(ನ್ಯೂಸ್ ಕಡಬ) newskadaba.com ಮಂಗಳೂರು ನ. 24: ‘ಫೆವಿಕಾಲ್’ ಗಮ್ ಗೆ ಸಂಬಂಧಿಸಿದ ಹೊಸ ಜಾಹೀರಾತೊಂದು ಇದೀಗ ಕರಾವಳಿ ಭಾಗದ ಮಂದಿಯ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ರಾಜ್ಯ ಮಟ್ಟದ ವಾಹಿನಿಯಲ್ಲೂ ಬಿತ್ತರವಾಗುತ್ತಿರುವ ಈ ಜಾಹೀರಾತಿನಲ್ಲಿ ಕರಾವಳಿ ಕರ್ನಾಟಕದ ಗಂಡು ಕಲೆ ಎಂದು ಗುರುತಿಸಿಕೊಂಡ ಯಕ್ಷಗಾನಕ್ಕೆ ಅವಮಾನಿಸಲಾಗಿದೆ ಅನ್ನೋದೆ ಆಕ್ರೋಶಕ್ಕೆ ಕಾರಣ. ಜಾಹೀರಾತಿನಲ್ಲಿ ಯಕ್ಷಗಾನದ ವೇಷಧಾರಿಗಳನ್ನು ಹಾಗೂ ಭಾಗವತರು ಮತ್ತಿತರರನ್ನು ತಮಾಷೆಯ ರೀತಿಯಲ್ಲಿ ಬಿಂಬಿಸಲಾಗಿದ್ದು, ಜಾಹೀರಾತಿಗಾಗಿ ಯಕ್ಷಗಾನ ಕಲೆಯನ್ನು ದುರ್ಬಳಕೆ ಮಾಡಲಾಗಿದೆ ಅನ್ನೋದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ.ಜಾಹಿತಾರು ಹಿಂಪಡೆದು ಕರಾವಳಿಗರಲ್ಲಿ ಬಹಿರಂಗವಾಗಿ ಕ್ಷಮೆಗೆ ಶಾಸಕ ಕಾಮತ್ ಆಗ್ರಹಿಸಿದ್ದಾರೆ.
ರಂಗಸ್ಥಳ (ಯಕ್ಷಗಾನದ ವೇದಿಕೆ)ದಲ್ಲಿರುವ ಪೀಠೋಪಕರಣ ತುಂಡಾಗಿ ಬೀಳುವ ದೃಶ್ಯವಿದ್ದು, ವೇಷಧಾರಿಗಳ ಜೊತೆಗೆ ಯಕ್ಷವೇದಿಕೆಯನ್ನೇ ಅಪಮಾನಿಸಲಾಗಿದೆ. ಅಲ್ಲದೆ, ವೇದಿಕೆ ತುಂಡಾಗಿ ಬೀಳುತ್ತಲೇ ವೇದಿಕೆಯಲ್ಲಿದ್ದ ಎಲ್ಲರೂ ಅಡ್ಡಾದಿಡ್ಡಿ ಓಡುವುದು ಇದೆಲ್ಲವೂ ನೋಡುಗರಲ್ಲಿ ಅಭಾಸ ಹುಟ್ಟುಹಾಕಿದೆ. ಕರಾವಳಿ ಕನ್ನಡವನ್ನೇ ಸಂಭಾಷಣೆಗಾಗಿ ಬಳಸಿಕೊಂಡಿದ್ದು, ಮಾತ್ರವಲ್ಲದೆ ‘ಫೆವಿಕಾಲ್’ ಸಂಸ್ಥೆ ತನ್ನ ಗಮ್ ನ ಜಾಹೀರಾತಿಗಾಗಿ ಈ ರೀತಿಯಾಗಿ ಯಕ್ಷಗಾನ ಕಲೆಯನ್ನು ಪ್ರದರ್ಶನಕ್ಕೆ ಇಟ್ಟಿರುವುದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿ, ತಕ್ಷಣವೇ ‘ಫೆವಿಕಾಲ್’ ಸಂಸ್ಥೆ ಕ್ಷಮೆಯಾಚಿಸುವಂತೆ ಕರಾವಳಿಗರು ಒತ್ತಾಯಿಸಿದ್ದಾರೆ.