(ನ್ಯೂಸ್ ಕಡಬ) newskadaba.com ದೆಹಲಿ ನ. 11 :ಐಪಿಎಲ್ ಇತಿಹಾಸದಲ್ಲಿ 5ನೇ ಬಾರಿಗೆ ಟ್ರೋಫಿ ಗೆಲ್ಲುವ ಮೂಲಕ ಮುಂಬೈ ಇಂಡಿಯನ್ಸ್ ಈವರೆಗೆ ಯಾರೂ ಮಾಡಿರದ ಸಾಧನೆ ಮಾಡಿತು. ಜೊತೆಗೆ ಸತತ ಎರಡನೇ ಬಾರಿ ಕಪ್ ಗೆದ್ದ ಎರಡನೇ ತಂಡವಾಗಿದೆ.ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ದಾಖಲೆಯ ಐದನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ಇತಿಹಾಸ ರಚಿಸಿತು.
ಈ ಮೂಲಕ ಐಪಿಎಲ್ ನಡೆಸಿಯೇ ತೀರುತ್ತೇವೆ ಎಂದು ಟೊಂಕಕಟ್ಟಿ ನಿಂತ ಬಿಸಿಸಿಐ ಕೊನೆಗೂ ಇದರಲ್ಲಿ ಯಶಸ್ವಿಯಾಗಿದೆ.ಐಪಿಎಲ್ 2020ರ ಪ್ಲೇ ಆಫ್ಗೆ ಒಟ್ಟು ನಾಲ್ಕು ತಂಡಗಳು ಪ್ರವೇಶ ಮಾಡಿದ್ದವು. ಮುಂಬೈ ಮೊದಲನೆ ತಂಡವಾಗಿ ಲಗ್ಗೆಯಿಟ್ಟಿದ್ದರೆ, ನಂತರದಲ್ಲಿ ಡೆಲ್ಲಿ, ಆರ್ಸಿಬಿ ಹಾಗೂ ಹೈದರಾಬಾದ್ ಪ್ಲೇ ಆಫ್ ಪ್ರವೇಶ ಪಡೆದಿದ್ದವು. ಮೊದಲ ಕ್ವಾಲಿಫೈಯರ್ನಲ್ಲಿ ಡೆಲ್ಲಿ ವಿರುದ್ಧ ಮುಂಬೈ ಜಯ ಸಾಧಿಸಿ ನೇರವಾಗಿ ಫೈನಲ್ ಟಿಕೇಟ್ ಪಡೆದುಕೊಂಡಿತು. ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಗೆದ್ದ ಎಸ್ಆರ್ಹೆಚ್, 2ನೇ ಕ್ವಾಲಿಫೈಯರ್ನಲ್ಲಿ ಸೋತ ಪರಿಣಾಮ ಡೆಲ್ಲಿ ಫೈನಲ್ಗೆ ಪ್ರವೇಶ ಪಡೆಯಿತು.ಅಂತಿಮ ಫೈನಲ್ ಹಣಾಹಣಿಯಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್, ನಾಯಕ ಶ್ರೇಯಸ್ ಅಯ್ಯರ್ (ಅಜೇಯ 65) ಹಾಗೂ ರಿಷಭ್ ಪಂತ್ (56) ಅವರ ಉತ್ತಮ ಜೊತೆಯಾಟದ ನೆರವಿನಿಂದ 20 ಓವರ್ಗಳಲ್ಲಿ 156 ರನ್ ಗಳಿಸಿತು.