(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.15:ಪೋಷಕರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಹಾಗೂ ಕಡ್ಡಾಯ ಶಿಕ್ಷಣ ಕಾಯ್ದೆಯ ಆಶಯದಂತೆ ಮಕ್ಕಳನ್ನು ಮುಂದಿನ ತರಗತಿಗಳಿಗೆ ಮರು ದಾಖಲಾತಿ ಮಾಡುವುದು ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.
ಪೋಷಕರು ತಮ್ಮ ಮಕ್ಕಳನ್ನು ಮರುದಾಖಲಾತಿ ಮಾಡುವುದರಿಂದ ರಾಜ್ಯದ ಶಾಲೆಗಳಲ್ಲಿ ತರಗತಿವಾರು ಮಕ್ಕಳ ದಾಖಲಾತಿ ಸಂಖ್ಯೆ ಲೆಕ್ಕಕ್ಕೆ ದೊರೆಯಲಿದ್ದು, ಅದು ಮುಂದಿನ ತರಗತಿಗಳಿಗೆ ಮಕ್ಕಳನ್ನು ಉತ್ತೀರ್ಣಗೊಳಿಸಲು ಅನುವಾಗಲಿದೆ. ಮಕ್ಕಳ ಮರು ದಾಖಲಾತಿಗೆ ಎರಡು ಬಾರಿ ಸಮಯ ವಿಸ್ತರಿಸಲಾಗಿತ್ತು. ಆದರೂ ಕೆಲ ಪೋಷಕರು ತಮ್ಮ ಮಕ್ಕಳನ್ನು ಮುಂದಿನ ತರಗತಿಗಳಿಗೆ ಇನ್ನೂ ಮರು ದಾಖಲಾತಿ ಮಾಡದಿರುವುದಕ್ಕೆ ಕೋವಿಡ್ ಸಾಂಕ್ರಾಮಿಕ ಒಂದು ನೆಪವಾಗಬಾರದು ಎಂದು ಹೇಳಿದ್ದಾರೆ.
ಶಾಲಾ ಶುಲ್ಕ ನಿಗದಿ ವಿಚಾರದಲ್ಲಿ ಮಕ್ಕಳ ಪೋಷಕರೊಂದಿಗೆ ಚರ್ಚಿಸಿ ಶಾಲಾ ಸಂಘಟನೆಗಳು ಅವರ ವಿಶ್ವಾಸವನ್ನೂ ಪಡೆದುಕೊಂಡು ಶೀರ್ಘ ಒಂದು ನಿರ್ಧಾರಕ್ಕೆ ಬಂದು ಸರ್ಕಾರಕ್ಕೆ ತಿಳಿಸಿದಲ್ಲಿ ಈ ಸಂಬಂಧ ಶಾಲಾ ಶುಲ್ಕ ನಿಗದಿ ಕುರಿತಂತೆ ಸರ್ಕಾರವು ಒಂದು ನಿರ್ಧಾರಕ್ಕೆ ಬರಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.