(ನ್ಯೂಸ್ ಕಡಬ) newskadaba.com ಬಂಟ್ವಾಳ ನ. 12: ಬಿ.ಸಿ.ರೋಡಿನ ಕೈಕಂಬದಲ್ಲಿ ಕ್ರೈಬ್ರಾಂಚ್ ಪೊಲೀಸರೆಂದು ನಂಬಿಸಿ ವ್ಯಕ್ತಿಯೊಬ್ಬರ ಚಿನ್ಮಾಭರಣ ದೋಚಿದ ಹಳೆಯ ಪ್ರಕರಣದಲ್ಲಿ ಬಂಧನಕ್ಕೊಳಗಾದ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಇರಾನಿ ಗ್ಯಾಂಗ್ ಸದಸ್ಯರಾದ ಮಹಾರಾಷ್ಟ್ರ ದ ಝಾಕಿರ್ ಹುಸೈನ್(26) ಮತ್ತು ಕಂಬರ್ ರಹೀಂ ಮಿರ್ಜಾ(32) ಬಂಧಿತ ಆರೋಪಿಗಳು.2020ರ ಜ.18ರಂದು ಮಧ್ಯಾಹ್ನ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಿತ್ತಬೈಲು ಕೊಡಂಗೆ ನಿವಾಸಿ ಶಿವಪ್ರಸಾದ್ ಶರ್ಮ ಅವರು ಕೈಕಂಬದಲ್ಲಿ ನಡೆದುಕೊಂಡು ಹೋಗುವ ವೇಳೆ ಬೈಕಿನಲ್ಲಿ ಬಂದ ಇಬ್ಬರು ಹಿಂದಿ ಭಾಷೆಯಲ್ಲಿ ಮಾತನಾಡಿ, ನಾವು ಕ್ರೈಂ ಬ್ರಾಂಚ್ ಪೊಲೀಸರು. ನಿಮ್ಮನ್ನು ತಪಾಸಣೆ ಮಾಡಬೇಕಿದೆ ಎಂದಿದ್ದು, ಈ ವೇಳೆ ಶಿವಪ್ರಸಾದ್ ಅವರು ಇಬ್ಬರಲ್ಲಿ ಗುರುತಿನ ಚೀಟಿ ಕೇಳಿದಾಗ ಆಶೋಕ್ ಕುಮಾರ್, ಕ್ರೈಂ ಬ್ರಾಂಚ್ ಎಂದು ಬರೆದಿರುವ ಕಾರ್ಡ್ ತೋರಿಸಿದ್ದಾರೆ. ಬಳಿಕ ಶಿವಪ್ರಸಾದ್ ಬಳಿ ಇದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದನ್ನು ಪಡೆದು ಬೈಕಿನಲ್ಲಿ ಪರಾರಿಯಾಗಿದ್ದರು.
ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೇ ರೀತಿ ಕುಂದಾಪುರ ಮತ್ತು ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಈ ಪ್ರಕರದಣಲ್ಲಿ ಉಡುಪಿ ನಗರ ಪೊಲೀಸರು ಇರಾನಿ ಗ್ಯಾಂಗ್ ನ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿ ದಾಗ ಬಂಟ್ವಾಳದ ಪ್ರಕರಣದ ಬಗ್ಗೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಹಿರಿಯಡ್ಕ ಕಾರಾಗೃಹದಲ್ಲಿದ್ದ ಆರೋಪಿಗಳನ್ನು ಇಲ್ಲಿನ ಪ್ರಕರಣದ ವಿಚಾರಣೆಗಾಗಿ ಬಂಟ್ವಾಳ ನಗರ ಠಾಣೆಗೆ ಆರೋಪಿಗಳನ್ನು ಕರೆತಂದಿದ್ದು ಆರೋಪಿಗಳ ವಿಚಾರಣೆ ನಡೆಸಿದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯ ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.