(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 17. ಯುಪಿಎಸ್ಸಿ ಹಾಗೂ ಕೆಪಿಎಸ್ಸಿ ಪರೀಕ್ಷೆಗಳು ಒಂದೇ ದಿನ ನಿಗಧಿಯಾಗಿದ್ದರಿಂದ ವಿದ್ಯಾರ್ಥಿಗಳ ಗೊಂದಲಕ್ಕೆ ಕಾರಣವಾಗಿತ್ತು. ಡಿಸೆಂಬರ್ ನಲ್ಲಿ ನಿಗದಿಯಾಗಿದ್ದ ಕೆಪಿಎಸ್ಸಿ ಪರೀಕ್ಷೆಯನ್ನು ಒಂದು ತಿಂಗಳು ಮುಂದೂಡಿಕೆ ಮಾಡಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಈ ಮೂಲಕ ಕೆಪಿಎಸ್ಸಿ ಹಾಗೂ ಯುಪಿಎಸ್ಸಿ ಪರೀಕ್ಷಾ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಕೇಂದ್ರ ಲೋಕಸೇವಾ ಅಯೋಗ ಪರೀಕ್ಷೆಗಳು 2021 ರ ಜನವರಿ 8 ರಿಂದ 10 ರವರೆಗೆ ಹಾಗೂ 16, 17 ರಂದು ನಡೆಯಲಿದ್ದು, ಕರ್ನಾಟಕ ಲೋಕಸೇವಾ ಆಯೋಗ ಪರೀಕ್ಷೆಗಳು 2020 ರ ಡಿಸೆಂಬರ್ 21 ರಿಂದ 24 ಮತ್ತು ಜನವರಿ 02 ರಿಂದ 05 ರವರೆಗೆ ನಿಗದಿಯಾಗಿವೆ. ಕೆ.ಪಿ.ಎಸ್.ಸಿ ಮತ್ತು ಯುಪಿಎಸ್.ಸಿ ಪರೀಕ್ಷೆಗಳ ಮಧ್ಯೆ ಅಂತರ ಕಡಿಮೆ ಇರುವ ಕಾರಣ ಎರಡೂ ಪರೀಕ್ಷೆ ತೆಗೆದುಕೊಂಡ ಅಭ್ಯರ್ಥಿಗಳಿಗೆ ಸಿದ್ಧತೆ ನಡೆಸಲು ಕಷ್ಟವಾಗುತ್ತಿದ್ದು, ಇದರಿಂದಾಗಿ ಅಭ್ಯರ್ಥಿಗಳು ‘ಕೆಪಿಎಸ್.ಸಿ ವೇಳಾಪಟ್ಟಿಯನ್ನು ಪರಿಷ್ಕರಿಸಿ ಪರೀಕ್ಷೆಯನ್ನು ಕನಿಷ್ಠ ಒಂದು ತಿಂಗಳು ಮುಂದೂಡಬೇಕೆಂದು’ ವಿದ್ಯಾರ್ಥಿಗಳು ಆಗ್ರಹಿಸಿದ್ದರು.ಇಂತಹ ಉದ್ಯೋಗಾಕಾಂಕ್ಷಿಗಳ ಒತ್ತಡಕ್ಕೆ ಮಣಿದಿರುವ ಮುಖ್ಯಮಂತ್ರಿ ಬಿಎಸ್.ವೈ, ಯುಪಿಎಸ್ಸಿ ಪರೀಕ್ಷೆಗಳ ಜೊತೆಗೆ ನಿಗದಿಯಾಗಿದ್ದ ಕೆಪಿಎಸ್ಸಿ ಪರೀಕ್ಷೆಗಳನ್ನು ಒಂದು ತಿಂಗಳು ಮುಂದೂಡಿಕೆ ಮಾಡಲು ಸೂಚನೆ ನೀಡಿದ್ದಾರೆ.