(ನ್ಯೂಸ್ ಕಡಬ) newskadaba.com ತಮಿಳುನಾಡು ನ. 19: ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಹಾಯಕಿ ವಿ.ಕೆ ಶಶಿಕಲಾ 10 ಕೋಟಿ ರೂ ದಂಡ ಪಾವತಿಸಿದ್ದಾರೆ. ಆರ್ಥಿಕ ವಂಚನೆಯ ಆರೋಪದ ಮೇಲೆ ಜೈಲಿನಲ್ಲಿರುವ ಶಶಿಕಲಾ ಅವರು ಶೀಘ್ರದಲ್ಲೇ ಜಾಮೀನಿನ ಮೇಲೆ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ವಕೀಲ ಎನ್. ರಾಜಾ ಸೆಂತೂರ್ ಪಾಂಡ್ಯ ಹೇಳಿದ್ದಾರೆ. ಆದರೆ, ಎಐಎಡಿಎಂಕೆ ಶಶಿಕಲಾ ಬಗ್ಗೆ ತನ್ನ ನಿಲುವನ್ನು ಬದಲಾಯಿಸಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಇ ಪಳನಿಸ್ವಾಮಿ ಹೇಳಿದ್ದಾರೆ. ಜೈಲಿನಿಂದ ಬಿಡುಗಡೆಯಾಗಿ ಬರುವ ಶಶಿಕಲಾ ಮತ್ತು ಅವರ ಕುಟುಂಬಕ್ಕೆ ಪಕ್ಷ ಅಥವಾ ಸರ್ಕಾರದಲ್ಲಿ ಯಾವುದೇ ಸ್ಥಾನವಿರುವುದಿಲ್ಲ ಎಂದು ಪಳನಿಸ್ವಾಮಿ ಹೇಳಿದ್ದಾರೆ.
ಎಐಎಡಿಎಂಕೆ ನಾಯಕಿ ಮತ್ತು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಬಲಗೈ ಎಂದು ಕರೆಯಲ್ಪಡುವ ಶಶಿಕಲಾ ತಮಿಳುನಾಡು ರಾಜಕೀಯದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು. ಜಯಲಲಿತಾ ಅವರ ಮರಣದ ನಂತರ ಶಶಿಕಲಾ ಅವರು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬರಲು ನಡೆಸಿದ ತಂತ್ರಗಳೆಲ್ಲಾ ವಿಫಲವಾಗಿತ್ತು. ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಶಶಿಕಲಾ ಅವರನ್ನು 2017 ರಲ್ಲಿ ಬಂಧಿಸಲಾಗಿತ್ತು.