(ನ್ಯೂಸ್ ಕಡಬ) newskadaba.com ಮಂಗಳೂರು ನ. 26: ಪ್ರವಾಸಿ ತಾಣ ಮುರುಡೇಶ್ವರ ಸಮುದ್ರ ತೀರವನ್ನು ಅಭಿವೃದ್ಧಿ ಪಡಿಸುವ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದ ನಿರ್ಧಾರಕ್ಕೆ ಇಲ್ಲಿನ ಮೀನುಗಾರರ ವಿರೋಧ ಮುಂದುವರೆದಿದೆ.
ಸಮುದ್ರ ಬೇಲೆಯ ಮೇಲೆ ನಿಲ್ಲಿಸಲಾಗಿರುವ ಮೀನುಗಾರಿಕಾ ದೋಣಿಗಳನ್ನು ಬದಿಗೆ ಸರಿಸಿ, ಅಂಗಡಿಗಳಿಗೆ ಅವಕಾಶ ಮಾಡಿಕೊಡುವ ಪ್ರಸ್ತಾಪಕ್ಕೆ ಮೀನುಗಾರರು ಒಪ್ಪುತ್ತಲೇ ಇಲ್ಲ.ವಿಶ್ವ ಪ್ರಸಿದ್ಧ ತಾಣವಾಗಿರುವ ಮುರುಡೇಶ್ವರವನ್ನು ಅಭಿವೃದ್ಧಿಪಡಿಸಲು ಜಿಲ್ಲಾಡಳಿತ ಮುತುವರ್ಜಿ ವಹಿಸಿ ಕಾರ್ಯಾಚರಣೆಗೆ ಇಳಿದಿದೆ. ರಸ್ತೆ ಅಗಲೀಕರಣ, ಚರಂಡಿ ನಿರ್ಮಾಣದೊಂದಿಗೆ ಸಮುದ್ರ ತೀರದಲ್ಲಿಯೂ ಪ್ರವಾಸೋದ್ಯಮ ಚಟುವಟಿಕೆಗಳನ್ನು ಉತ್ತೇಜಿಸಲು ಮುಂದಾಗಿದೆ ಮುರುಡೇಶ್ವರ ಸಮುದ್ರ ತೀರದಲ್ಲಿ ಅಂಗಡಿಗಳಿಗೆ ಅವಕಾಶ ಮಾಡಿಕೊಡುವುದಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ ಎಸ್. ರವಿಚಂದ್ರ, ಸಿಬ್ಬಂದಿಗಳೊಡನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೋಣಿಗಳ ಸ್ಥಳಾಂತರಕ್ಕೆ ಅಧಿಕಾರಿಗಳು ಮಾಡಿಕೊಂಡ ಮನವಿಗೆ ಮೀನುಗಾರರು ಒಪ್ಪಿಲ್ಲ. ಸಮುದ್ರದೊಂದಿಗೆ ನಾವು ಬದುಕು ಕಟ್ಟಿಕೊಂಡಿದ್ದೇವೆ, ನಮ್ಮನ್ನು ತೆರವುಗೊಳಿಸುವ ಹಕ್ಕು ಅಧಿಕಾರಿಗಳಿಗೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ .
ಇದರಿಂದ ಕೆರಳಿರುವ ಅಧಿಕಾರಿಗಳು, ಮುರುಡೇಶ್ವರ ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದಿದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ, ಪರಸ್ಪರ ಹೊಂದಾಣಿಕೆಯ ಮೂಲಕ ಅಭಿವೃದ್ಧಿಗೆ ಸಹಕರಿಸಬೇಕು, ಸಮುದ್ರ ಬೇಲೆಯ ಅತ್ಯಲ್ಪ ಭಾಗವನ್ನಷ್ಟೇ ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳಲಾಗುತ್ತಿದ್ದು, ಇದರಿಂದ ಮೀನುಗಾರಿಕೆಗೆ ಯಾವುದೇ ತೊಂದರೆಯಾಗುವುದಿಲ್ಲ, ಆದರೆ ಎಲ್ಲವನ್ನೂ ಕಡೆಗಣಿಸಿ ಇಡೀ ಸಮುದ್ರ ಬೇಲೆಯ ಮೇಲೆ ಹಕ್ಕು ಚಲಾಯಿಸುವುದು ಸರಿಯಲ್ಲ,ಎಂದು ಅಧಿಕಾರಿಗಳು ತಾಕೀತು ಮಾಡಿದ್ದಾರೆ.