ಸಿ.ಪಿ.ಐ.ಎಂ ರಾಷ್ಟ್ರೀಯ ಜನಾಂದೋಲನ ಜಾಥಾಕ್ಕೆ ಕಡಬದಲ್ಲಿ ಚಾಲನೆ

(ನ್ಯೂಸ್ ಕಡಬ) newskadaba.com ಕಡಬ,ಅ.9. ಭಾರತ ಕಮ್ಯುನಿಸ್ಟ್‌ ಪಕ್ಷ (ಸಿಪಿಐ) ವತಿಯಿಂದ ಕೇಂದ್ರಸರಕಾರದ ಜನವಿರೋಧಿ ನೀತಿಗಳ ವಿರುದ್ಧ ದ.ಕ. ಹಾಗೂ ಉಡುಪಿ ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ರಾಷ್ಟ್ರೀಯ ಜನಾಂದೋಲನ ಜಾಥಾಕ್ಕೆ ಕಡಬ ಪೇಟೆಯಲ್ಲಿ ಸೋಮವಾರ ಚಾಲನೆ ನೀಡಲಾಯಿತು.

ಜನಾಂದೋಲನ ಜಾಥಾಕ್ಕೆ ಚಾಲನೆ ನೀಡಿದ ಸಿಪಿಐ ದ.ಕ. ಹಾಗೂ ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ಮಾತನಾಡಿ ಬಡವರ ಸೇವಕ ಎಂದು ಹೇಳಿಕೊಂಡು ಅಧಿಕಾರ ಗಿಟ್ಟಿಸಿಕೊಂಡ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಬಡವರ ಬದುಕನ್ನು ಕಸಿದುಕೊಂಡಿದೆ. ಕಪ್ಪುಹಣವನ್ನು ತಂದು ಪ್ರತಿಯೊಬ್ಬರ ಖಾತೆಗೆ ತಲಾ 15ಲಕ್ಷ ಜಮೆ ಮಾಡುತ್ತೇನೆ ಎಂದ ಮೋದಿ ನಯಾಪೈಸೆ ತಂದಿಲ್ಲ. ಅಗತ್ಯ ವಸ್ತುಗಳ ಮೇಲೆ ಬೆಲೆ ಇಳಿಕೆ, ಉದ್ಯೋಗ ಸೃಷ್ಟಿ, ಪೆಟ್ರೋಲ್ ಬೆಲೆ ಇಳಿಕೆಯ ಕುರಿತಾಗಿ ಮೋದಿ ನೀಡಿದ ಭರವಸೆ ಸುಳ್ಳಾಗಿದೆ. ನೋಟ್ ಬ್ಯಾನ್ನಿಂದ ಬಡವರನ್ನು ಆಹಾರಕ್ಕಾಗಿ, ಔಷಧಿಗಾಗಿ ಎಟಿಎಂನಲ್ಲಿ ದಿನಗಟ್ಟಲೆ ಅಲೆಯುವಂತೆ ಮಾಡಿ ಇದೀಗ ಜಿಎಸ್ಟಿ ತಂದು ದೇಶದ ಸುಮಾರು 1.5ಕೋಟಿ ಕಟ್ಟಡ ಕಾರ್ಮಿಕರು ಉದ್ಯೋಗವಿಲ್ಲದೆ ಬೀದಿಗೆ ಬಂದಿದ್ದಾರೆ ಎಂದರು.

Also Read  ಹಿಂದೂ ದೇವರ ನಿಂದನೆ ➤ ಹಿ.ಜಾ.ವೇದಿಕೆಯಿಂದ ವಿಟ್ಲ ಠಾಣೆಗೆ ದೂರು, ಆರೋಪಿಯ ಬಂಧನ

ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಎಚ್.ವಿ.ರಾವ್ ಮಾತನಾಡಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದ ಆರ್ಥಿಕ ವ್ಯವಸ್ಥೆ ಸಂಪೂರ್ಣ ಕುಸಿದಿದ್ದು ಮೋದಿ ಸರ್ಕಾರದ ಹಿರಿಯ ಸಚಿವರುಗಳಾದ ಸುಬ್ರಹ್ಮಣ್ಯ ಸ್ವಾಮಿ, ಯಶವಂತ ಸಿನ್ಹಾರವರೆ ಆರ್ಥಿಕ ವ್ಯವಸ್ಥೆ ಕುಸಿತ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಆದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಮೋದಿಯವರು ಕಳೆದ ಚುನಾವಣೆಗೆ 10 ಸಾವಿರ ಕೋಟಿ ಖರ್ಚು ಮಾಡಿದ್ದಾರೆ ಈ ಹಣವನ್ನು ಉದ್ಯಮಿಗಳಾದ ಅದಾನಿ ಅಂಬಾನಿಗಳು ನೀಡಿದ್ದಾರೆ ಅದರ ಫಲವಾಗಿ ಕೇಂದ್ರ ಸರ್ಕಾರ ಉದ್ಯಮಿಗಳ ಪರವಾಗಿ ನಿಂತಿದ್ದು ಬಡಪಾಯಿ ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರ ಬದುಕು ಶೋಚನೀಯವಾಗಿದೆ. ಈ ಸರಕಾರದ ಜನವಿರೋಧಿ ನೀತಿ ವಿರುದ್ಧ ಸಿಪಿಐ ರಾಷ್ಟ್ರೀಯ ಜನಾಂದೋಲನ ಹಮ್ಮಿಕೊಂಡಿದ್ದು ಜಾಥವು ಕಡಬದಿಂದ ಆರಂಭವಾಗಿ ದ.ಕ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಸಂಚರಿಸಿ ಅ.12ರಂದು ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ಸಮಾಪನಗೊಳ್ಳಲಿದೆ ಎಂದರು.

ಸಭೆಯಲ್ಲಿ ಮಂಗಳೂರು ತಾಲೂಕು ಸಿಪಿಐ ಕಾರ್ಯದರ್ಶಿ ಸೀತರಾಮ ಬೇರಿಂಜ, ಬಂಟ್ವಾಳ ತಾಲೂಕು ಬೀಡಿ ಕಾರ್ಮಿಕರ ಯೂನಿಯನ್ ಕಾರ್ಯದರ್ಶಿ ಸುರೇಶ್ ಬಂಟ್ವಾಳ್, ಸಿಪಿಐ ಜಿಲ್ಲಾ ಮಂಡಳಿ ಸದಸ್ಯ ಕರುಣಾಕರ, ಎಐಟಿಯುಸಿ ಕಾರ್ಯದರ್ಶಿ ರಾಮಣ್ಣ ರೈ ಕಡಬ, ಕಟ್ಟಡ ಕಾರ್ಮಿಕರ ಮಂಗಳೂರು ತಾಲೂಕು ಸಮಿತಿ ಸದಸ್ಯ ತಿಮ್ಮಪ್ಪ ಕೆ., ಮಹಿಳಾ ಮುಖಂಡರಾದ ವನಜಾಕ್ಷಿ, ಕುಸುಮ ವಿಟ್ಲ ಮೊದಲಾದವರು ಉಪಸ್ಥಿತರಿದ್ದರು. ಸುರೇಶ್ ಕುಮಾರ್ ಕ್ರಾಂತಿಗೀತೆ ಹಾಡಿದರು. ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ಬಿ. ಶೇಖರ ಸ್ವಾಗತಿಸಿ, ಎಐಟಿಯುಸಿ ಜತೆ ಕಾರ್ಯದರ್ಶಿ ರಮೇಶ್ ರೈ ವಂದಿಸಿದರು.

error: Content is protected !!
Scroll to Top