(ನ್ಯೂಸ್ ಕಡಬ) newskadaba.com ಅಮೆರಿಕ ನ. 08: ಡೊನಾಲ್ಡ್ ಟ್ರಂಪ್ ವಿರುದ್ಧ ಗೆಲುವು ಸಾಧಿಸಿ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್ ಅವರು ದೇಶದ ಜನರಲ್ಲಿ ಒಗ್ಗಟ್ಟು ಮೂಡಿಸುವ ತಮ್ಮ ಇಚ್ಛೆಯನ್ನು ತೋರ್ಪಡಿಸಿದ್ದಾರೆ. ಡೆಲಾವೇರ್ ರಾಜ್ಯದ ವಿಲ್ಮಿಂಗ್ಟನ್ ನ ಗರದಲ್ಲಿರುವ ತಮ್ಮ ಮನೆಯ ಬಳಿ ನೆರೆದಿದ್ದ ಬೆಂಬಲಿಗರನ್ನುದ್ದೇಶಿಸಿ ಮಾತನಾಡುತ್ತಾ ಬೈಡನ್ ಅವರು ಈಗ ಅಮೆರಿಕಕ್ಕೆ ಚಿಕಿತ್ಸಕ ಸಮಯ ಬಂದಿದೆ ಎಂದರು.
“ನಾನು ಅಮೆರಿಕ ಅಧ್ಯಕ್ಷನಾಗಿ ಈ ದೇಶದ ಆತ್ಮಕ್ಕೆ ಮರುಜೀವ ತುಂಬಲು, ಈ ದೇಶದ ಬೆನ್ನೆಲುಬಾದ ಮಧ್ಯಮ ವರ್ಗದವರಿಗೆ ಪುಷ್ಟಿ ತುಂಬಲು ಮತ್ತು ಅಮೆರಿಕಕ್ಕೆ ಮತ್ತೆ ಜಾಗತಿಕ ಗೌರವ ಸಿಗಲು ಕೆಲಸ ಮಾಡುತ್ತೇನೆ” ಎಂದು ಜೋ ಬೈಡನ್ ಹೇಳಿದರು.“ಈ ದೇಶದ ಜನರು ಮಾತನಾಡಿದ್ದಾರೆ. ನಮಗೆ ಸ್ಪಷ್ಟ ಗೆಲುವು ನೀಡಿದ್ದಾರೆ” ಎಂದು ಹೇಳಿದ ಅವರು, ಟ್ರಂಪ್ ಅವರನ್ನು ಸೋಲಿಸಲು ಪ್ರಮುಖ ಪಾತ್ರ ವಹಿಸಿದ ಆಫ್ರಿಕನ್-ಅಮೆರಿಕನ್ ಸಮುದಾಯಕ್ಕೆ ಇದೇ ವೇಳೆ ವಂದನೆ ಸಲ್ಲಿಸಿದರು.ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಾಟ್ ಪಕ್ಷದ ಜೋ ಬೈಡನ್ ಅವರು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧ ಅಮೋಘ ಗೆಲುವು ಸಾಧಿಸಿದರು. ಬಹುಮತಕ್ಕೆ ಬೇಕಾದ 270 ಎಲೆಕ್ಟೋರಲ್ ವೋಟ್ಗಳ ಪ್ರಮಾಣ ದಾಟಿ ಬೈಡನ್ 290 ವೋಟರ್ಸ್ ಬೆಂಬಲ ಹೊಂದಿದ್ದಾರೆ. ಡೊನಾಲ್ಡ್ ಟ್ರಂಪ್ ಅವರಿಗಿರುವ ಬೆಂಬಲ 213 ಮಾತ್ರ. ಬೈಡನ್ ಈವರೆಗೆ 7.45 ಕೋಟಿ ಜನರ ಮತಗಳನ್ನ ಪಡೆದರೆ, ಟ್ರಂಪ್ 7.02 ಕೋಟಿ ಜನರ ಬೆಂಬಲ ಪಡೆದಿದ್ದಾರೆ.