ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಸಂಭ್ರಮ ➤ ಭಕ್ತರಿಂದ ಉರುಳುಸೇವೆ ಪ್ರಾರಂಭ

(ನ್ಯೂಸ್ ಕಡಬ) newskadaba.com ಶ್ರೀ ಸುಬ್ರಹ್ಮಣ್ಯ, ಡಿ.17: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಲ್ಲಿಸುವ ವಿಶಿಷ್ಠ ಸೇವೆಯಲ್ಲೊಂದಾದ ಬೀದಿ ಉರುಳು ಸೇವೆಯು ಸುಬ್ರಹ್ಮಣ್ಯದಲ್ಲಿ ಸೋಮವಾರ ರಾತ್ರಿ ಲಕ್ಷದೀಪೋತ್ಸವದ ರಥೋತ್ಸವದ ಬಳಿಕ ಭಕ್ತರು ಆರಂಭಿಸಿದರು. ಮಂಗಳವಾರ ಮುಂಜಾನೆ ಮತ್ತು ಸಂಜೆ ಕೆಲವು ಭಕ್ತರು ಸೇವೆ ನೆರವೇರಿಸಿದರು.


ಜಾತ್ರೋತ್ಸವದ ಪ್ರಧಾನ ದಿನವಾದ ಚೌತಿ, ಪಂಚಮಿಯಂದು ಅಧಿಕ ಸಂಖ್ಯೆಯಲ್ಲಿ ಭಕ್ತರು ಈ ಸೇವೆ ನೆರವೇರಿಸುತ್ತಾರೆ. ಕುಮಾರಧಾರ ನದಿಯಲ್ಲಿ ಸ್ನಾನ ಮಾಡಿ ಅಲ್ಲಿಂದ ರಾಜರಸ್ತೆ, ರಥಬೀದಿಯಲ್ಲಿ ಉರುಳಿಕೊಂಡು ದೇವಳಕ್ಕೆ ಬಂದು ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕಿ ಮೂಡು ಬಾಗಿಲಿನಲ್ಲಿಹೊರ ಹೋಗಿ ಎದುರಿನ ದರ್ಪಣ ತೀರ್ಥ ನದಿಯಲ್ಲಿ ಸ್ನಾನ ಮಾಡಿ ಬಂದು ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಈ ಸೇವೆಗೆ ಯಾವುದೇ ರಶೀದಿ ಇಲ್ಲದಿದ್ದರೂ ಭಕ್ತರಿಗೆ ದೇವಳದಿಂದ ಸಕಲ ಅನುಕೂಲತೆಗಳನ್ನು ಮಾಡಲಾಗಿದೆ.ಈ ಬಾರಿ ಉರುಳು ಸೇವೆ ಮಾಡುವ ಭಕ್ತರಿಗೆ ಪ್ರತ್ಯೇಕ ಪಥದ ವ್ಯವಸ್ಥೆ ಮಾಡಲಾಗಿದೆ.ಕುಮಾರಧಾರದಿಂದ ಚತುಷ್ಪಥ ಕಾಂಕ್ರೀಟ್‌ ರಸ್ತೆ ನಿರ್ಮಿತವಾಗಿರುವ ಕಾರಣ ಇದರಲ್ಲಿ ಒಂದು ಭಾಗವನ್ನು ಉರುಳು ಸೇವೆಗಾಗಿಯೇ ಈ ಬಾರಿ ವ್ಯವಸ್ಥೆಗೊಳಿಸಲಾಗಿದೆ. ಇದರಲ್ಲಿ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಅಲ್ಲದೆ ರಸ್ತೆಯ ಉದ್ದಕ್ಕೂ ಅಲ್ಲಲ್ಲಿ ಸೂಚನಾ ಫಲಕಗಳನ್ನು ವ್ಯವಸ್ಥೆ ಮಾಡಲಾಗಿದೆ. ಸೋಮವಾರದಿಂದ ಮುಂದಿನ ಆದಿತ್ಯವಾರದ ತನಕ ಕುಮಾರಧಾರದಿಂದ ಕುಕ್ಕೆಯ ತನಕ ವಿದ್ಯುತ್‌ ಸೌಕರ್ಯವನ್ನು ವ್ಯವಸ್ಥೆಗೊಳಿಸಲಾಗಿದೆ.

Also Read  2 ಸೆಂ.ಮೀ ಅಗಲದ ಬಾಟಲ್ ಕ್ಯಾಪ್ ನುಂಗಿದ ಮಗು..!

ಅಲ್ಲದೆ ಶ್ರೀ ದೇವಳದಿಂದ ಪ್ರತಿನಿತ್ಯ ರಸ್ತೆಯನ್ನು ಗುಡಿಸಿ ಸ್ವಚ್ಚ ಮಾಡಿ ರಸ್ತೆಯಲ್ಲಿನ ದೂಳು ತೆಗೆಯುವ ಕಾರ್ಯವು ನಡೆಯುತ್ತಿದೆ.ಭಕ್ತರು ಸಂಜೆ 5 ಗಂಟೆಯಿಂದ ಬೆಳಗ್ಗೆ 6 ಗಂಟೆಯ ಒಳಗೆ ಸೇವೆಯನ್ನು ಆರಂಭಿಸಿ ಸಹಕರಿಸಬೇಕು. ಆದಷ್ಟು ಸಂಜೆ, ರಾತ್ರಿ ಮತ್ತು ಮುಂಜಾನೆ ವೇಳೆ ಸೇವೆಯನ್ನು ಕುಮಾರಧಾರೆಯಿಂದ ಆರಂಭಿಸಬೇಕು ಎಂದು ಶ್ರೀ ದೇವಳದ ಆಡಳಿತಾಧಿಕಾರಿಗಳು ಸೇವಾರ್ಥಿಗಳಲ್ಲಿ ವಿನಂತಿಸಿದ್ದಾರೆ.ಅದರಂತೆ ಉರುಳು ಸೇವೆಯೂ ನಡೆಯುತ್ತಿದೆ.

error: Content is protected !!
Scroll to Top