ವಿಧವೆಯರನ್ನು ವಿವಾಹವಾಗುವ ವ್ಯಕ್ತಿಗೆ ಸಿಗಲಿದೆ ► 2 ಲಕ್ಷ ರೂಪಾಯಿ ಪ್ರೋತ್ಸಾಹ ಧನ..!!!

(ನ್ಯೂಸ್ ಕಡಬ) newskadaba.com ಭೋಪಾಲ್, ಅ.9. 45ಕ್ಕಿಂತ ಕಡಿಮೆ ವಯಸ್ಸಿನ ವಿಧವೆಯನ್ನು ಪುನರ್‌ ವಿವಾಹವಾಗುವ ವ್ಯಕ್ತಿಗೆ 2 ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡುವ ಹೊಸ ಯೋಜನೆಯೊಂದನ್ನು ಮಧ್ಯ ಪ್ರದೇಶ ಸರ್ಕಾರ ರೂಪಿಸಿದೆ. ವಿಧವೆಯರ ಬಾಳು ಬಂಗಾರವಾಗಲಿ ಎಂಬ ಉದ್ಧೇಶದೊಂದಿಗೆ ಈ ಯೋಜನೆಯನ್ನು ತರಲಾಗಿದೆ. ಇದು ದೇಶದಲ್ಲಿಯೇ ಮೊದಲ ಪ್ರಯತ್ನವಾಗಿದ್ದು, ಈ ಯೋಜನೆ ಅನುಷ್ಠಾನಗೊಂಡು ಬಳಿಕ ಪ್ರತಿ ವರ್ಷ ಒಂದು ಸಾವಿರ ವಿಧವೆಯರ ಬಾಳು ಬೆಳಗಲಿದೆ ಎಂದು ಸರಕಾರ ವಿಶ್ವಾಸ ವ್ಯಕ್ತಪಡಿಸಿದೆ.

ವಿಧವಾ ಪುನರ್‌ ವಿವಾಹ ಪ್ರೋತ್ಸಾಹಿಸುವ ನೀತಿಯನ್ನು ರಚಿಸುವಂತೆ ಜುಲೈ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರವನ್ನು ಕೇಳಿಕೊಂಡಿದ್ದು, ಮಧ್ಯ ಪ್ರದೇಶ ಸರಕಾರ ಇಂಥದ್ದೊಂದು ಯೋಜನೆ ಜಾರಿಗೊಳಿಸಲು ಮುಂದಾಗುತ್ತಿದೆ. ಈ ಯೋಜನೆ ಅನುಷ್ಠಾನದಿಂದ ಮಧ್ಯ ಪ್ರದೇಶ ಸರಕಾರಕ್ಕೆ ಪ್ರತಿವರ್ಷ 20 ಕೋಟಿ ರೂಪಾಯಿ ಹೊರೆಯಾಗಲಿದೆ. ಕರಡು ಪ್ರತಿ ಪ್ರಕಾರ, 18 ರಿಂದ 45 ವಯಸ್ಸಿನ ವಿಧವೆಯರನ್ನು ವಿವಾಹವಾಗುವ ವ್ಯಕ್ತಿಗೆ 2 ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತದೆ. ಈ ಯೋಜನೆಯ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಕಳುಹಿಸಲು ಸಿದ್ಧವಾಗಿದ್ದು, ನಂತರ ಅದನ್ನು ಕ್ಯಾಬಿನೆಟ್‌ನಲ್ಲಿ ಮಂಡಿಸಲಾಗುತ್ತದೆ. ಮೂರು ತಿಂಗಳಲ್ಲಿ ಯೋಜನೆ ಜಾರಿಗೆ ಬರಲಿದೆ ಎಂದು ಸರಕಾರದ ಅಧಿಕೃತ ಮೂಲಗಳು ತಿಳಿಸಿವೆ.

ಇನ್ನು ಯೋಜನೆ ದುರುಪಯೋಗವಾಗಬಾರದು ಎಂದು ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಇದು ವ್ಯಕ್ತಿಯ ಮೊದಲನೇ ಮದುವೆಯಾಗಿರಬೇಕು, ವಿಧವಾ ವಿವಾಹವನ್ನು ನೋಂದಣಿಗೊಳಿಸುವುದು ಕಡ್ಡಾಯ, ವಿವಾಹ ಸಂಬಂಧ ಗ್ರಾಮ ಪಂಚಾಯತ್ ಮತ್ತು ಸ್ಥಳೀಯ ಇಲಾಖೆ ನೀಡುವ ದಾಖಲೆ ಅರ್ಹವಲ್ಲ ಎಂದು ತಿಳಿಸಿದೆ.

 

error: Content is protected !!

Join the Group

Join WhatsApp Group