(ನ್ಯೂಸ್ ಕಡಬ) newskadaba.com ಬೆಳ್ತಂಗಡಿ ನ. 24: ಬೆಳ್ತಂಗಡಿ ವೃತ್ತದ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಮಂಜ ಗ್ರಾಮದ, ನಿಡಿಗಲ್ ಎಂಬಲ್ಲಿ ಮನೆ ದರೋಡೆ ಯತ್ನ ಪ್ರಕರಣ ನಡೆದಿದ್ದು, ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಸಿಸಿಐ ಬೆಳ್ತಂಗಡಿ ಮತ್ತು ಪಿಎಸೈ ಧರ್ಮಸ್ಥಳ ಪೊಲೀಸ್ ಠಾಣಾ ಸಿಬ್ಬಂದಿಗಳು ಯಶಸ್ವಿಯಾಗಿದ್ದು, ಆರೋಪಿಗಳಿಂದ ಸುಮಾರು ರೂ 8 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಟ್ವಾಳ ತಾಲೂಕಿನ ಮೇಲ್ಕಾರ್ ಬಳಿ ಪಿ ಇರ್ಫಾನ್(28) ಬಿನ್, ಬಜಾಲ್ ಪಡ್ಪು ಮನೆ, ಮಂಗಳೂರು ತಾಲೂಕು ಮತ್ತು ಮಹಮ್ಮದ್ ತೌಸೀಫ್(26) ಬಿನ್ ಅಬ್ದುಲ್ ಲತೀಫ್, ವಳಚ್ಚಿಲ್ ಮನೆ, ಅರ್ಕುಳ ಗ್ರಾಮ, ಮಂಗಳೂರು ತಾಲೂಕು ಇವರಿಬ್ಬರು ಆರೋಪಿಗಳು ಇರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು, ಅವರ ಮಾಹಿತಿಯಂತೆ ಇತರ ಆರೋಪಿಗಳಾದ ಬೆಳಾಲು ಗ್ರಾಮದ ಪರಾಳ ಮನೆಯ ಚಿದಾನಂದ ಗೌಡ(25) ಮತ್ತು ಕಲ್ಮಂಜ ಗ್ರಾಮದ ಕಂದೂರು ಮನೆಯ ಮೋಹನ(32) ಎಂಬವರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳನ್ನು ವಿಚಾರಿಸಿದಾಗ ಮನೆ ದರೋಡೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳಿಂದ ಮಾರುತಿ ಸುಜುಕಿ ಕಂಪೆನಿಯ ವಿಟಿರಾ ಬ್ರೀಝಾ ಹಾಗೂ ಸ್ವಿಫ್ಟ್ ಕಾರು, ತಲವಾರು ಮತ್ತು ಕಬ್ಬಿಣದ ರಾಡ್, ನಾಲ್ಕು ಮೊಬೈಲ್‍ಗಳನ್ನು ಹಾಗೂ ಒಟ್ಟು ಸುಮಾರು 8,00,000/- ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.