(ನ್ಯೂಸ್ ಕಡಬ) newskadaba.com ಮಂಗಳೂರು ನ. 21: ಪವಿತ್ರ ನಾಗ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯಕ್ಕೆ ರಾಜ್ಯ ಹಾಗೂ ದೇಶದ ವಿವಿಧ ಭಾಗದಿಂದ ಭಕ್ತಾಧಿಗಳು ಬರುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಾಡುತ್ಪನ್ನಗಳನ್ನು ಇಲ್ಲಿ, ದಕ್ಷಿಣಕನ್ನಡ ಜಿಲ್ಲೆಯ ಬ್ರಾಂಡ್ ಆಗಿ ಪರಿಚಯಿಸುವ ಪ್ರಯತ್ನ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ ತಿಳಿಸಿದ್ದಾರೆ.
ಈ ಯೋಜನೆಗೆ ಪ್ರಧಾನಮಂತ್ರಿ ವನ್ ಧನ್ ಯೋಜನೆ ಮೂಲಕ 30 ಲಕ್ಷ ರೂಪಾಯಿಗಳ ಅನುದಾನ ಸಿಗುತ್ತಿದೆ. ಜಿಲ್ಲೆಯ ಎರಡು ಕಡೆಗಳಲ್ಲಿ ಈ ಉತ್ಪನ್ನಗಳ ಮಾರುಕಟ್ಟೆ ಆರಂಭಿಸಲು ನಿರ್ಧರಿಸಲಾಗಿದೆ. ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ಹಾಗೂ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಈ ಕಾಡುತ್ಪತ್ತಿ ಮಾರುಕಟ್ಟೆಗಳು ಶೀಘ್ರವೇ ಆರಂಭಗೊಳ್ಳಲಿದೆ. “ವನ್ ಧನ್” ಯೋಜನೆಯ ಅನುದಾನದ ಜೊತೆಗೆ ಸಿಎಸ್.ಆರ್ ಫಂಡ್, ಎನ್.ಆರ್.ಯು.ಎಂ ಸೇರಿದಂತೆ ಹಲವು ಯೋಜನೆಗಳಿಂದ ಇದಕ್ಕೆ ಅನುದಾನವನ್ನು ಕೊಡಿಸುವ ಪ್ರಯತ್ನವೂ ನಡೆಯಲಿದೆ.
ಸುಬ್ರಹ್ಮಣ್ಯದಲ್ಲಿ ಆರಂಭಗೊಳ್ಳುವ ಘಟಕಕ್ಕೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದಲೂ ವ್ಯವಸ್ಥೆಗಳನ್ನು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಉತ್ತರ ಕರ್ನಾಟಕ, ಬೆಂಗಳೂರು ಸೇರಿದಂತೆ ದೇಶದ ವಿವಿಧ ಭಾಗದಿಂದ ಭಕ್ತಾಧಿಗಳು ಬರುತ್ತಿದ್ದು, ದಕ್ಷಿಣಕನ್ನಡ ಜಿಲ್ಲೆಯ ಈ ಕಾಡುತ್ಪನ್ನಗಳನ್ನು ಇಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಬ್ರಾಂಡ್ ಆಗಿ ಪರಿಚಯಿಸುವ ಪ್ರಯತ್ನ ನಡೆಯಲಿದೆ ಸ್ವಸಹಾಯ ಗುಂಪುಗಳು, ಗ್ರಾಮ ಅರಣ್ಯ ಸಮಿತಿ, ಲ್ಯಾಂಪ್ಸ್ ಮೂಲಕ ಈ ಮಾರುಕಟ್ಟೆಯನ್ನು ನಿರ್ವಹಿಸುವ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ. ಗ್ರಾಮ ಅರಣ್ಯ ಸಮಿತಿ ಸದಸ್ಯರು ಈ ಮಾರುಕಟ್ಟೆಯ ಮೂಲಕ ತಮ್ಮ ಉತ್ಪನ್ನಗಳನ್ನು ಮಾರಲು ಅವಕಾಶವನ್ನು ನೀಡಲಾಗುವುದು. ಸುಬ್ರಹ್ಮಣ್ಯ ಹಾಗೂ ಚಾರ್ಮಾಡಿಯ ಈ ಎರಡೂ ಮಾರುಕಟ್ಟೆ ಘಟಕಗೆ ತಲಾ 15 ಲಕ್ಷ ವಿನಿಯೋಗಿಸಲಾಗುವುದು. ಎಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ರವರು ತಿಳಿಸಿದ್ದಾರೆ.