(ನ್ಯೂಸ್ ಕಡಬ) newskadaba.com ಪುತ್ತೂರು ನ. 15: ಮೆಡಿಕಲ್ ಕಾಲೇಜಿಗೆಂದೇ ಮೀಸಲಿರಿಸಿದ್ದ 40 ಎಕರೆ ಜಾಗ ರದ್ದುಪಡಿಸಲು ಸರಕಾರ ಮುಂದಾಗಿದೆ.ಪುತ್ತೂರು-ಉಪ್ಪಿನಂಗಡಿ ರಸ್ತೆಯ ಪಕ್ಕದಲ್ಲಿ, ಬನ್ನೂರು ಗ್ರಾಮದ ಸೇಡಿಯಾಪು ಹಳ್ಳಿಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಉದ್ದೇಶದಿಂದ 4 ವರ್ಷದ ಹಿಂದೆ 40 ಎಕರೆ ಜಾಗವನ್ನು ಅಂದಿನ ಶಾಸಕಿ ಶಕುಂತಳಾ ಶೆಟ್ಟಿ ಮುತುವರ್ಜಿಯಿಂದ ಮೀಸಲಿಡಲಾಗಿತ್ತು.
ಈ ಜಾಗವನ್ನು ಮೆಡಿಕಲ್ ಕಾಲೇಜು ಉದ್ದೇಶದಿಂದ ರದ್ದುಪಡಿಸಿ, ಅದನ್ನು ಸೀ ಫುಡ್ ಪಾರ್ಕ್‌ಗೆ ಕಾದಿರಿಸಲು ನಿರ್ಧರಿಸಲಾಗಿದೆ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಸಂಬಂಧ ಶಿಫಾರಸು ಮಾಡಿದ್ದು, ಅದರಂತೆ ಬನ್ನೂರು ಗ್ರಾಮದ ಜಾಗ ಬಳಸಿಕೊಳ್ಳುವ ವಿಚಾರದಲ್ಲಿ ಗ್ರಾಮಕರಣಿಕರು ಪ್ರಕಟಣೆ ಹೊರಡಿಸಿದ್ದಾರೆ.
ಪುತ್ತೂರು ಜಿಲ್ಲೆಯಾದರೆ ಖಂಡಿತಾ ಇಲ್ಲಿಗೆ ಸರಕಾರಿ ಮೆಡಿಕಲ್ ಕಾಲೇಜು ತರಬಹುದು. ಆದರೆ ಜಾಗವೇ ಇಲ್ಲದಿದ್ದರೆ ಏನು ಮಾಡೋದು? ಸೇಡಿಯಾಪುವಿನಂತಹ ಜಾಗ ಮತ್ತೆ ಸಿಗೋದು ತುಂಬಾ ಕಷ್ಟ. ಸೀ ಫುಡ್ ಪಾರ್ಕ್ ಸ್ಥಾಪನೆಗೆ ನನ್ನ ಬೆಂಬಲವಿದೆ. ಅದಕ್ಕೆ ಶಾಸಕರು ಹೊಸದಾಗಿ ಜಾಗ ಹುಡುಕಲಿ. ಅದು ಬಿಟ್ಟು ಮೆಡಿಕಲ್ ಕಾಲೇಜಿಗೆ ಜಾಗ ರದ್ದು ಮಾಡುವುದು ಅಭಿವೃದ್ಧಿ ಚಿಂತನೆಗೆ ನೀಡುವ ಹೊಡೆತ. ಇದಕ್ಕೆ ನನ್ನ ವಿರೋಧವಿದೆ ಎಂದು ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ತಿಳಿಸಿದ್ದಾರೆ.