(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.15: ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿ ಡಿಸೆಂಬರ್ 14 ರಿಂದ 20 ರವರೆಗೆ ಸಕಾಲ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ.
ಅಗ್ನಿಶಾಮಕ ಇಲಾಖೆಯಲ್ಲಿ 05 ಸೇವೆಗಳನ್ನು ಸಕಾಲ ವ್ಯಾಪ್ತಿಯಲ್ಲಿ ತಂದಿದ್ದು, ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಈ ಇಲಾಖೆಯಲ್ಲಿ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ. ಹೊಸ ಅರ್ಜಿಗಳನ್ನು ಸಕಾಲದಲ್ಲಿ ಸ್ವೀಕರಿಸಿ ನಿಗದಿತ ಕಾಲಮಿತಿಯಲ್ಲಿ ವಿಲೇವಾರಿ ಮಾಡಲಾಗುವುದು. ಸಪ್ತಾಹದ ಅಂತ್ಯದಲ್ಲಿ ವಿಲೇವಾರಿ ಮಾಡಿರುವ ಅರ್ಜಿಗಳ ಕುರಿತು ಸಕಾಲ ಮಿಷನ್‍ಗೆ ವರದಿ ನೀಡಲಾಗುತ್ತದೆ.
ಅಗ್ನಿಶಾಮಕ ಇಲಾಖೆಯಲ್ಲಿ ಬಹುಮಹಡಿ ಕಟ್ಟಡಗಳಿಗೆ ನಿರ್ಮಾಣ ಪೂರ್ವದಲ್ಲಿ ಅಗ್ನಿಶಾಮಕ ಇಲಾಖೆಯಿಂದ ನೀಡಲಾಗುವ ನಿರಾಕ್ಷೇಪಣಾ ಪ್ರಮಾಣ ಪತ್ರ , ಬಹುಮಹಡಿ ಕಟ್ಟಡಗಳಿಗೆ ನಿರ್ಮಾಣದ ನಂತರದಲ್ಲಿ ಅಗ್ನಿಶಾಮಕ ಇಲಾಖೆಯಿಂದ ನೀಡಲಾಗುವ ಕ್ಲಿಯರೆನ್ಸ್ ಪ್ರಮಾಣ ಪತ್ರ, ಬೆಂಕಿ ಆಕಸ್ಮಿಕದ ತುರ್ತು ಕರೆಗೆ ಪ್ರತಿಕ್ರಿಯೆ, ಅಪಘಾತ, ನೈಸರ್ಗಿಕ ವಿಪತ್ತು, ರಕ್ಷಣಾ ಕಾರ್ಯ ಮತ್ತು ವಿಪತ್ತು ನಿರ್ವಹಣೆಯ ತುರ್ತು ಕರೆಗಳಿಗೆ ಪ್ರತಿಕ್ರಿಯೆ ಮತ್ತು ಪಟಾಕಿಗಳ ಲೈಸನ್ಸ್‍ಗಾಗಿ ನಿರಾಕ್ಷೇಪಣಾ ಪತ್ರವನ್ನು ಸಕಾಲದಡಿಯಲ್ಲಿ ಸಂಯೋಜಿತಗೊಂಡಿರುತ್ತದೆ. ಸಂಯೋಜಿತಗೊಂಡಿರುವ ಸೇವೆಗಳನ್ನು ಸಾರ್ವಜನಿಕರು ವೆಬ್‍ಸೈಟ್ ಇಲ್ಲಿ ಸದುಪಯೋಗ ಪಡೆಯಬಹುದಾಗಿರುತ್ತದೆ. ಎಂದು ಮಂಗಳೂರು ವಲಯ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.