(ನ್ಯೂಸ್ ಕಡಬ) newskadaba.com ಬಂಟ್ವಾಳ ನ. 27: ಆರ್.ಟಿ.ಸಿ. ತಿದ್ದುಪಡಿ ಮಾಡಲೆಂದು ಲಂಚದ ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಹಿನ್ನೆಲೆಯಲ್ಲಿ ಬಂದ ದೂರಿನನ್ವಯ ದಕ್ಷಿಣ ಕನ್ನಡದ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಅಧಿಕಾರಿಗಳು ಬಂಟ್ವಾಳ ತಾಲೂಕು ಕಚೇರಿಗೆ ದಾಳಿ ನಡೆಸಿದ ವೇಳೆ ಉಪತಹಸೀಲ್ದಾರ್ ರವಿಶಂಕರ್ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದು, ಘಟನೆ ಗುರುವಾರ ಮಧ್ಯಾಹ್ನ ಬಿ.ಸಿ.ರೋಡಿನ ಮಿನಿ ವಿಧಾನಸೌಧದಲ್ಲಿ ನಡೆದಿದೆ.
ದೂರುದಾರರು ತಾಯಿಯ ಹೆಸರಲ್ಲಿರುವ ಜಾಗಕ್ಕೆ ಸಂಬಂಧಿಸಿ ಆರ್.ಟಿ.ಸಿ.ಯಲ್ಲಿ ತಿದ್ದುಪಡಿ ಮಾಡಿಕೊಡಲು ಉಪತಹಸೀಲ್ದಾರ್ 1,500 ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ಪ್ರಕರಣ ದಾಖಲಿಸಲಾಗಿದ್ದು, 1,000 ರೂ ಲಂಚ ಸ್ವೀಕರಿಸುವ ಸಂದರ್ಭ ಅಧಿಕಾರಿಗಳು ದಾಳಿ ನಡೆಸಿದರು. ಪೊಲೀಸ್ ಅಧೀಕ್ಷಕ ಬೋಪಯ್ಯ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಕೆ.ಸಿ.ಪ್ರಕಾಶ್ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಶ್ಯಾಂಸುಂದರ್, ಗುರುರಾಜ್ ಹಾಗೂ ಸಿಬ್ಬಂದಿಗಳಾದ ಹರಿಪ್ರಸಾದ್, ರಾಧಾಕೃಷ್ಣ, ಉಮೇಶ್, ರಾಧಾಕೃಷ್ಣ ಡಿ.ಎ, ಪ್ರಶಾಂತ್ ಎಂ, ವೈಶಾಲಿ, ರಾಜೇಶ್ ಪಿ, ರಾಕೇಶ್ ವಾಗ್ಮೇನ್, ಸತೀಶ್ ಹಾಗೂ ಭರತ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಫಜೀರು ನಿವಾಸಿಯೊಬ್ಬರು ದೂರು ನೀಡಿದ್ದು, ಬೆಂಜನಪದವಿನಲ್ಲಿ ಅವರ ತಾಯಿ ಹೆಸರಿನ ಜಾಗವೊಂದರ ಆರ್.ಟಿ.ಸಿ. ತಿದ್ದುಪಡಿ ಮಾಡುವ ಕಡತಕ್ಕೆ ಸಹಿ ಹಾಕಲೆಂದು ಲಂಚಕ್ಕೆ ಬೇಡಿಕೆ ಇಟ್ಟಿರುವುದಾಗಿ ಆರೋಪಿಸಲಾಗಿತ್ತು. ಉಪತಹಸೀಲ್ದಾರ್ ರವಿಶಂಕರ್ ಅವರನ್ನು ದಸ್ತಗಿರಿ ಮಾಡಲಾಗಿದೆ.