ಮೂವರ ಅಪಹರಣ, ಇಬ್ಬರ ಬರ್ಬರ ಹತ್ಯೆ ► ಮಳೆಯಿಂದಾಗಿ ಸಿಕ್ಕಿಬಿದ್ದ ಆರೋಪಿಗಳು

(ನ್ಯೂಸ್ ಕಡಬ) newskadaba.com ಚಿಕ್ಕಬಳ್ಳಾಪುರ, ಅ.10. ಬೆಂಗಳೂರು ನಗರದಿಂದ ಮೂವರನ್ನು ಅಪಹರಿಸಿ ಇಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರೋ ಘಟನೆ ಚಿಕ್ಕಬಳ್ಳಾಪುರ  ಜಿಲ್ಲೆಯ ಗೌರಿಬಿದನೂರು ತಾಲೂಕಿನ ಚಿರಟೆಗೆರೆ ಗ್ರಾಮದಲ್ಲಿ ನಡೆದಿದೆ.

ನೂರ್ ಅಹಮದ್ ಹಾಗೂ ಮುಬಷೀರ್ ಕೊಲೆಯಾದ ದುರ್ದೈವಿಗಳು. ಹಣಕಾಸಿನ ವಿಚಾರದ ಸಂಬಂಧದ ಜಗಳವೇ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ. ಜುನೈದ್ ಕೊಲೆಯ ಮೂಲ ಸೂತ್ರಧಾರನಾಗಿದ್ದು ತನ್ನ ಸಹಚರರೊಂದಿಗೆ ನೂರ್ ಅಹಮದ್, ಮುಬಷೀರ್ ಮತ್ತು ಕಾಳು ಎಂಬವರನ್ನು ಬೆಂಗಳೂರು ನಗರದಿಂದ ಅಪಹರಿಸಿ ಕೊಲೆಗೆ ಸಂಚು ರೂಪಿಸಿದ್ದನು.

ಈ ಮೂವರನ್ನು ಅಪಹರಿಸಿದ ಜುನೈದ್ ತಂಡ ಚಿಗಟಗೇರೆ ಗ್ರಾಮದಲ್ಲಿಯ ಸ್ನೇಹಿತ ಆಶ್ರಫ್‍ನ ಫಾರಂನಲ್ಲಿ ಇರಿಸಿದ್ದನು. ಫಾರಂನಲ್ಲಿ ನೂರ್ ಅಹಮದ್, ಮುಬಷೀರ್ ಹಾಗೂ  ಕಾಳು ಎಂಬವರ ಮೇಲೆ  ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿತ್ತು ಪರಿಣಾಮ ಇಬ್ಬರು ಸ್ಥಳದಲ್ಲೆ ಸಾವನಪ್ಪಿದ್ದು, ಕಾಳು ಎಂಬವರ ಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Also Read  ಪ್ರಮುಖ ದೇಗುಲಗಳ ಮೃತ್ತಿಕೆ ಅಯೋಧ್ಯೆಗೆ

ಅಪಹರಣದ ಬಳಿಕ ಮೂವರ ಕುಟುಂಸ್ಥರು ಬೆಂಗಳೂರಿನ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಾರ್ಯಚರಣೆಗೆ ನಡೆಸುತ್ತಿದ್ದ ಪೊಲೀಸರು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸುವ ವೇಳೆಗೆ ದುಷ್ಕರ್ಮಿಗಳು ಕಾರಿನಲ್ಲಿ ಎಸ್ಕೇಪ್ ಆಗಿದ್ದರು. ಸೋಮವಾರ  ಸುರಿದ ಭಾರೀ ಮಳೆಯಿಂದಾಗಿ ಕಾರಿನ ಚಕ್ರಗಳು ಮಣ್ಣಿನಲ್ಲಿ ಹೂತು ಹೋದ ಕಾರಣ ಆರೋಪಿಗಳು ಪೊಲೀಸರ ಅಥಿತಿಯಾಗಿದ್ದಾರೆ.

ಮೂರು ದಿನಗಳ ಹಿಂದೆ ಹಣಕಾಸಿನ ವಿಚಾರದಲ್ಲಿ ಜುನೈದ್ ಮೇಲೆ ಈ ಮೂವರು ಹಲ್ಲೆ ನಡೆಸಿದ್ದರು. ಕುಟುಂಬದವರ ಮುಂದೆಯೇ ಜುನೈದ್‍ನನ್ನು ಅರೆಬೆತ್ತಲೆ ಮಾಡಿ ಹಲ್ಲೆ ನಡೆಸಲಾಗಿತ್ತು. ಹಾಗಾಗಿ ಮನೆಯವರ ಮುಂದೆ ಅವಮಾನಿತನಾದ ಜುನೈದ್ ಮೂವರ ಕೊಲೆಗೆ ಸಂಚು ರೂಪಿಸಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Also Read  ಕರಾವಳಿಯಲ್ಲಿ ಮಳೆಯ ಸಿಂಚನ ➤ ರಾಜ್ಯಕ್ಕೆ ಪ್ರವೇಶಿಸಿದ ಮುಂಗಾರು

ಘಟನೆ ಕುರಿತು ಪೊಲೀಸರು 21 ಜನರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

error: Content is protected !!
Scroll to Top