(ನ್ಯೂಸ್ ಕಡಬ) newskadaba.com ಕಡಬ,ಅ.7. ಕಡಬ ಹೋಬಳಿ ಮಟ್ಟದ ಮಾಸಿಕ ಜನಸಂಪರ್ಕ ಸಭೆ ಸುಳ್ಯ ಶಾಸಕ ಎಸ್.ಅಂಗಾರರವರ ಅಧ್ಯಕ್ಷತೆಯಲ್ಲಿ ಕಡಬ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ನಡೆಯಿತು.
ನೂಜಿಬಾಳ್ತಿಲ ಗ್ರಾ.ಪಂ.ವ್ಯಾಪ್ತಿಯನ್ನು ಮದ್ಯಮುಕ್ತ ಗ್ರಾಮವನ್ನಾಗಿಸಲು ಗ್ರಾ.ಪಂ.ಮೂಲಕ ನೀಡಿದ ಮನವಿಯನ್ನು ಪುರಸ್ಕರಿಸಿ ಮದ್ಯಮುಕ್ತ ಗ್ರಾಮವನ್ನಾಗಿಸಲು ನಿರ್ಣಯಿಸಿದ ಘಟನೆ,
ಐತ್ತೂರು ಗ್ರಾಮದ ಕೇನ್ಯ ಎಂಬಲ್ಲಿ ಸುಂದರ ನಾಯ್ಕರಿಗೆ 94ಸಿಯಲ್ಲಿ ಹಕ್ಕುಪತ್ರ ನೀಡುವಂತೆ ಆಗ್ರಹ, ಕುಟ್ರುಪ್ಪಾಡಿ ಗ್ರಾಮಸಹಾಯಕ ಹೊನ್ನಪ್ಪ ಗೌಡರನ್ನು ವರ್ಗಾಯಿಸುವಂತೆ ಹಾಗೂ ವರ್ಗಾಯಿಸದಂತೆ ಪರವಿರೋಧ ಚರ್ಚೆ ನಡೆಯಿತಲ್ಲದೆ 94ಸಿ ಹಕ್ಕುಪತ್ರ ವಿತರಿಸುವ ಕಾರ್ಯಕ್ರಮದಲ್ಲಿ ತಾರತಮ್ಯ ನಡೆಸಲಾಗಿದೆ ಎಂದು ತಾ.ಪಂ.ಸದಸ್ಯೆ ಆಶಾಲಕ್ಷ್ಮಣ್ ಗುಂಡ್ಯ ಸಭೆಯ ಮಧ್ಯದಲ್ಲಿಯೇ ಹೊರನಡೆದ ಘಟನೆ ಕಡಬ ಕಂದಾಯ ಇಲಾಖಾ ಜನಸಂಪರ್ಕ ಸಭೆಯಲ್ಲಿ ನಡೆಯಿತು.
ಕಂದಾಯ ಇಲಾಖೆಯ ವತಿಯಿಂದ ನಡೆದ ಸಭೆಯಲ್ಲಿ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ ಸ್ವಾಗತಿಸಿ ಕಳೆದ ಜನಸಂಪರ್ಕ ಸಭೆಯಲ್ಲಿ ನಡೆದ ನಿರ್ಣಯಗಳ ಬಗ್ಗೆ ಮಾತನಾಡಿದ ಸತೀಶ್ ನಾೖಕ್ ಮೇಲಿನಮನೆಯವರು ಐತ್ತೂರು ಗ್ರಾಮದ ನೇಲ್ಯಡ್ಕ ಎಂಬಲ್ಲಿ ಹಲವಾರು ವರ್ಷಗಳಿಂದ ವಾಸ್ತವ್ಯದ ಮನೆ ಕಟ್ಟಿ ವಾಸಿಸುತ್ತಿರುವ ಭೂರಹಿತ ಕುಟುಂಬಸ್ಥರಾದ ಸುಂದರ ನಾಯ್ಕರಿಗೆ 94ಸಿ ಯಲ್ಲಿ ಅರ್ಜಿ ನೀಡಿ ಎಲ್ಲಾ ದಾಖಲೆಗಳನ್ನು ಒದಗಿಸಿದ್ದರು ಕಂದಾಯ ಇಲಾಖೆಯಿಂದ ಹಕ್ಕುಪತ್ರ ನೀಡದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಲ್ಲದೆ ಆಜುಬಾಜುದಾರರಿಗೆ ಹಕ್ಕುಪತ್ರ ನೀಡಿದ್ದು ಇವರಿಗೆ ಮಾತ್ರ ಅನ್ಯಾಯ ಮಾಡಲು ಕಾರಣವೇನು ಎಂದು ಪ್ರಶ್ನಿಸಿದರು. ಈ ಬಗ್ಗೆ ಉತ್ತರಿಸಲು ತಹಶೀಲ್ದಾರವರು ಐತ್ತೂರು ಪಂಚಾಯತ್ ಅಭಿವೃದ್ದಿ ಅಧಿಕಾರಿ ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್ರವರಿಗೆ ಸೂಚಿಸಿದಂತೆ ಅವರು ಸದ್ರಿ ವಿಚಾರದ ಬಗ್ಗೆ ವಿವರಿಸಿ ಐತ್ತೂರು ಗ್ರಾ.ಪಂ.ನ 2017 ಜ.11 ರಂದು ನಡೆದ ಗ್ರಾಮಸಭೆಯಲ್ಲಿ ಸುಂದರ ನಾಯ್ಕರವರ ನಿವೇಶನದ ಬಗ್ಗೆ ಗ್ರಾಮಸ್ಥರಿಂದ ಆಕ್ಷೇಪಣೆ ಬಂದಿರುವುದಲ್ಲದೆ ವಕೀಲರದಿಂದಲೂ ನೋಟಿಸ್ ಬಂದಿರುತ್ತದೆ. ಈ ವಿಚಾರದ ಬಗ್ಗೆ ತಹಶೀಲ್ದಾರರಿಗೆ ವರದಿ ಒಪ್ಪಿಸುತ್ತೇನೆ ಎಂದರು. ಇದಕ್ಕೆ ಆಕ್ಷೇಪಿಸಿ ಮಾತನಾಡಿದ ಕುಟ್ರುಪ್ಪಾಡಿ ಗ್ರಾಮಸ್ಥ ಮ್ಯಾಥ್ಯು ಟಿ.ಎಂ.ರವರು ಈ ವಿಚಾರ ಕಳೆದ ಜನಸಂಪರ್ಕ ಸಭೆಯಲ್ಲಿ ಪ್ರಸ್ತಾಪವಾಗಿದ್ದು ನಿವೇಶನ ರಹಿತರಾಗಿರುವ ಸುಂದರ ನಾಯ್ಕರವರು ಅವರಿಗೆ ವಾಸ್ತವ್ಯವಿರುವ ಜಾಗಕ್ಕೆ 94ಸಿ ಯಲ್ಲಿ ಹಕ್ಕುಪತ್ರ ನೀಡದಿದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಭೆಯಲ್ಲಿ ತಿಳಿಸಿದ್ದರು ಈ ಬಗ್ಗೆ ತಹಶೀಲ್ದಾರ್ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಕೂಡ ಸಮಾಜಾಹಿಷಿಕೆ ನೀಡಿದ್ದರು. ಅಲ್ಲಿ ವಾಸ್ತವ್ಯವಿರುವ ಇತರ ಕುಟುಂಬಗಳಿಗೆ 94ಸಿಯಲ್ಲಿ ಹಕ್ಕುಪತ್ರ ನೀಡಿದ್ದರೂ ಸುಂದರ ನಾಯ್ಕರಿಗೆ ಮಾತ್ರ ನೀಡುವಲ್ಲಿ ಅಭ್ಯಂತರವೇನು ಎಂದು ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ಹಾರಿಸ್ ಕಳಾರರವರು ಅಧಿಕಾರಿಗಳು ಎಲ್ಲರನ್ನೂ ಸಮಾನ ದೃಷ್ಟಿಯಲ್ಲಿ ಕಾಣುವುದರೊಂದಿಗೆ ತಾರತಮ್ಯವಿಲ್ಲದೆ ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸಭೆಕೆಂದು ಆಗ್ರಹಿಸಿದಲ್ಲದೆ ಬಡಪಾಯಿಗಳಿಗೆ ಅನ್ಯಾಯವಾಗುವಂತಹ ಜನಸಂಪರ್ಕ ಸಭೆಯೇ ಬೇಡ ನಿಲ್ಲಿಸಿಬಿಡಿ ಎಂದರು. ಇದಕ್ಕೆ ಆಕ್ರೋಶಗೊಂಡ ತಹಶೀಲ್ದಾರ್ ಜಾನ್ಪ್ರಕಾಶ್ರವರು ಸಭೆ ನಿಲ್ಲಿಸಲು ಹೇಳಿದಂತಹ ಗ್ರಾಮಸ್ಥ ಹಾರಿಸ್ರ ಹೆಸರನ್ನು ವಿಚಾರಿಸಿಕೊಂಡು ಸಮಸ್ಯೆ ಬಗ್ಗೆ ಮಾತನಾಡುವುದನ್ನು ಬಿಟ್ಟು ಸಭೆ ನಿಲ್ಲಿಸುವಂತೆ ಹೇಳಲು ಯಾರ್ರೀ ನೀವು ಎಂದು ಕೇಳಿದರು. ಈ ಮಧ್ಯೆ ಮಾತನಾಡಿದ ಸತೀಶ್ ನಾೖಕ್ರವರು ಕಳೆದ ಒಂದು ತಿಂಗಳಿನಿಂದ ಯಾವುದೇ ಕ್ರಮ ಕೈಗೊಳ್ಳದೆ ಸತಾಯಿಸುವ ನಿಮಗೆ ಇನ್ನು ಎಷ್ಟು ಸಮಯ ಬೇಕು. ಇವರೊಬ್ಬರಿಗೆ ಮಾತ್ರ ಹಕ್ಕುಪತ್ರ ನಿಡಲು ಎಲ್ಲಾ ರೀತಿಯ ಅಡೆತಡೆಗಳು ವಕೀಲರ ನೋಟಿಸ್ ಎಲ್ಲವೂ ಇದೆಯಾದರೆ ಉಳಿದವರಿಗೆ ಯಾವ ವಕೀಲರು ನೋಟಿಸ್ ನೀಡುವುದಿಲ್ಲವೇ, ಇಂತಹ ಉತ್ತರಗಳು ಬೇಕಾಗಿಲ್ಲ. ನೊಂದ ಫಲಾನುಭವಿ ಸುಂದರ ನಾಯ್ಕರಿಗೆ ನ್ಯಾಯ ಒದಗಿಸಿ ಎಂದು ಆಗ್ರಹಿಸಿದರಲ್ಲದೆ ತಾ.ಪಂ.ಸದಸ್ಯೆ ಪಿ.ವೈ ಕುಸುಮಾರನ್ನು ಕೂಡ ಆಗ್ರಹಿಸಿದರು. ಸಮಸ್ಯೆ ಬಗ್ಗೆ ಮಾತನಾಡಿದ ಐತ್ತೂರು ತಾ.ಪಂ.ಸದಸ್ಯೆ ಪಿ.ವೈ ಕುಸುಮಾರವರು ಒಟ್ಟಿನಲ್ಲಿ ಜನಪ್ರತಿನಿಧಿಗಳಾದ ನಾವು ಎಲ್ಲರಿಗೂ ನ್ಯಾಯ ಒದಗಿಸಲು ಮುಂದಾಗುತ್ತಿದ್ದೇವೆ. ಆದರೆ ಅಲ್ಲಿ ಸುಂದರ ನಾಯ್ಕರ ಅರ್ಜಿಗೆ ಆಕ್ಷೇಪಣೆ ಇರುವುದರಿಂದ ಇಂತಹ ಸಮಸ್ಯೆಗಳು ಉದ್ಭವವಾಗಿದೆ. ಇಲ್ಲದಿದ್ದರೆ ಯಾರಿಗೂ ಸರಕಾರಿ ಸೌಲಭ್ಯ ನೀಡಲು ವಿಳಂಬವಾಗುವುದಿಲ್ಲ ಎಂದು ಹೇಳಿದರು. ಇದಕ್ಕೆ ಮತ್ತೇ ಮಾತನಾಡಿದ ಸತೀಶ್ ನಾೖಕ್ ಯಾರೋಬ್ಬರು ಆಕ್ಷೇಪಣೆ ನೀಡಿದರೆ ನಿಜವಾದ ಅರ್ಹ ಫಲಾನುಭವಿಗೆ ಹಕ್ಕುಪತ್ರ ನೀಡಲು ನಿರಾಕರಿಸುವುದು ಸರಿಯೇ ಎಂದು ಪ್ರಶ್ನಿಸಿದರು. ವಿಚಾರಕ್ಕೆ ಸಂಬಂಧಪಟ್ಟಂತೆ ಬಿಳಿನೆಲೆ ತಾ.ಪಂ.ಸದಸ್ಯೆ ಆಶಾಲಕ್ಷ್ಮಣ್ ಗುಂಡ್ಯರವರು ಸರಕಾರದ ಯೋಜನೆಗಳು ಪ್ರತಿಯೊಬ್ಬ ಬಡಪಾಯಿ ನಿರ್ಗತಿಕ ಕುಟುಂಬಗಳಿಗೆ ತಲುಪಬೇಕಾಗಿದ್ದು ಒಂದೇ ಸರ್ವೇ ನಂ.ನಲ್ಲಿ ವಾಸ್ತವ್ಯವಿರುವ ಹಲವರಿಗೆ ಹಕ್ಕುಪತ್ರ ನೀಡಿದ್ದು ಒಬ್ಬರನ್ನು ಅನಾವಶ್ಯಕ ಸತಾಯಿಸುತ್ತಿರುವುದು ಸರಿಯಲ್ಲ. ಕೊಟ್ಟರೆ ಎಲ್ಲರಿಗೂ ಕೊಡಬೇಕು, ಇಲ್ಲದಿದ್ದರೆ ಆ ಸ.ನಂ.ನಲ್ಲಿ ಯಾರಿಗೂ ಹಕ್ಕುಪತ್ರ ಕೊಡುವುದು ಸರಿಯಲ್ಲ ಎಂದರು. ಅರ್ಜಿದಾರ ಸುಂದರ ನಾಯ್ಕ ತನ್ನ ಸಮಸ್ಯೆಯನ್ನು ತೋಡಿಕೊಂಡಿದಲ್ಲದೆ ತಾನು ಹಲವಾರು ವರ್ಷಗಳಿಂದ ಅಲ್ಲಿ ವಾಸ್ತವ್ಯವಿದ್ದು 94ಸಿ ಯಲ್ಲಿ ಎಲ್ಲಾ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ್ದರೂ ಹತ್ತಿರದವರಿಗೆ ಹಕ್ಕುಪತ್ರ ನೀಡಿದ್ದರೂ ನನಗೆ ಮಾತ್ರ ನೀಡದಂತೆ ಗ್ರಾ.ಪಂ.ನವರು ಅಡ್ಡಿಪಡಿಸುತ್ತಿದ್ದು ಅಧಿಕಾರಿಗಳು ಅದನ್ನೇ ನೆಪವಾಗಿಟ್ಟುಕೊಂಡು ವಿಳಂಬ ಮಾಡುತ್ತಿದ್ದಾರೆ. ನನಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು. ಇವರಿಗೆ ಪೂರಕವಾಗಿ ಮಾತನಾಡಿದ ಸತೀಶ್ ನಾೖಕ್ರವರು ಭೂಮಿ ಇಲ್ಲದ ಇವರಿಗೆ ಮಾತ್ರ 94ಸಿ ಯಲ್ಲಿ ಭೂಮಿ ನೀಡಲು ಅಸಾಧ್ಯವಾದರೆ ಅಲ್ಲಿ ಯಾರಿಗೂ ಭೂಮಂಜೂರಾತಿ ಬೇಡ ಎಂದು ನಿರ್ಣಯಿಸಿ ಜಿಲ್ಲಾಧಿಕಾರಿಗಳಿಗೆ ಕಳುಹಿಸೋಣ ಎಂದು ಆಗ್ರಹಿಸಿದರು. ಸಮಸ್ಯೆಗಳ ಬಗ್ಗೆ ಚರ್ಚೆಗಳನ್ನು ಆಲಿಸಿದ ಸಭಾಧ್ಯಕ್ಷತೆಯಲ್ಲಿದ್ದ ಸುಳ್ಯ ಶಾಸಕ ಎಸ್ ಅಂಗಾರವರು ವಿಚಾರವನ್ನು ಗಂಭೀರವಾಗಿ ಪರಿಗಣಿಸಿದಲ್ಲದೆ ಅಧಿಕಾರಿಗಳು ಪ್ರತಿಯೊಬ್ಬರ ಸಮಸ್ಯೆಗಳನ್ನು ಅರಿತುಕೊಂಡು ಕಡತಗಳನ್ನು ಪರಿಶೀಲಿಸಿ ಸರಿಯಾದ ಸೌಲಭ್ಯ ಒದಗಿಸಬೇಕಾಗಿದೆ. ಇದರಲ್ಲಿ ಯಾವುದೇ ತಾರತಮ್ಯ ಬೇಡ ಎಂದರಲ್ಲದೆ ಅಲ್ಲಿಯ ಸಮಸ್ಯೆಯ ಕಡತಗಳನ್ನು ಸಭೆ ಬಳಿಕ ಗಮನಕ್ಕೆ ತರುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಉತ್ತರಿಸಿದ ತಹಶೀಲ್ದಾರ್ ಸಮಸ್ಯೆ ಬಗ್ಗೆ ಸಂಪೂರ್ಣ ಕಡತವನ್ನು ಪರಿಶೀಲಿಸಿ ಸುಂದರ ನಾಯ್ಕರ 94ಸಿ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದರು.
ನೂಜಿಬಾಳ್ತಿಲ ಗ್ರಾ.ಪಂ.ವ್ಯಾಪ್ತಿಯ ನೂಜಿಬಾಳ್ತಿಲ ಹಾಗೂ ರೆಂಜಿಲಾಡಿ ಗ್ರಾಮವನ್ನು ಮದ್ಯಮುಕ್ತ ಗ್ರಾಮವನ್ನಾಗಿಸಬೇಕೆಂದು ನೂಜಿಬಾಳ್ತಿಲ ಗ್ರಾ.ಪಂ.ಮಾಜಿ ಅಧ್ಯಕ್ಷ ವಸಂತ ಪೂಜಾರಿ ಬದಿಬಾಗಿಲು ಆಗ್ರಹಿಸಿದಲ್ಲದಲ್ಲದೆ ಈ ಬಗ್ಗೆ ನೂಜಿಬಾಳ್ತಿಲ ಗ್ರಾ.ಪಂ.ನಲ್ಲಿ ಸಾರ್ವಜನಿಕವಾಗಿ ಎಲ್ಲಾ ಸಂಘ ಸಂಸ್ಥೆಗಳ ಮುಖಾಂತರ ಮನವಿ ನೀಡಿದ್ದು ಮದ್ಯಮುಕ್ತ ಗ್ರಾಮವನ್ನಾಗಿ ಘೋಷಿಸುವಂತೆ ನಿರ್ಣಯ ಕೈಗೊಳ್ಳುವಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೆ ಕಳುಹಿಸಿಕೊಡುವಂತೆ ಮನವಿ ಮಾಡಲಾಗಿದ್ದು ಈ ಬಗ್ಗೆ ಇಂದಿನ ಜನಸಂಪರ್ಕ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿದರು. ಇವರಿಗೆ ಗ್ರಾಮಸ್ಥರಾದ ಕಡಬ ಮುಗೇರ ಯುವ ವೇದಿಕೆ ಅಧ್ಯಕ್ಷ ವಸಂತ ಕುಬಲಾಡಿ ಮಾಜಿ ಸಿಎ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ ಗೌಡ ಹಳೆನೂಜಿ, ಸಿವಿಲ್ ಇಂಜಿನಿಯರ್ ದುರ್ಗಾಪ್ರಸಾದ್ ಕೆ.ಪಿ, ರಾಮಚಂದ್ರ ಎಲುವಾಳೆ, ಕುಶಾಲಪ್ಪ ಗೌಡ ನಡುವಳಿಕೆ, ಆನಂದ ಗೌಡ ಎಲುವಾಳೆ, ಮೋನಪ್ಪ ಗೌಡ ಅರಿಮಜಲು ಮೊದಲಾದವರು ಬೆಂಬಲಿಸಿ ಮಾತನಾಡಿದರು. ಸಭೆಯಲ್ಲಿ ಮದ್ಯಮುಕ್ತ ಗ್ರಾಮವನ್ನಾಗಿಸಲು ಎಲ್ಲರ ತಪ್ಪಾಳೆಯೊಂದಿಗೆ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.
ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆಯಲ್ಲಿ ಮದ್ಯದಂಗಡಿ ಬಂದ್ ಮಾಡಲು ಜಿಲ್ಲಾಧಿಕಾರಿಯವರು ಆಧೇಶಿಸಿದಲ್ಲದೆ ಸರಕಾರಿ ಜಾಗದಲ್ಲಿರುವ ಅನಧಿಕೃತ ಕಟ್ಟಡ ತೆರವುಗೊಳಿಸುವಂತೆ ವಿಭಾಗಾಧಿಕಾರಿಗಳ ಮೂಲಕ ತಹಶೀಲ್ದಾರರಿಗೆ ಆದೇಶಿಸಲಾಗಿದ್ದು ಇನ್ನು ಕಟ್ಟಡ ತೆರವುಗೊಂಡಿರುವುದಿಲ್ಲ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಕಡಬ ಮುಗೇರ ಯುವ ವೇದಿಕೆ ಅಧ್ಯಕ್ಷ ವಸಂತ ಕುಬಲಾಡಿ ಪ್ರಶ್ನಿಸಿದರು. ಈ ಬಗ್ಗೆ ಉತ್ತರಿಸಿದ ತಹಶೀಲ್ದಾರ್ ಜಾನ್ಪ್ರಕಾಶ್ರವರು ಸರಕಾರಿ ಜಾಗದಲ್ಲಿರುವ ಅನಧಿಕೃತ ಕಟ್ಟಡ ತೆರವುಗೊಳಿಸಲು ನೋಟಿಸ್ ನೀಡಿ ತೆರವಿಗೆ ಮುಂದಾಗಿದ್ದಂತೆ ಸಂಬಂಧಪಟ್ಟ ಕಟ್ಟಡ ಮಾಲಕರು ನ್ಯಾಯಾಲಯದಿಂದ ತಾತ್ಕಾಲಿಕ ತಡೆ ಬಂದಿರುವುದರಿಂದ ಮುಂದಿನ ಆದೇಶದವರೆಗೆ ತೆರವಿಗೆ ಅವಕಾಶವಿರುವುದಿಲ್ಲ ಎಂದರು. ಈ ಬಗ್ಗೆ ಮಾತನಾಡಿದ ಗ್ರಾಮಸ್ಥ ಚಂದ್ರಶೇಖರ ಹಳೆನೂಜಿಯವರು ಹಾಗಾದರೆ ಅಧಿಕಾರಿಗಳಿಂದ ಮುಂದಿನ ಕ್ರಮ ಏನು ಎಂದು ಕೇಳಿದರು. ಸಮಸ್ಯೆ ಬಗ್ಗೆ ಉತ್ತರಿಸಿದ ಶಾಸಕ ಅಂಗಾರವರು ತಡೆಯಾಜ್ಞೆ ಬಗ್ಗೆ ನಾವು ತಡೆಯಾಜ್ಞೆ ತೆರವಿಗೆ ಪ್ರಯತ್ನಿಸಬೇಕಾಗಿದೆ ಎಂದರು.
ಕುಟ್ರುಪ್ಪಾಡಿ ಗ್ರಾಮಸಹಾಯಕರನ್ನು ವರ್ಗಾಯಿಸಬೇಕೆಂದು ಕಳೆದ ಜನಸಂಪರ್ಕ ಸಭೆಯಲ್ಲಿ ನೀಡಿದ ದೂರಿನಂತೆ ಚರ್ಚಿಸಿ ಗ್ರಾಮದ ಹಲವಾರು ಮಂದಿಗೆ ಇವರಿಂದ ಅನ್ಯಾಯವಾಗುತ್ತಿದ್ದು ಎಲ್ಲೆಲ್ಲಿ ಸರಕಾರಿ ಜಾಗವಿರುವ ಬಗ್ಗೆ ಅವರಿಗೆ ಬೇಕಾದವರಿಗೆ ಗ್ರಾಮಕರಣಿಕರಲ್ಲಿ ಹೇಳಿಸಿ ಮಾಡಿಸಿಕೊಡುತ್ತಾರೆ. ಬೆಳ್ತಂಗಡಿ ತಾಲೂಕಿನಲ್ಲಿರುವ ವ್ಯಕ್ತಿಗೂ ಕುಟ್ರುಪ್ಪಾಡಿ ಗ್ರಾಮದಲ್ಲಿ ಭೂಮಿ ಮಂಜೂರುಗೊಳಿಸಲಾಗಿದೆ ಇದರಲ್ಲಿ ಸಂಪೂರ್ಣ ಗ್ರಾಮಸಹಾಯಕ ಹೊನ್ನಪ್ಪರ ಕುಮ್ಮಕ್ಕು ಇದೆ ಎಂದು ಗಿರೀಶ್ ಕುಂಟೋಡಿ ದೂರಿಕೊಂಡರೆ ಆಕ್ಷೇಪ ವ್ಯಕ್ತಪಡಿಸಿದ ಕುಟ್ರುಪ್ಪಾಡಿ ಗ್ರಾ.ಪಂ.ಮಾಜಿ ಸದಸ್ಯ ಮ್ಯಾತ್ಯು ಟಿ.ಎಂ ರವರು ಒಬ್ಬ ಗ್ರಾಮ ಸಹಾಯಕನಿಗೆ ಭೂಮಿ ಮಂಜೂರುಗೊಳಿಸುವುದಾಗಲಿ ಭೂಮಿ ನೀಡುವುದಾಗಲಿ ಕಡತ ತಯಾರಿಸುವುದಾಗಲೀ ಅಥವಾ ಇನ್ನಿತರ ಕಂದಾಯ ಸೌಲಭ್ಯಗಳನ್ನು ಜನರಿಗೆ ನೀಡುವುದಾಗಲೀ ಅಧಿಕಾರ ಇರುವುದಿಲ್ಲ. ಗ್ರಾಮಸಹಾಯಕರು ಗ್ರಾಮಕರಣಿಕರಿಗೆ ಒಬ್ಬ ಸಹಾಯಕರಾಗಿ ಕೆಲಸ ಮಾಡುವ ವ್ಯಕ್ತಿಯಾಗಿದ್ದು ಯಾರೊ ಒಬ್ಬರು ಅನಗತ್ಯ ದೂರು ನೀಡಿದ್ದರೆ ವರ್ಗಾವಣೆಯ ಕ್ರಮ ಕೈಗೊಳ್ಳಲು ಸಾಧ್ಯವೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರಲ್ಲದೆ ಇಂತಹ ಚರ್ಚೆಗಳು ಜನಸಂಪರ್ಕ ಸಭೆಯಲ್ಲಿ ಸಮಂಜಸವಲ್ಲ. ಯಾರಿಗಾದರೂ ಗ್ರಾಮ ಸಹಾಯಕರಿಂದ ತೊಂದರೆಯಾಗಿದ್ದರೆ ಸೂಕ್ತ ದಾಖಲೆಯೊಂದಿಗೆ ಅಧಿಕಾರಿಗಳಿಗೆ ದೂರು ನೀಡಿದಲ್ಲಿ ಅವರು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥ ಗಿರೀಶ್ ಕುಂಟೋಡಿಯವರು ನಾನು ನನಗಾದ ಹಾಗೂ ನನ್ನ ಗ್ರಾಮಸ್ಥರಿಗೆ ಹಲವಾರು ಮಂದಿಗೆ ಆದ ಅನ್ಯಾಯದ ಬಗ್ಗೆ ಸೂಕ್ತವಾದಂತಹ ದಾಖಲೆಗಳನ್ನು ಈ ಮೊದಲೆ ಸಂಬಂಧಪಟ್ಟ ಕಂದಾಯ ಅಧಿಕಾರಿಗಳಿಗೆ ನೀಡಿದಲ್ಲದೆ ದಾಖಲೆ ಸಮೇತ ಅಧಿಕಾರಿಗಳಲ್ಲಿ ಚರ್ಚಿಸಿದ್ದು ಕಳೆದ ಜನಸಂಪರ್ಕ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಗ್ರಾಮ ಸಹಾಯಕ ಹೊನ್ನಪ್ಪ ಗೌಡರನ್ನು ಬದಲಾಯಿಸುವಂತೆ ಆಗ್ರಹಿಸಿದ್ದೆ ಆದರೆ ಈ ತನಕ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ, ಎಂದು ಆರೋಪಿಸಿದಂತೆ ಮಾತನಾಡಿದ ತಹಶೀಲ್ದಾರ್ ವಿಚಾರಕ್ಕೆ ಸಂಬಂಧಪಟ್ಟಂತೆ ಸೂಕ್ತ ದಾಖಲೆಗಳನ್ನು ನೀಡಿ ಆ ಬಳಿಕ ಪರಿಶೀಲಿಸಲಾಗುವುದು. ಈಗ ದಾಖಲೆ ನೀಡಿ ಎಂದು ಹೇಳಿದರಲ್ಲದೆ ನೀವು ಪತ್ರಿಕೆಯಲ್ಲಿ ಬರಬೇಕೆಂದು ಮಾತನಾಡುವುದು, ಇದು ಸರಿಯಲ್ಲ ಎಂದರು. ವಿಚಾರದ ಬಗ್ಗೆ ಆಕ್ರೋಶಗೊಂಡ ಗಿರೀಶ್ರವರು ನಾನು ಪತ್ರಿಕೆಯಲ್ಲಿ ಬರಬೇಕೆಂದು ಮಾತನಾಡುವುದಲ್ಲ, ಸಮಸ್ಯೆ ಇತ್ಯರ್ಥವಾಗಬೇಕಾಗಿದೆ ಗ್ರಾಮಸ್ಥರಿಗೆ ತೊಂದರೆ ಬಗ್ಗೆ ನಾನು ಮಾತನಾಡುತ್ತಿದ್ದೇನೆ. ಈ ಹಿಂದೆಯೆ ಎಲ್ಲಾ ದಾಖಲೆಗಳನ್ನು ತಮ್ಮ ಇಲಾಖೆಗೆ ಒದಗಿಸಿರುತ್ತೇನೆ. ಹಾಗೂ ಸಮಸ್ಯೆ ಬಗ್ಗೆ ಸಂಪುರ್ಣ ಮಾಹಿತಿ ನೀಡಿದ್ದೇನೆ. ಈಗ ಮತ್ತೇ ನೀವು ಪುರಕ ದಾಖಲೆ ನೀಡಿ ಎಂದರೆ ನಾನೇನು ದಾಖಲೆಗಳನ್ನು ಕಿಸೆಯಲ್ಲಿಟ್ಟುಕೊಂಡು ತಿರುಗಾಡುವುದಿಲ್ಲ. ವಿಚಾರದ ಬಗ್ಗೆ ಮಾತನಾಡಿದ ಶಾಸಕ ಅಂಗಾರರವರು ಜನಸಾಮಾನ್ಯರು ತಮ್ಮ ಬೇಡಿಕೆಗನುಗುಣವಾಗಿ ಅವರ ಸಮಸ್ಯೆಗಳಿಗೆ ಇಲಾಖೆಗೆ ಬರುವುದು ಸಹಜ. ಆದರೆ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುವಂತಾಗಬೇಕು. ಈ ವಿಚಾರದ ಬಗ್ಗೆ ಪರಿಶೀಲಿಸುತ್ತೇನೆ ಎಂದರು.
ರಮೇಶ್ ವಾಲ್ತಾಜೆ ಮಾತನಾಡಿ ಕಡಬ ಕಂದಾಯ ಇಲಾಖೆಯಲ್ಲಿನ ನಮ್ಮ ಬಿಳಿನೆಲೆ ವ್ಯಾಪ್ತಿಯ ಕಡತ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಕೇಳಿ ತಿಂಗಳೆರಡು ಕಳೆದರೂ ಕಡತ ಇನ್ನು ದೊರೆತ್ತಿರುವುದಿಲ್ಲ. ವಿಚಾರಿಸಿದರೆ ಕಡತವೇ ಕಾಣುತ್ತಿಲ್ಲ ಎನ್ನುವ ಅಧಿಕಾರಿಗಳಿಂದ ಸರಿಯಾದ ಮಾಹಿತಿ ಸಿಗುವುದಿಲ್ಲ ಎಂದು ಆರೋಪಿಸಿದರಲ್ಲದೆ ಬಿಳಿನೆಲೆ ಗ್ರಾಮ ವ್ಯಾಪ್ತಿಯ ಹೆಚ್ಚಿನ ಕಡತಗಳೆಲ್ಲ ಕಂದಾಯ ಇಲಾಖೆಯಲ್ಲಿ ಮಾಯವಾಗುತ್ತಿವೆ ಎಂದು ದೂರಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಂಗಾರ ರವರು 94ಸಿ ಯಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದಲ್ಲದೆ ತಾಲೂಕು ಪಂಚಾಯತ್ ಸದಸದ್ಯರು, ಗ್ರಾ.ಪಂ.ಅಧ್ಯಕ್ಷರು ವಿವಿಧ ಹಕ್ಕುಪತ್ರಗಳನ್ನು ವಿತರಿಸಿದರು. ಹಕ್ಕುಪತ್ರ ವಿತರಿಸುವ ಕಾರ್ಯಕ್ರಮದಲ್ಲಿ ಗ್ರಾಮವಾರು ಫಲಾನುಭವಿಗಳ ಹೆಸರನ್ನು ಕರೆದು ಹೇಳುತ್ತಿದ್ದ ಕಡಬ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆಯವರು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವಂತೆ ಜನಪ್ರತಿನಿಧಿಗಳ ಹೆಸರುಗಳನ್ನು ಹೇಳುತ್ತಿದ್ದು ಜನಪ್ರತಿನಿಧಿಗಳಲ್ಲಿ ಹಕ್ಕುಪತ್ರ ನೀಡುವಂತೆ ವಿನಂತಿಸುತ್ತಿದ್ದು ವೇದಿಕೆಯಲ್ಲಿದ್ದ ತಾಲೂಕು ಪಂಚಾಯತ್ ಸದಸ್ಯರ ಹೆಸರನ್ನು ಕರೆದು ಅವರಿಂದ ಹಕ್ಕುಪತ್ರ ಕೊಡಿಸುತ್ತಿದ್ದರು ವೇದಿಕೆಯ ಮುಂಭಾಗದ ಸಾಲಿನಲ್ಲಿ ಕುಳಿತಿದ್ದ ಬಿಳಿನೆಲೆ ತಾ.ಪಂ.ಸದಸ್ಯೆ ಆಶಾಲಕ್ಷ್ಮಣ್ ಗುಂಡ್ಯರವರನ್ನು ಕರೆಯದೇ ಅವರ ಎಡಬಲದಲ್ಲಿ ಕುಳಿತಿರುವ ತಾ.ಪಂ.ಸದಸ್ಯೆಯರು ಹಾಗೂ ಹಿಂದಿನ ಸಾಲಿನಲ್ಲಿ ಕುಳಿತಿದ್ದ ಗ್ರಾ.ಪಂ. ಅಧ್ಯಕ್ಷರಿಂದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವಂತೆ ವಿನಂತಿಸಿಕೊಂಡಿದ್ದನ್ನು ಗಮನಿಸಿದ ತಾ.ಪಂ.ಸದಸ್ಯೆ ಆಶಾಲಕ್ಷ್ಮಣ್ ಗುಂಡ್ಯರವರು ಕಾರ್ಯಕ್ರಮದಲ್ಲಿ ರಾಜಕೀಯವಾಗುತ್ತಿದೆ ಎಂದು ನೊಂದುಕೊಂಡು ವೇದಿಕೆಯಿಂದ ಮಧ್ಯದಲ್ಲಿಯೇ ನಿರ್ಗಮಿಸಿದ ಘಟನೆಯು ನಡೆಯಿತು.
ವೇದಿಕೆಯಲ್ಲಿ ಪ್ರೋಬೇಷನರಿ ಐ.ಎ.ಎಸ್. ಅಧಿಕಾರಿ ಜ್ಞಾನೇಂದ್ರ ಕುಮಾರ್, ತಾ.ಪಂ.ಸದಸ್ಯರಾದ ಗಣೇಶ್ ಕೈಕುರೆ, ಪಿ.ವೈ ಕುಸುಮಾ, ತೇಜಸ್ವಿನಿ, ತಾರಾ, ಜಯಂತಿ, ನೂಜಿಬಾಳ್ತಿಲ ಗ್ರಾ,ಪಂ.ಅಧ್ಯಕ್ಷ ಸದಾನಂದ ಗೌಡ, ಪೆರಾಬೆ ಗ್ರಾ.ಪಂ.ಅಧ್ಯಕ್ಷೆ ಬೇಬಿ ಪಾಟಾಳಿ, ಕುಟ್ರುಪ್ಪಾಡಿ ಗ್ರಾ.ಪಂ.ಅಧ್ಯಕ್ಷೆ ಜಾನಕಿ, ಕಡಬ ಗ್ರಾ.ಪಂ.ಉಪಾಧ್ಯಕ್ಷೆ ಜ್ಯೋತಿ ಡಿ ಕೋಲ್ಪೆ, ಪುತ್ತೂರು ಸಿಡಿಪಿಒ ಶಾಂತಿ ಹೆಗ್ಡೆ. ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ| ಸುಚಿತ್ರಾ ರಾವ್. ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು,ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಾಯರ್ ಜಾತಿ ಪ್ರಮಾಣಪತ್ರ ನೀಡುವಂತೆ ನಾಯರ್ ಸಂಘಟನೆ ವತಿಯಿಂದ ಶಾಸಕರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕುಟ್ರುಪ್ಪಾಡಿ ಗ್ರಾ.ಪಂ.ಸದಸ್ಯ ಮಹಮ್ಮದ್ ಆಲಿ, ಪ್ರಕಾಶ್ ನೆಟ್ಟಣ, ರಾಧಾಕೃಷ್ಣ ನೆಟ್ಟಣ, ತೋಮ್ಸನ್ ಕೆ.ಟಿ, ಮ್ಯಾಥ್ಯು ಟಿ.ಎಂ, ಶಿವರಾಮ ಶೆಟ್ಟಿ ಕೇಪು, ರಮೇಶ್ ವಾಲ್ತಾಜೆ, ನೀಲಪ್ಪ ಬಿಳಿನೆಲೆ, ಬಾಲಕೃಷ್ಣ ಗೌಡ ವಾಲ್ತಾಜೆ, ಜೋಸೆಫ್ ಚೆರಿಯನ್ ನೆಟ್ಟಣ, ಸತೀಶ್ ನಾಯಕ್ ಕಡಬ, ಜಗನ್ನಾಥ ರೈ ಕೊಲಂಬೆತ್ತಡ್ಡ, ಕಿರಣ್ ಗೋಗಟೆ, ಎಲ್ಸಿ ತೋಮಸ್ ಚರ್ಚೆಯಲ್ಲಿ ಪಾಲ್ಗೊಂಡರು. ಉಪತಹಶೀಲ್ದಾರ್ ನವ್ಯ, ಗುಮಾಸ್ತೆ ಭಾರತಿ ಸೇರಿದಂತೆ ಕಂದಾಯ ಇಲಾಖಾ ಸಿಬ್ಬಂದಿಗಳು, ಗ್ರಾಮಕರಣಿಕರು ಸಹಕರಿಸಿದರು. ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ ಸ್ವಾಗತಿಸಿ, ಇಂದಿನ ಸಭೆಯ ನಿರ್ಣಯವನ್ನು ಸಭೆಯಲ್ಲಿ ಓದಿದರು. ಸಿಬ್ಬಂದಿ ಉದಯಕುಮಾರ್ ಪ್ರಾರ್ಥನೆ ಹಾಡಿದರು.