(ನ್ಯೂಸ್ ಕಡಬ) newskadaba.com ಹಂಪಿ ನ. 17: ಅಯೋಧ್ಯೆಯಲ್ಲಿ ಅಸಂಖ್ಯಾತ ಭಕ್ತರ ಕನಸಾದ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಈಗಾಗಲೇ ಆರಂಭವಾಗಿದೆ. ಈಗ ಅದರ ಬೆನ್ನಲ್ಲೇ ರಾಮಭಕ್ತ, ರಾಮಬಂಟನಾದ ವಾಯು ಪುತ್ರ, ಅಂಜನೀ ಸುತ, ಕೇಸರಿ ನಂದನ ಶ್ರೀ ಹನುಮಂತನ ವಿಶ್ವದ ಅತಿ ಎತ್ತರದ ಮೂರ್ತಿಯನ್ನು ಸ್ಥಾಪನೆ ಮಾಡುವ ಕಾರ್ಯಕ್ಕೆ ಕೂಡಾ ಚಾಲನೆ ನೀಡಲಾಗಿದೆ. ಈ ಭವ್ಯ ಮೂರ್ತಿಯನ್ನು ಕರ್ನಾಟಕದ ಹಂಪಿ ಯಲ್ಲಿ ಪ್ರತಿಷ್ಠಾಪನೆ ಮಾಡಲು ಸಜ್ಜಾಗಿದ್ದು ಇದೊಂದು ಸಂತಸದ ಸುದ್ದಿಯಾಗಿದೆ.
ಹನುಮ ಭಕ್ತರಿಗೆ ಈ ಸುದ್ದಿ ಅಪಾರವಾದ ಸಂತಸವನ್ನು ನೀಡಿದೆ. ಹಂಪಿ ಮೂಲದ ಶ್ರೀ ಹನುಮದ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಇಂತಹುದೊಂದು ಕಾರ್ಯಕ್ಕೆ ಮುಂದಾಗಿದೆ.ಈ ಟ್ರಸ್ಟ್ 215 ಮೀ ಎತ್ತರದ ಹನುಮಂತನ ಮೂರ್ತಿಯನ್ನು ನಿರ್ಮಾಣ ಮಾಡಲು ತೀರ್ಮಾನಿಸಿದೆ ಎನ್ನಲಾಗಿದೆ. ಹನುಮಂತನ ಜನ್ಮ ಸ್ಥಳವಾದ ಕಿಷ್ಕಿಂದೆಯಲ್ಲಿ ಹನುಮನ ಈ ಮೂರ್ತಿಯನ್ನು 1200 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮುಂದಿನ ಆರು ವರ್ಷಗಳ ಅವಧಿಯಲ್ಲಿ ಮೂರ್ತಿ ಪ್ರತಿಷ್ಟಾಪನೆ ಕಾರ್ಯ ಪೂರ್ಣಗೊಳಿಸಲಾಗುವುದು ಎನ್ನಲಾಗಿದೆ.
ಟ್ರಸ್ಟ್ ನ ಗೋವಿಂದನಂದ ಸರಸ್ವತಿ ಸ್ವಾಮಿ ಅವರು ಮಾತನಾಡುತ್ತಾ ಅಯೋಧ್ಯೆಯಲ್ಲಿ ಶ್ರೀರಾಮ ಚಂದ್ರನ 221 ಮೀಟರ್ ಎತ್ತರದ ಮೂರ್ತಿ ನಿರ್ಮಾಣವಾಗುತ್ತಿದ್ದು, ಇಲ್ಲಿ 215 ಮೀ ಹನುಮನ ಮೂರ್ತಿ ನಿರ್ಮಾಣ ಮಾಡಲಾಗುವುದು ಎಂದಿದ್ದಾರೆ.ಪ್ರಸ್ತುತ ಹಂಪಿ ಬಳಿಯ ಅಂಜನಾದ್ರಿ ಬೆಟ್ಟದಲ್ಲಿ ಹನುಮನ ಮೂರ್ತಿಯಿದ್ದು ಇದನ್ನು ದರ್ಶಿಸಲು ಭಕ್ತರು 550 ಮೆಟ್ಟಿಲುಗಳನ್ನು ಏರಿ ಬರಬೇಕು. ಆದರೆ ಮುಂಬರುವ ಆರು ವರ್ಷಗಳಲ್ಲಿ ನಿರ್ಮಾಣವಾಗಲಿರುವ ಈ ಅತಿ ಎತ್ತರದ ಹನುಮಾನ್ ವಿಗ್ರಹ ದರ್ಶನಕ್ಕೆ ಜನರು ಸುಲಭವಾಗಿ ತಲುಪಲು ಎಲ್ಲಾ ವ್ಯವಸ್ಥೆ ಮಾಡಲಾಗುವುದು ಎನ್ನಲಾಗಿದೆ.