(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.16: ಕಳೆದ ಮೂರು ವರ್ಷಗಳಿಂದ ಪುತ್ತೂರು ತಾಲೂಕಿನ ವಿವಿಧ ಭಾಗದಲ್ಲಿ ಚಿರತೆ ಕಾಟ ಆರಂಭವಾಗಿದ್ದು, ಜನರನ್ನು ಆತಂಕಿತರನ್ನಾಗಿಸಿದೆ. ಕಳೆದ ವರ್ಷ ಹಳೆನೇರೆಂಕಿ, ವಳಕಡಮ, ಈಶ್ವರಮಂಗಲ ವ್ಯಾಪ್ತಿಯ ಕೆಲ ಭಾಗಗಳಲ್ಲಿ ಚಿರತೆ ಕಾಟ ಜನತೆಯನ್ನು ಕಾಡಿತ್ತು. ಇದೀಗ ಕೋಡಿಂಬಾಡಿಯಲ್ಲೂ ಸಿಸಿ ಕ್ಯಾಮರಾದಲ್ಲಿ ಚಿರತೆ ಕಾಣಿಸಿಕೊಂಡಿದ್ದು ಇಲ್ಲಿನ ಜನತೆ ಭಯಭೀತರಾಗಿದ್ದಾರೆ.
ಕೋಡಿಂಬಾಡಿಯ ಜಿನರಾಜ್ ಜೈನ್ ಅವರ ಮನೆಯ ಬಳಿ ಕಳೆದ ಆದಿತ್ಯವಾರ ರಾತ್ರಿ ಸುಮಾರು 1:45ರ ಸುಮಾರಿಗೆ ಚಿರತೆಯೊಂದು ಓಡಾಟ ನಡೆಸಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಸೋಮವಾರ ನಸುಕಿನ ಜಾವ 1:45ಕ್ಕೆ ಜಿನರಾಜ್ ಜೈನ್ ಅವರ ಮನೆಯ ಮುಂದಿನ ಕಾಂಕ್ರೀಟ್ ರಸ್ತೆಯಲ್ಲಿ ಸಾಧಾರಣ ಗಾತ್ರದ ಚಿರತೆಯೊಂದು ನಡೆದುಕೊಂಡು ಹೋಗಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಭಾಗದ ಕೆಲವು ಮನೆಗಳಲ್ಲಿ ಕೋಳಿ, ಬೆಕ್ಕು, ನಾಯಿಗಳು ಕಾಣೆಯಾಗಿರುವುದು ಚಿರತೆಯ ಕಾರಣದಿಂದ ಎಂಬ ಅಭಿಪ್ರಾಯಗಳು ಜನತೆಯಿಂದ ವ್ಯಕ್ತವಾಗಿವೆ.ಚಿರತೆ ಓಡಾಟ ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಹಿನ್ನಲೆಯಲ್ಲಿ ಪರಿಸರದ ಜನತೆಗೆ ಆತಂಕ ಉಂಟಾಗಿದ್ದು, ಅರಣ್ಯಾಧಿಕಾರಿಗಳು ಚಿರತೆಯನ್ನು ಹಿಡಿಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.