ಮುಕ್ತ, ನ್ಯಾಯಯುತ ಮತದಾನ ನಡೆಯಬೇಕು ➤ ಉಪವಿಭಾಗಾಧಿಕಾರಿ ಮದನ್ ಮೋಹನ್

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.17. ಚುನಾವಣೆಯ ಸಂದರ್ಭದಲ್ಲಿ  ಮತಗಟ್ಟೆಯ ಅಧಿಕಾರಿಗಳು ಆಯೋಗದ ಸೂಚನೆ, ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಯಾವುದೇ ಚ್ಯುತಿ ಬಾರದಂತೆ ಮುಕ್ತ ಮತ್ತು ನ್ಯಾಯಯುತ, ನಿಷ್ಪಕ್ಷಪಾತ ಮತದಾನವಾಗುವಂತೆ ನೋಡಿಕೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಮದನ್ ಮೋಹನ್ ಹೇಳಿದರು. ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ಚುನಾವಣಾ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯ ಚುನಾವಣಾ ಆಯೋಗವು ಸಿದ್ಧಪಡಿಸಿದ ಗ್ರಾಮ ಪಂಚಾಯಿತಿಗಳ ಚುನಾವಣೆ ಪ್ರಿಸೈಡಿಂಗ್ ಅಧಿಕಾರಿಗಳ ಕೈಪಿಡಿಯನ್ನು ಮತಗಟ್ಟೆಯ ಅಧಿಕಾರಿಗಳು ಸಂಪೂರ್ಣವಾಗಿ ಅರಿತುಕೊಂಡು ಆಯಾ ಕ್ಷೇತ್ರದ ಮತಗಟ್ಟೆಯಲ್ಲಿನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ನಿಷ್ಪಕ್ಷಪಾತ ಮತದಾನವಾಗುವಂತೆ ನೋಡಿಕೊಳ್ಳಬೇಕು ಎಂದರು. ಮತಗಟ್ಟೆಗಳಲ್ಲಿ ಯಾವುದೇ ರೀತಿಯ ಸಮಸ್ಯೆ ಎದುರಾದರೆ ತಕ್ಷಣ ಮೇಲಾಧಿಕಾರಿಗಳ ಅಥವಾ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಿಕೊಂಡು ಮುಂದುವರಿಸಬೇಕು ಎಂದ ಅವರು, ಮತದಾನ ಮಾಡಲು ಜನರುಸರಧಿಯಲ್ಲಿ ನಿಂತಾಗ ಸಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ಯಾನಿಂಗ್ ಮಾಡಬೇಕು ಎಂದರು.

ಮಂಗಳೂರು  ತಾಲೂಕಿನ ತಹಶೀಲ್ದಾರ್ ಗುರುಪ್ರಸಾದ್ ಮಾತನಾಡಿ, ಗ್ರಾಮ ಪಂಚಾಯತ್ ಚುನಾವಣೆ ಸೂಕ್ಷ್ಮ ರೀತಿಯಲ್ಲಿ ಆಗಿರುವುದರಿಂದ ಗೊಂದಲಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಯಾವುದೇ ಹಂತದಲ್ಲಿ ನಿಯಮಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಕೋವಿಡ್ ಸೋಂಕು ಮುಂಜಾಗೃತಾ ಕ್ರಮವಾಗಿ ಆರೋಗ್ಯ ಇಲಾಖೆಯ ಪ್ರಮಾಣಿತ ಮಾರ್ಗಸೂಚಿಯಂತೆ ಅನುಸರಿಸಿಕೊಳ್ಳಬೇಕು. ಮತದಾನ ಮುಗಿಯುವ ಒಂದು ಗಂಟೆಯ ಮುನ್ನ ಕೋವಿಡ್ ಸೋಂಕಿತರಿಗೆ ಮತದಾನ ಮಾಡಲು ಅವಕಾಶವಿದ್ದು, ಇದಕ್ಕೆ ಸಂಬಂಧಪಟ್ಟ ವರದಿಯನ್ನು ಆರೋಗ್ಯ ಇಲಾಖೆಯಿಂದ ಪಡೆದು ಮಸ್ಟರಿಂಗ್ ದಿನದಂದು ನೀಡಲಾಗುತ್ತದೆ ಎಂದರು. ಈ ಹಿಂದೆ ಮಂಗಳೂರು ತಾಲೂಕಿನಲ್ಲಿ ಯಾವುದೇ ಲೋಪವಿಲ್ಲದೆ ಯಶಸ್ವಿಯಾಗಿ ಚುನಾವಣೆ ನಿರ್ವಹಿಸಿದ ಹೆಗ್ಗಳಿಕೆ ಇದ್ದು, ಅದರಂತೆಯ ಈ ಬಾರಿಯು ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು. ಮಾತು ಎಷ್ಟು ಕಡಿಮೆ ಇರುತ್ತದೋ ಅಷ್ಟು ಸೂಕ್ಷ್ಮವಾಗಿ ಕೆಲಸ ನಡೆಯುತ್ತದೆ. ಆದ್ದರಿಂದ ಮಾತು ಕಡಿಮೆ ಮಾಡಿಕೊಳ್ಳಬೇಕೆಂದರು. ಚುನಾವಣೆ ಯಶಸ್ವಿಯಾಗಿ ಮಾಡಿ, ಈಗಾಗಲೇ ದ.ಕ. ಹಾಗೂ ಮಂಗಳೂರಿಗೆ ಯಾವ ಲೋಪವಿಲ್ಲದೇ ಚುನಾವಣೆ ಮಾಡಿದ ಹೆಗ್ಗಳಿಕೆ ಇದೆ ಎಂದು ಹೇಳಿ ಚುನಾವಣೆಗೆ ಸಂಬಂಧಿಸಿದಂತೆ ಮುಖ್ಯವಾದ ಮಾಹಿತಿ ನೀಡಿದರು. ಮತಗಟ್ಟೆಯ ಅಧಿಕಾರಿಗಳು ಮಸ್ಟರಿಂಗ್ ಮತ್ತ್ತು ಡಿಮಸ್ಟರಿಂಗ್ ದಿನದಂದು ಚುನಾವಣೆಗೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳೊಂದಿಗೆ ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಬೇಕು. ಗುರುತು ಮಾಡಲಾದ ಮತ್ತು ಇತರ ಮತದಾರರ ಪಟ್ಟಿಗಳು, ಮತಪೆಟ್ಟಿಗೆಗಳು-1, ಅಳಿಸಲಾಗದ  ಶಾಯಿ, ಮತಪತ್ರಗಳು, ವಿಶಿಷ್ಟ ಗುರುತಿನ ರಬ್ಬರ್ ಮೊಹರು ರಬ್ಬರ್ ಸ್ಯಾಂಪ್ ಇತ್ಯಾದಿಗಳನ್ನು ಮಸ್ಟರಿಂಗ್ ಕೇಂದ್ರದಲ್ಲಿ ಗಮನಿಸಬೇಕು.

Also Read  ಪುತ್ತೂರು: ಕೋಮು ಪ್ರಚೋದನಕಾರಿ ಭಾಷಣ ➤ ಎಸ್ಡಿಪಿಐ ಹಾಗೂ ಸಿಎಫ್ಐ ಮುಖಂಡರ ವಿರುದ್ದ ಪ್ರಕರಣ ದಾಖಲು


ಚುನಾವಣಾ ಪ್ರಕ್ರಿಯೆಯ ತರಬೇತಿಯನ್ನು ಮಂಗಳೂರಿನ ಕರ್ನಾಟಕ ಸರಕಾರಿ ಪಾಲಿಟೆಕ್ನಿಕ್ ಐಇ&ಸಿ ವಿಭಾಗದ ವಿಭಾಗಾಧಿಕಾರಿ ಹಾಗೂ ಉಪನ್ಯಾಸಕ ಸತೀಶ್ ಎಂ. ಹಾಗೂ ಸರ್ಕಾರಿ ಶಿಕ್ಷಕ ಶಿಕ್ಷಣ ವಿದ್ಯಾಲಯದ ಉಪನ್ಯಾಸಕ ಪ್ರಕಾಶ್ ನಡೆಸಿಕೊಟ್ಟರು. ಈ ಸಂಧರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿ’ಸೋಜ, ಕಾವೂರು ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಜಾನ್ ಪಿಂಟೋ ಉಪಸ್ಥಿತರಿದ್ದರು.

Also Read  ಮಾಜಿ ಸೈನಿಕರಿಗೆ ಉದ್ಯೋಗ ಮೇಳ

error: Content is protected !!
Scroll to Top