ಡಿಸೆಂಬರ್ ನಿಂದ “ಮುಖ್ಯಮಂತ್ರಿ ಅನಿಲ ಭಾಗ್ಯ” ಯೋಜನೆ ಜಾರಿ ► ಯಾರಿಗೆಲ್ಲ ಸಿಗಲಿದೆ ರಾಜ್ಯ ಸರಕಾರದ ಈ ಯೋಜನೆ..??

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.9. ಡಿಸೆಂಬರ್ ತಿಂಗಳಿನಿಂದ ಅನಿಲ ಭಾಗ್ಯ ಯೋಜನೆ ಜಾರಿಗೊಳಿಸಲು ರಾಜ್ಯ ಸರಕಾರ ಮುಂದಾಗಿದೆ. ಕೇಂದ್ರ ಸರ್ಕಾರದ ಉಜ್ವಲ ಯೋಜನೆಯ ಪ್ರಯೋಜನ ಪಡೆದವರನ್ನು ಹೊರತುಪಡಿಸಿ ಉಳಿದೆಲ್ಲಾ ಬಿಪಿಎಲ್ ಕಾರ್ಡುದಾರರು ಅನಿಲ ಭಾಗ್ಯ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಅನಿಲ ಭಾಗ್ಯ ಯೋಜನೆ ಜಾರಿಗೆ ತರುವ ಬಗ್ಗೆ ತೀರ್ಮಾನಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ರಾಜ್ಯದ 10 ಲಕ್ಷ ಬಿಪಿಎಲ್ ಕುಟುಂಬಕ್ಕೆ ಉಚಿತವಾಗಿ ಗ್ಯಾಸ್ ಸಂಪರ್ಕ ನೀಡಲು ಸರ್ಕಾರ ಮುಂದಾಗಿದೆ. ಈ ಯೋಜನೆಯಲ್ಲಿ ಸ್ಟೌವ್, ಕನೆಕ್ಟರ್ ಹಾಗೂ ಮೊದಲ ಎರಡು ಗ್ಯಾಸ್ ಸಿಲಿಂಡರ್ ಸರ್ಕಾರದ ಕಡೆಯಿಂದ ಉಚಿತವಾಗಿ ನೀಡಲಾಗುತ್ತದೆ. ಇದಕ್ಕಾಗಿ 300 ಕೋಟಿ ರೂ. ವ್ಯಯಿಸಲಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ  ಅವರು ಈ ಹಿಂದೆ ತಿಳಿಸಿದ್ದರು.

ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಆರಂಭಿಸಲಿರುವ ಯೋಜನೆಗೆ `ಮುಖ್ಯಮಂತ್ರಿ ಅನಿಲ ಭಾಗ್ಯ’ ಎಂದು ಹೆಸರಿಡಲಾಗಿದೆ.  ಕೇಂದ್ರ ಸರ್ಕಾರದ `ಉಜ್ವಲ’ ಯೋಜನೆಯಡಿ ಅನಿಲ ಸಂಪರ್ಕ ದೊರೆಯದ ಫಲಾನುಭವಿಗಳಿಗೆ ಅನಿಲ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ಆರಂಭಿಸಲಾಗಿದೆ.

ಕೇಂದ್ರ ಸರ್ಕಾರದ ಉಜ್ವಲದಲ್ಲಿ ಕೇವಲ ಅನಿಲ ಸಂಪರ್ಕವನ್ನು ಮಾತ್ರ ನೀಡಲಾಗುತ್ತದೆ. ಆದರೆ, ರಾಜ್ಯ ಸರ್ಕಾರದ ಯೋಜನೆಯಲ್ಲಿ ಸ್ಟೌ ಕೂಡಾ ವಿತರಣೆಯಾಗಲಿದೆ. ಆದರೆ ಯಾವುದಾದರೂ ಒಂದು ಯೋಜನೆಯಡಿ ಮಾತ್ರ ಸೌಲಭ್ಯ ಪಡೆದುಕೊಳ್ಳಲು ಅವಕಾಶವಿದೆ. ಉಜ್ವಲದಲ್ಲಿ ಸಂಪರ್ಕ ಪಡೆಯದೇ ಇರುವವರು ರಾಜ್ಯ ಸರ್ಕಾರದ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಆಹಾರ ಸಚಿವ ಯುಟಿ ಖಾದರ್ ತಿಳಿಸಿದ್ದರು.

error: Content is protected !!

Join the Group

Join WhatsApp Group