(ನ್ಯೂಸ್ ಕಡಬ) newskadaba.com ಪುತ್ತೂರು ನ. 20: ಪುತ್ತೂರಿನ ಬನ್ನೂರಿನಲ್ಲಿ ಸೀ ಫುಡ್ ಪಾರ್ಕ್ ನಿರ್ಮಿಸಲು ಮುಂದಾಗಿದ್ದು, ಇದಕ್ಕಾಗಿ ಸರಕಾರಿ ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟ ಜಾಗ ಬಳಸಿಕೊಳ್ಳಲು ಮುಂದಾಗಿರುವುದು ತಪ್ಪು. ಸೀ ಫುಡ್ ಪಾರ್ಕ್ ಮೂಲಕ ಜನರ ಆರೋಗ್ಯದ ಹಕ್ಕನ್ನು ಕಸಿಯುವ ಯತ್ನ ನಡೆಯುತ್ತಿದೆ.
ಸರಕಾರ ಜಮೀನು ಹಸ್ತಾಂತರ ಪ್ರಕ್ರಿಯೆ ಕೈ ಬಿಡದಿದ್ದಲ್ಲಿ ಸಾವಿರಾರು ಜನರನ್ನು ಸೇರಿ ಪುತ್ತೂರು ಚಲೋ ಅಭಿಯಾನ ನಡೆಸಲಾಗುವುದು ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಎಚ್ಚರಿಸಿದ್ದಾರೆ.ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಮೀಸಲಿರಿಸಿದ ಸ್ಥಳದಲ್ಲಿ ಸೀ ಫುಡ್ ಪಾರ್ಕ್ ಮಾಡಲು ಹೊರಟಿರುವುದನ್ನು ವಿರೋಧಿಸಿ ಪುತ್ತೂರು ಬಸ್ ನಿಲ್ದಾಣ ಸಮೀಪದ ಗಾಂಧಿ ಕಟ್ಟೆ ಎದುರು ಗುರುವಾರ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಶಾಸಕರಿಗೆ ಮತ್ತು ಸಂಸದರಿಗೆ ಮತ ನೀಡಿದ ಮತದಾರರಿಗೆ ದ್ರೋಹ ಬಗೆಯುವ ಕೆಲಸ ಮಾಡಲಾಗುತ್ತಿದೆ. ಇದರ ವಿರುದ್ಧ ಉಗ್ರ ಹೋರಾಟ ಅನಿವಾರ್ಯ. ಸರಕಾರಿ ಮೆಡಿಕಲ್ ಕಾಲೇಜಿಗಾಗಿ 40 ಎಕರೆ ಜಾಗ ಮೀಸಲಿಡಲಾಗಿದೆ. ಇದನ್ನು ಇಲ್ಲವಾಗಿಸುವ ಯತ್ನ ನಡೆದಿದೆ ಎಂದು ತಿಳಿಸಿದರು.