ಕಲ್ಲುಗುಡ್ಡೆ: ರಾಷ್ಟ್ರೀಯ ಹೆದ್ದಾರಿ ಸಂಪರ್ಕ ರಸ್ತೆ ಸ್ಥಿತಿ ಶೋಚನೀಯ; ➤ ಗುದ್ದಲಿ ಪೂಜೆ ನಡೆದು 10 ತಿಂಗಳಾದರೂ ಆರಂಭವಾಗದ ಕಾಮಗಾರಿ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ನ. 07. ರಸ್ತೆ ಅಭಿವೃದ್ಧಿ ನಡೆಸಲು ಹತ್ತು ತಿಂಗಳ ಹಿಂದೆ ಗುದ್ದಲಿ ಪೂಜೆ ನಡೆಸಿ ಚಾಲನೆ ನೀಡಲಾಗಿದ್ದರೂ ರಸ್ತೆ ಅಭಿವೃದ್ಧಿ ಕಾಮಗಾರಿ ಇನ್ನೂ ಆರಂಭವಾಗದೇ ಹದಗೆಟ್ಟ ರಸ್ತೆಯಲ್ಲಿಯೇ ಜನತೆ ಇಂದಿಗೂ ಸಂಚರಿಸುತ್ತಿದ್ದಾರೆ. ಕಡಬ ತಾಲೂಕಿನ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಎಂಜೀರ ಸಂಪರ್ಕಿಸುವ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ-ಅಡೆಂಜ ರಸ್ತೆ ಶೋಚನೀಯ ಸ್ಥಿತಿಯಲ್ಲಿದೆ. ಜಿ.ಪಂ. ರಸ್ತೆಯಾಗಿರುವ ಈ ರಸ್ತೆಯು ಎರಡು ದಶಕಗಳಿಗೂ ಹಿಂದೆ ಡಾಂಬರೀಕರಣಗೊಂಡಿದ್ದು, ಆ ಬಳಿಕ ಅಭಿವೃದ್ಧಿ ನಡೆದಿಲ್ಲ ಎನ್ನುತ್ತಾರೆ ಸ್ಥಳೀಯರು.

 

ಆರಂಭವಾಗದ ಕಾಮಗಾರಿ;

ಕಲ್ಲುಗುಡ್ಡೆ-ಅಡೆಂಜ ರಸ್ತೆಯ ಸುಮಾರು 1 ಕಿ.ಮೀ.ವರೆಗೆ ಈಗಾಗಲೇ ಜಿಲ್ಲಾಧಿಕಾರಿಗಳ ಮಳೆಹಾನಿ ಅನುದಾನದಡಿ ಡಾಮರೀಕರಣಗೊಂಡಿದೆ. ಉಳಿಕೆ ಸುಮಾರು 2 ಕಿ.ಮೀ ರಸ್ತೆ ತೀರಾ ಹದಗೆಟ್ಟಿದ್ದು, ಹೊಂಡ-ಗುಂಡಿಗಳಿಂದ ವಾಹನ ಸವಾರರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ರಸ್ತೆ ಅಭಿವೃದ್ಧಿಗೆ ರೂ. 25 ಲಕ್ಷ ಅನುದಾನ ಮಂಜೂರುಗೊಂಡಿದ್ದು, ಕಳೆದ ಜನವರಿಯಲ್ಲಿ ಸುಳ್ಯ ಶಾಸಕ ಎಸ್.ಅಂಗಾರ ಅವರು ಗುದ್ದಲಿ ಪೂಜೆ ನಡೆಸಿ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ 10 ತಿಂಗಳು ಕಳೆದರೂ ಕಾಮಗಾರಿ ನಡೆಸದೇ ಇರುವ ಬಗ್ಗೆ ಇದೀಗ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Also Read  ➤ಬೆಂಗಳೂರಲ್ಲಿ ಮಹಡಿಯಿಂದ ಜಿಗಿದು ಗಗನಸಖಿ ಆತ್ಮಹತ್ಯೆ


ರಾಷ್ಟ್ರೀಯ ಹೆದ್ದಾರಿ ಸಂಪರ್ಕ;
ಕಲ್ಲುಗುಡ್ಡೆ-ಅಡೆಂಜ ರಸ್ತೆಯಲ್ಲಿ ಅಡೆಂಜ ಸರಕಾರಿ ಶಾಲೆ, ಅಂಗನವಾಡಿ, ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ದೇವಸ್ಥಾನ, ಅಡೆಂಜ ತೂಗುಸೇತುವೆ, ಮಂಗಳೂರು-ಬೆಂಗಳೂರು ರಾ.ಹೆ. ಎಂಜೀರ ಎಂಬಲ್ಲಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಸ್ಥಿತಿ ತೀರಾ ಹದಗೆಟ್ಟಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಕಾಮಗಾರಿ ನಡೆಯದ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂಬ ಆರೋಪ ವ್ಯಕ್ತವಾಗಿದೆ. ಅಡೆಂಜ ದೇವಸ್ಥಾನ ಸಂಪರ್ಕದ ಸುಮಾರು 500 ಮೀಟರ್ ರಸ್ತೆ ಇಂದಿಗೂ ಮಣ್ಣಿನ ರಸ್ತೆಯಾಗಿಯೇ ಉಳಿದಿದ್ದು, ಮಳೆಗಾಲದಲ್ಲಿ ಕೆಸರುಮಯಗೊಂಡು ಸಂಚಾರ ಕಷ್ಟಕರವಾಗಿರುತ್ತದೆ.


ದುರಸ್ತಿಯಾಗದ ತಡೆಗೋಡೆ;
ಅಡೆಂಜ ಸಂಪರ್ಕ ರಸ್ತೆಯ ಅರಿಮಜಲು ಎಂಬಲ್ಲಿ ಹರಿಯುತ್ತಿರುವ ಸೇತುವೆಯ ತಡೆಗೋಡೆ ವಾಹನ ಅಪಘಾತದಿಂದಾಗಿ ಕುಸಿದು ವರ್ಷ ಕಳೆದರೂ ಸೇತುವೆ ತಡೆಬೇಲಿ ದುರಸ್ತಿಗೊಳ್ಳದೆ, ಇನ್ನೂ ಅಪಾಯವನ್ನು ಆಹ್ವಾನಿಸುತ್ತಿದೆ. ಅಲ್ಲದೆ ಇದೇ ರಸ್ತೆಯ ಬಾಳೇಮಾರು ಬಳಿ ಮೋರಿಯೂ ಕುಸಿತಗೊಳ್ಳುವ ಭೀತಿಯಲ್ಲಿದೆ. ಕೂಡಲೇ ರಸ್ತೆ, ಸೇತುವೆ ತಡೆಬೇಲಿ ಅಭಿವೃದ್ಧಿಗೆ ಸಂಬಂಧಿಸಿದವರು ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Also Read  ಬೆಳ್ತಂಗಡಿ: ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಚಿಕಿತ್ಸೆ ಫಲಿಸದೇ ಮೃತ್ಯು

 

ಕೋಟ್ – 1;
ಅಡೆಂಜ ರಸ್ತೆ ಕಾಮಗಾರಿ ನಿರ್ವಹಣೆಗೆ 3, 4ಬಾರಿ ಟೆಂಡರ್ ಕರೆದರೂ ಯಾರು ಟೆಂಡರ್ ಹಾಕಿರಲಿಲ್ಲ. ಇದೀಗ ಒಬ್ಬರು ಟೆಂಡರ್ ಪಡೆದುಕೊಂಡಿದ್ದು, ಅಗ್ರಿಮೆಂಟ್ ಪ್ರಕ್ರಿಯೆ ನಡೆಯುತ್ತಿದೆ. ಬಳಿಕ ಕಾಮಗಾರಿ ನಡೆಸಲಿದ್ದಾರೆ.
– ಎಸ್.ಎಸ್. ಹುಕ್ಕೇರಿ ಜಿ.ಪಂ. ಇಂಜೀನಿಯರ್ ಪುತ್ತೂರು

ವರದಿ; ದಯಾನಂದ ಕಲ್ನಾರ್

error: Content is protected !!
Scroll to Top