(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಡಿ.12: ಹೆಸರಾಂತ ನಾಗಕ್ಷೇತ್ರ, ರಾಜ್ಯದ ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಷಷ್ಠಿ ಜಾತ್ರೋತ್ಸವ ಇಂದಿನಿಂದ ಆರಂಭವಾಗಿದೆ. ಷಷ್ಠಿಯ ಪ್ರಮುಖ ಆಕರ್ಷಣೆಯಾಗಿರುವ ಬ್ರಹ್ಮ ರಥ ಕಟ್ಟುವ ಕೆಲಸ ಈ ಹಿಂದೆಯೇ ಆರಂಭಗೊಂಡಿದೆ.
ಡಿ.11 ರ ಕಳೆದ ದಿನ ಕಾರ್ತಿಕ ಬಹುಳ ಏಕಾದಶಿಯ ದಿನ ಶ್ರೀ ಕ್ಷೇತ್ರದ ಪವಿತ್ರ ಮಹಾಪ್ರಸಾದ ಮೂಲಮೃತ್ತಿಕೆಯನ್ನು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದ ಗರ್ಭಗುಡಿಯಿಂದ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ವೈದಿಕ ವಿಧಿವಿಧಾನಗಳೊಂದಿಗೆ ಮೂಲಪ್ರಸಾದ ತೆಗೆಯುವ ಕಾರ್ಯಕ್ರಮ ನಡೆದಿದೆ. ಷಷ್ಠಿಯ ಪ್ರಾರಂಭದ ಪ್ರಮುಖ ಹಂತವಾದ, ದ್ವಾದಶಿಯ ದಿನವಾದ ಇಂದು ಬೆಳಗ್ಗೆ 8;10 ರ ಶುಭ ಮುಹೂರ್ತದ ಧನುರು ಲಗ್ನದಲ್ಲಿ ಕೊಪ್ಪರಿಗೆ ಏರುವುದರೊಂದಿಗೆ ಕುಕ್ಕೆ ಸುಬ್ರಹ್ಮಣ್ಯದ ಷಷ್ಠಿ ಜಾತ್ರಮಹೋತ್ಸವ ಆರಂಭಗೊಂಡಿದೆ.ಚಂಪಾಷಷ್ಠಿ ಜಾತ್ರೋತ್ಸವದ ಪ್ರಯುಕ್ತ ಡಿ.11ರಿಂದ ಡಿ.26ರಂದು ಕೊಪ್ಪರಿಗೆ ಇಳಿಯುವವರೆಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪಸಂಸ್ಕಾರ ಸೇವೆ ಜರುಗುವುದಿಲ್ಲ. ಡಿ.27ರ ಬಳಿಕ ಸರ್ಪಸಂಸ್ಕಾರ ಸೇವೆ ಆರಂಭವಾಗಲಿದೆ. ಆದರೆ ಜಾತ್ರೋತ್ಸವದ ಸಮಯದಲ್ಲಿ ಇತರ ಸೇವೆಗಳು ಎಂದಿನಂತೆ ನಡೆಯಲಿದೆ.