(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ ನ. 25: ದೈಹಿಕ ನ್ಯೂನತೆಯಿಂದ ಬಳಲುತ್ತಿದ್ದ ಬಡ ದಂಪತಿಯ ಐದರ ಹರೆಯ ಪುತ್ರಿ ಪ್ರತೀಕ್ಷಾಳ ಹುಟ್ಟು ಹಬ್ಬವನ್ನು ಕುಕ್ಕೆ ಸುಬ್ರಹ್ಮಣ್ಯ ಮಹಾವಿದ್ಯಾಲಯದ ಉಪನ್ಯಾಸಕರಾದ ಬಾಲಕೃಷ್ಣ ಪೈ ದಂಪತಿಗಳು ಆಕೆಯ ಮನೆಯಲ್ಲಿ ಕಳೆದ ದಿನ (ನ.24) ಆಚರಿಸಿದರು.
ಈ ಹಿಂದೆ ಈ ಅಶಕ್ತ ಕುಟುಂಬದ ಕರುಳ ಕುಡಿಯ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮೂಲಕ ಸುಬ್ರಹ್ಮಣ್ಯದ ದಂಪತಿ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಿಕೊಂಡಿದ್ದರು ಕಾರ್ಕಳ ತಾಲೂಕು ಡೊಂಕುಬೆಟ್ಟು ನಿವಾಸಿಗಳಾಗಿರುವ ಲಕ್ಷ್ಮಣ ನಾಯಕ್(48) -ರೇವತಿ (38) ದಂಪತಿಯ ಪುತ್ರಿ ಪ್ರತೀಕ್ಷಾ ಐದರ ಬಾಲೆ. ಲಕ್ಷ್ಮಣ ಪೋಲಿಯೋ ಪೀಡಿತರಾಗಿದ್ದರೆ, ರೇವತಿ ದೃಷ್ಟಿಹೀನರಾಗಿದ್ದಾರೆ. ಮಗಳಿಗೆ ಶಿಕ್ಷಣ ಕೊಡಿಸುವುದೆಂತು ಎಂಬುದು ಹೆತ್ತವರ ಚಿಂತೆಯಾಗಿತ್ತು. ಈ ಚಿಂತೆಯನ್ನು ಹೊಗಾಲಾಡಿಸುವ ಮೂಲಕ ಈ ಕುಟುಂಬಕ್ಕೆ ದೀಪವಾಳಿಯಂದು ಬೆಳಕಾಗಿದ್ದಾರೆ.
ಈ ವಿಚಾರ ತಿಳಿದ ಕುಕ್ಕೆ ಸುಬ್ರಹ್ಮಣ್ಯದ ಕೆಎಸ್‌ಎಸ್ ಕಾಲೇಜಿನ ಉಪನ್ಯಾಸಕ ಬಾಲಕೃಷ್ಣ ಪೈ ಹಾಗೂ ಪತ್ನಿ ಸೌಮ್ಯಾ ಪೈ ಬಡ ಕುಟುಂಬಕ್ಕೆ ನೆರವಾಗಲು ಯೋಚಿಸಿದರು. ದೀಪಾವಳಿ ಯಂದು ಅವರ ಮನೆಗೆ ತೆರಳಿದ ದಂಪತಿ ಪ್ರತೀಕ್ಷಾ ಮತ್ತು ಆಕೆಯ ಹೆತ್ತವರಿಗೆ ಹೊಸ ವಸ್ತ್ರ, ಆರ್ಥಿಕ ನೆರವು ನೀಡಿ ಶುಭಾಶಯ ಹೇಳಿದ್ದಲ್ಲದೆ ಮಗಳ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ತಿಳಿಸಿದರು. ಕುಟುಂಬಕ್ಕೆ ಅವಶ್ಯ ನೆರವಿನ ಭರವಸೆಯನ್ನೂ ನೀಡಿದರು.ಇದೀಗಾ ಐದರ ಬಾಲೆಯ ಹುಟ್ಟು ಹಬ್ಬವನ್ನು ಆಚರಿಸುವ ಮೂಲಕ ಈ ಬಡತನದ ಕುಟುಂಬಕ್ಕೆ ಬೆಳಕಿನ ಜೊತೆಗೆ ಧೈರ್ಯವನ್ನು ತುಂಬಿದ್ದಾರೆ.
.