(ನ್ಯೂಸ್ ಕಡಬ) newskadaba.com ನೆಲ್ಯಾಡಿ, ನ. 23: ಕ್ಯಾನ್ಸರ್ ಪೀಡಿತ ಮಹಿಳೆಯೊಬ್ಬರ ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವ್ಯಕ್ತಿಯೋರ್ವ ಕಂದಕ ನಿರ್ಮಿಸಿ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ಅರಸಿನಮಕ್ಕಿ ಪಂಚಾಯತ್ ವ್ಯಾಪ್ತಿಯ ಎಂಜಿರ ಎಂಬಲ್ಲಿ ಹೀಗೆ ರಸ್ತೆಗೆ ಕಂದಕ ನಿರ್ಮಿಸಲಾಗಿದ್ದು, ರೆಜಿ ಎಂಬವರು ಈ ರೀತಿಯ ಅಮಾನವೀಯತೆ ತೋರಿಸಿದ್ದಾರೆ .ರಾಷ್ಟ್ರೀಯ 75ರ ಸಮೀಪದ ಹೆದ್ದಾರಿ ಸಮೀಪ ಇರುವ ಕ್ಯಾನ್ಸರ್ನಿಂದ ಬಳಲುತ್ತಿರುವ ಚಿನ್ನಮ್ಮ ಎಂಬುವರ ಮನೆಗೆ ತೆರಳುವ ದಾರಿಯಲ್ಲಿ ಸ್ಥಳೀಯ ನಿವಾಸಿ ರೆಜಿ ಎಂಬುವರು ಕಂದಕಗಳನ್ನು ನಿರ್ಮಿಸಿದ್ದು, ಹಲವಾರು ವರ್ಷಗಳಿಂದ ಇದ್ದ ಕಾಲು ದಾರಿಯನ್ನು ಕೂಡ ರೆಜಿ ಎಂಬವರು ಬಂದ್ ಮಾಡುವ ಮೂಲಕ ಕ್ಯಾನ್ಸರ್ ಪೀಡಿತೆಗೆ ತೊಂದರೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಶನಿವಾರ ಚಿನ್ನಮ್ಮ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಹಾಗೂ ಸಾಮಾಜಿಕ ಸಂಘಟನೆಯ ಸದಸ್ಯರು ಮಹಿಳೆಯನ್ನು ಚೇರ್ ಮೂಲಕ ಎತ್ತಿಕೊಂಡು ಕಂದಕ ದಾಟಿಸಿ ಕರೆದುಕೊಂಡು ಹೋಗಿದ್ದಾರೆ. ರೆಜಿ ಎಂಬವರು ಉದ್ದೇಶ ಪೂರ್ವಕವಾಗಿ ಕ್ಯಾನ್ಸರ್ ಪೀಡಿತೆಯ ಮನೆಗೆ ಹೋಗುವ ದಾರಿಯಲ್ಲಿಯೇ ತೆಂಗಿನ ಮರಕ್ಕೆ ಗುಂಡಿ ತೆಗೆದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಜೊತೆಗೆ ಇಂತಹವರ ವಿರುದ್ಧ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಾಹಿಸಿದ್ದಾರೆ.