊಬಬ್ಬರ ಜೀವಕ್ಕೆ ಅಂಧಕಾರ ತರಲೂ ಬಹುದು. ಮಕ್ಕಳಿಗೆ ಮಕ್ಕಳಿಗಾಗಿ ಮಾಡಿದ ಸಿಡಿಮದ್ದನ್ನು ಮತ್ತು ಪಟಾಕಿಗಳನ್ನು ನೀಡಬೇಕು. ಸುರುಸುರು ಕಡ್ಡಿ, ಹೂಕುಂಡ, ಭೂಚಕ್ರ, ಗುಬ್ಬಿ ಪಟಾಕಿ ಇತ್ಯಾದಿ ಕಡಿಮೆ ಸದ್ದಿನ ಮತ್ತು ಕಡಿಮೆ ಅಪಾಯವಿರುವ ಪಟಾಕಿಗಳನ್ನು ನೀಡಬೇಕು. ಅಪಾಯಕಾರಿ ಸಿಡಿಮದ್ದನ್ನು ಮಕ್ಕಳಿಂದ ದೂರವಿಡಬೇಕು.

4. ಪಟಾಕಿ ಸಿಡಿಸುವುದು ಧೈಯದ ಸಂಕೇತವಲ್ಲ. ಸಿಡಿಯುವ ಪಟಾಕಿಗಳನ್ನು ಕೈಯಲ್ಲಿ ಹೊತ್ತಿಸಬಾರದು.  ಮಕ್ಕಳು ಇದನ್ನು ಧೈರ್ಯದ ಸಂಕೇತವೆಂದು ಭಾವಿಸುತ್ತಾರೆ ಮತ್ತು ಇತರ ಮಕ್ಕಳ ಮುಂದೆ ಮೊಂಡು ಧೈರ್ಯ ತೋರಿಸಲು ಹೋಗಿ ಅಪಾಯವನ್ನು ಆಹ್ವಾನಿಸುತ್ತಾರೆ. ಇದರ ಅಪಾಯ ಮತ್ತು ತೊಂದೆರೆಗಳ ಬಗ್ಗೆ ಹೆತ್ತವರು ತಿಳಿ ಹೇಳಬೇಕು.

5. ಹೂಕುಂಡ, ಭೂಚಕ್ರ ಮುಂತಾದವುಗಳನ್ನು ಕೆಳಗಿ ಬಾಗಿ ಹಚ್ಚುವಾಗ ವಿಶೇಷ ಗಮನವಿರಲಿ. ಸಿಡಿಯದ ಪಟಾಕಿಗಳನ್ನು ಕೈಯಿಂದ ಮುಟ್ಟಲು ಹೋದಾಗ ಹಠಾತ್ ಸಿಡಿಯಲೂ ಬಹುದು. ಸಿಡಿಯದ ಪಟಾಕಿಗಳನ್ನು ಪುನಃ ಬಳಸಲೇ ಬೇಡಿ. ಸುರು ಸುರು ಕಡ್ಡಿ ಹೊತ್ತಿಸುವಾಗ ಹೊರಹೊಮ್ಮುವ ಕಿಡಿಗಳ ಬಗ್ಗೆ ಗಮನವಿರಲಿ. ಬೇರೆ ಮಕ್ಕಳ ದೇಹದ ಮೇಲೆ ಮತ್ತು ಮೈ ಮೇಲೆ ಬೆಂಕಿಯ ಕಿಡಿ ಸಿಡಿದು ಬೀಳದಂತೆ ಎಚ್ಚರವಹಿಸಿ. ಮೈ ಮೇಲೆ ಬಟ್ಟೆ ಧರಿಸಿ, ಮೈ ಮುಚ್ಚಿಕೊಂಡು ಸಿಡಿಮದ್ದನ್ನು ಮತ್ತು  ಪಟಾಕಿಗಳನ್ನು ಹಚ್ಚಬೇಕು. ಹತ್ತಿಯ ಅಥವಾ ಕಾಟನ್ ಬಟ್ಟೆ ಉತ್ತಮ. ನೈಲಾನ್ ಬಟ್ಟೆ ಬಳಸಬಾರದು.

Also Read  ವಶಿಕರಣ ವಿಧಾನ ಅದರ ಪರಿಣಾಮ ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ಮಾಹಿತಿ.

6. ರಾಕೇಟ್ ಪಟಾಕಿ ಹಚ್ಚುವಾಗ ವಿಶೇಷ ಮುನ್ನೆಚ್ಚರಿಕೆ ವಹಿಸಬೇಕು. ಅವು ನೇರವಾಗಿ ಮೇಲ್ಮುಖವಾಗಿ ಹಾರುವಂತಿರಬೇಕು. ಕೈಯಲ್ಲಿ ಹಿಡಿದು ರಾಕೇಟ್ಗೆ ಬೆಂಕಿ ಹಚ್ಚುವುದು ಅತೀ ಅಪಾಯಕಾರಿ ಮತ್ತು ಮುರ್ಖತನದ ಪರಮಾವಧಿ.

7. ಪಟಾಕಿ ಹಚ್ಚುವ ಸಮಯದಲ್ಲಿ ಮಕ್ಕಳು ಜೇಬುಗಳಲ್ಲಿ ಮತ್ತು ಇನ್ನೊಂದು ಕೈಯಲ್ಲಿ ನಾಲ್ಕೈದು ಪಟಾಕಿ ಇಟ್ಟುಕೊಳ್ಳಬಾರದು. ಯಾವುದೇ ಪಟಾಕಿಯ ಕಿಡಿ ತಗಲಿದಲ್ಲಿ ಜೀವಕ್ಕೂ ಸಂಚಕಾರ ಬರಬಹುದು ಒಮ್ಮೆಗೆ ಒಂದೇ ಪಟಾಕಿ ಎಂಬ ನಿಯಮ ಕಡ್ಡಾಯವಾಗಿ ಪಾಲಿಸಸಬೇಕು.

8. ಮಕ್ಕಳು ಮತ್ತು ಹೆತ್ತವರು ಪಟಾಕಿ ಸುಡುವಾಗ ಚಪ್ಪಲಿ ಧರಿಸಲೇಬೇಕು. ಮಕ್ಕಳೂ ಅವಸರದಲ್ಲಿ ಬರಿಗಾಲಲ್ಲಿ ಓಡಾಡುವಾಗ ಭೂಚಕ್ರ, ಸುರುಸುರುಬತ್ತಿ ಮತ್ತು ಹೂಕುಂಡ ಮುಂತಾದವುಗಳು ಸುಟ್ಟು  ಹೋದ ಬಳಿಕವೂ ಬಿಸಿಯಾಗಿರುತ್ತದೆ. ಬರಿಗಾಲಿಗೆ ಬೆಂಕಿ ತಗಲಿ ಸುಟ್ಟು ಗಾಯವಾಗಬಹುದು ಮಕ್ಕಳು ಬಳಸಿದ ಪಟಾಕಿಗಳನ್ನು ಒಂದು ಸುರಕ್ಷಿತ ಮೂಲೆಯಲ್ಲಿ ರಾಶಿ ಹಾಕುವುದು ಉತ್ತಮ. ಅದೇ ರೀತಿ ಪಟಾಕಿ ಹಚ್ಚುವ ಸಮಯದಲ್ಲಿ ಒಂದೆರಡು ಬಕೇಟ್ ನೀರನ್ನು ಇಟ್ಟುಕೊಳ್ಳುವುದು ಅತೀ ಅಗತ್ಯ. ಹಾಗೆಯೇ ಪಟಾಕಿ ಸುಡುವ ಸಮಯದಲ್ಲಿ ಯಾವುದೇ ಕ್ಷಣದಲ್ಲಿ ಅಪಾಯ ಸಂಭವಿಸಬಹುದು. ಆ ಕಾರಣದಿಂದ ಪ್ರಥಮ ಚಿಕಿತ್ಸೆ ಸಾಧನೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಯಾವುದೇ ರೀತಿಯ ನಿರ್ಲಕ್ಷ ಪ್ರಾಣಕ್ಕೆ ಸಂಚಕಾರ ತರಬಹುದು. ಸಾಕಷ್ಟು ಮುಂಜಾಗರಕತೆ ವಹಿಸಿದ್ದಲ್ಲಿ ದೊಡ್ಡ ಅನಾಹುತವನ್ನು ತಡೆಗಟ್ಟಬಹುದು. ಒಟ್ಟಿನಲ್ಲಿ ದೀಪಾವಳಿಯ ಸಂತಸ, ಸಂಭ್ರಮ ಮತ್ತು ಸುಡುಮದ್ದುಗಳ ಬರಾಟೆಯ ನಡುವೆ ಹೆತ್ತವರು, ಹಿರಿಯರು ತಮ್ಮ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ನಿಭಾಯಿಸಿದ್ದಲ್ಲಿ ಬೆಳಕಿನ ಹಬ್ಬ ದೀಪಾವಳಿ ಎಲ್ಲರ ಬದುಕಿಗೂ ಬೆಳಕಿನ ಸಿಂಚನ ನೀಡಬಹುದು. ಇಲ್ಲವಾದಲ್ಲಿ ಬೆಳಕಿನ ಹಬ್ಬ ಕೆಲವರ ಬಾಳಿಗೆ ಶಾಶ್ವತ ಅಂಧಕಾರವನ್ನು ತರಲೂಬಹುದು ಎಂಬ ಕಟು ಸತ್ಯದ ಅರಿವು ಎಲ್ಲರಿಗೂ ಇದ್ದಲ್ಲಿ ದೀಪಾವಳಿಯ ಆಚರಣೆ ಹೆಚ್ಚು ಮೌಲ್ಯಪುರ್ಣವಾಗಬಹುದು.

ದೀಪಾವಳಿ ಎನ್ನುವುದು ಬರೀ ಹೊಸಬಟ್ಟೆ, ಹಬ್ಬದೂಟ ಮತ್ತು ಸುಡು ಮದ್ದಿನ ಆರ್ಭಟಕ್ಕೆ ಸೀಮಿತವಾಗಬಾರದು. ದೀಪಾವಳಿ ಆಚರಣೆ ಎನ್ನುವುದು ಶ್ರೀಮಂತಿಕೆ ಮತ್ತು ದೊಡ್ಡತನದ ಪ್ರದರ್ಶನಕ್ಕೆ ವೇದಿಕೆಯಾಗಬಾರದು. ಶರತ್ ಋತುವಿನ ಮಧ್ಯಭಾಗದಲ್ಲಿ ಬರುವ ದೀಪಾವಳಿ ಸಡಗರ ಸಂಭ್ರಮ ಮತ್ತು ಸಂತಸದ ಪ್ರತೀಕವಾಗಿರುತ್ತದೆ. ಮಳೆ ಮುಗಿದು ಮೋಡ ಚದುರಿ  ತಿಳಿಯಾಗಿ, ಮುಗಿಲಾಗಿ ಮಾರ್ಪಾಡಾಗಿ ನೆಲ ಹಸಿಯಾಗಿ, ಭೂತಾಯಿ ಹಸಿರಿನಿಂದ ಕಂಗೊಳಿಸಿರುತ್ತಾಳೆ. ಇದು ಸಮೃದ್ಧಿಯ ಸಂದೇಶ ಮತ್ತು ಸಂಕೇತ. ಈ ಶುಭಗಳಿಗೆಯಲ್ಲಿ ಮನೆಮಂದಿಯೆಲ್ಲಾ ಒಟ್ಟು ಸೇರಿ ಊರ ಕೇರಿನ ಜನರೆಲ್ಲಾ ಒಂದಾಗಿ ಜಾತಿ ಮತ ಧರ್ಮದ ಬೇಧವಿಲ್ಲದೇ ವಿಶ್ವ ಭಾತೃತ್ವವನ್ನು ಸಾರುವ ಮಾನವೀಯತೆಯ ಪ್ರತೀಕವಾಗಬೇಕೇ ಹೊರತು, ಒಣ ಪ್ರತಿಷ್ಠೆ ಮತ್ತು ಆಡಂಬರದ ಧ್ಯೋತಕವಾಗಬಾರದು. ಹಾಗಾದಲ್ಲಿ ಮಾತ್ರ ದೀಪಾವಳಿಯ ಆಚರಣೆಗೆ ಹೆಚ್ಚು ಮೌಲ್ಯ ಬಂದೀತು ಮತ್ತು ಅರ್ಥಪೂರ್ಣವಾಗಬಹುದು.

Also Read  ಆಕರ್ಷಣೆ ಮತ್ತು ನಿರಾಸಕ್ತಿಗೆ ತಾಂತ್ರಿಕ್ ಪರಿಹಾರ

ಡಾ|| ಮುರಲೀ ಮೋಹನ್ ಚೂಂತಾರು

ಸುರಕ್ಷಾದಂತ ಚಿಕಿತ್ಸಾಲಯ

 ಹೊಸಂಗಡಿ – 671 323

 ಮೊ : 09845135787

error: Content is protected !!
Scroll to Top