ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣ ಕಲ್ಪಿಸಿ ➤ ಕೆ. ಜಯಪ್ರಕಾಶ್ ಹೆಗ್ಡೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.17. ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣವನ್ನು ಕಲ್ಪಿಸಿ ಉತ್ತಮ ಶಿಕ್ಷಣವಂತರಾಗುವಂತೆ ನೋಡಿಕೊಳ್ಳಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ್ ಹೆಗ್ಡೆ ಅಧಿಕಾರಿಗಳಿಗೆ ಸೂಚಿಸಿದರು. ಅವರು ಇಂದು ನಗರದ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ವಿವಿಧ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾತನಾಡಿದರು.  ಹಾಸ್ಟೆಲ್‍ ಗಳಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದರೊಂದಿಗೆ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡುವಂತೆ ಎಚ್ಚರ ವಹಿಸಬೇಕೆಂದರು.


ವಿದ್ಯಾರ್ಥಿ ನಿಲಯಗಳ ಸುತ್ತಮುತ್ತ ಉತ್ತಮ ಪರಿಸರ ಇರುವಂತೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದ ಅವರು, ನರೇಗಾ ಮತ್ತು ಇತರ ಅನುದಾನಗಳಲ್ಲಿ ಶಾಲಾ ಆವರಣಗಳನ್ನು (ಕಾಂಪೌಂಡ್ ವಾಲ್) ನಿರ್ಮಿಸಲು ಆದ್ಯತೆ ನೀಡಬೇಕೆಂದರು. ಕೊವೀಡ್ ಇರುವ ಹಿನ್ನೆಲೆಯಲ್ಲಿ ಹಾಸ್ಟೆಲ್‍ ಗಳಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಪ್ರತಿದಿನ ಅವರ ಆರೋಗ್ಯದ ಮೇಲೆ ಮೇಲ್ವಿಚಾರಕರು ಎಚ್ಚರ ವಹಿಸಬೇಕು ಎಂದರು. ಜಾತಿ ಪ್ರಮಾಣಪತ್ರ ಕೋರಿ ಅರ್ಜಿ ಸಲ್ಲಿಸಿದಾಗ ಅವುಗಳಲ್ಲಿ ಗೊಂದಲಗಳಿದ್ದ ಸಂದರ್ಭದಲ್ಲಿ ನಿಯಮಾನುಸಾರ ಪರಿಶೀಲಿಸಿ, ಅರ್ಹರಿದ್ದಲ್ಲಿ ಅವರಿಗೆ ಜಾತಿ ಪ್ರಮಾಣಪತ್ರಗಳನ್ನು ವಿಳಂಬವಾಗದಂತೆ ನೀಡಲು ಸೂಚನೆ ನೀಡಿದರು.

Also Read  ಇಂದು ಪುಂಜಾಲಕಟ್ಟೆ ಸಮುದಾಯ ಆರೋಗ್ಯ ಕೇಂದ್ರದ ಶಂಕುಸ್ಥಾಪನೆ


ಯಾವುದೇ ಗಿಡ-ಮರಗಳಿಲ್ಲದ ಜಾಗದಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸವಿರುವ ಜಾಗವನ್ನು ಡೀಮ್ಡ್ ಫೋರೆಸ್ಟ್ ವ್ಯಾಪ್ತಿಯಲ್ಲಿವೆ ಎಂದು ಕೇಳಿ ಬರುತ್ತಿದೆ. ಇವುಗಳನ್ನು ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಿಂದ ಹೊರಗೆ ತರಲು ಕ್ರಮ ವಹಿಸಬೇಕೆಂದು ತಿಳಿಸಿದರು. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಮಾತನಾಡಿ, ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಒದಗಿಸಬೇಕು, ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ಹಾಸ್ಟೆಲ್‍ನಲ್ಲಿರದೆ ಇರುವ ಹಿನ್ನೆಲೆಯಲ್ಲಿ  ಅಲ್ಲಿನ ಆಹಾರ ಪದಾರ್ಥಗಳು ಹಾಳಾಗದಂತೆ ಎಚ್ಚರವಹಿಸಬೇಕು ಎಂದರು.
ಹಾಸ್ಟೆಲ್ ಕಟ್ಟಡಗಳ ನಿರ್ಮಾಣ ಸೇರಿದಂತೆ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲು ತಾಲೂಕುವಾರು ಕ್ರಿಯಾ ಯೋಜನೆಯನ್ನು ರೂಪಿಸಬೇಕೆಂದು ಸಭೆಗೆ ತಿಳಿಸಿದರು. ಸಭೆಯಲ್ಲಿ ಹಿಂದುಳಿದ ಆಯೋಗದ ಸದಸ್ಯ ಕೆ.ಟಿ. ಸುವರ್ಣ, ಅಪರ ಜಿಲ್ಲಾಧಿಕಾರಿ ರೂಪಾ ಎಂ.ಜೆ., ಹಿಂದುಳಿದ ವರ್ಗದ ಕಲ್ಯಾಣಾಧಿಕಾರಿ ಸಚಿನ್ ಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮಚಂದ್ರ ಬಾಯರಿ, ವಾರ್ತಾಧಿಕಾರಿ ಮಂಜುನಾಥ್ ಬಿ., ಹಾಗೂ ತಾಲೂಕಿನ ವಿಸ್ತರಣಾಧಿಕಾರಿಗಳು ಉಪಸ್ಥಿತರಿದ್ದರು.

Also Read  ಗುಂಡ್ಯ: ನಿಯಂತ್ರಣ ತಪ್ಪಿದ ಲಾರಿ ಧರೆಗೆ ಢಿಕ್ಕಿ ➤ ಚಾಲಕ ಮೃತ್ಯು

error: Content is protected !!
Scroll to Top