(ನ್ಯೂಸ್ ಕಡಬ) newskadaba.com ಮಂಗಳೂರು, ನ. 05. ಕೋವಿಡ್-19 ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ನಗರ ಪ್ರದೇಶದ ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ಸಹಾಯ ನೀಡುವ ತುರ್ತು ಕಿರು ಸಾಲವನ್ನು ಒದಗಿಸುವ ಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ಒದಗಿಸಬೇಕೆಂದು ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ ತಿಳಿಸಿದರು.
ಅವರು ತಮ್ಮ ಕಛೇರಿ ಸಭಾಂಗಣದಲ್ಲಿ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋರೊನಾ ಸೋಂಕು ನಿಯಂತ್ರಣಕ್ಕೆ ರಾಷ್ಟ್ರದಾದ್ಯಂತ ಲಾಕ್ ಡೌನ್ ಘೋಷಿಸಲಾಗಿತ್ತು. ಇದರಿಂದಾಗಿ ಅನೇಕ ಜನರು ಉದ್ಯೋಗ ವಂಚಿತರಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ನಗರ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೀದಿಬದಿ ವ್ಯಾಪಾರಿಗಳಿಗೆ ತಮ್ಮ ವ್ಯಾಪಾರ ಚಟುವಟಿಕೆಗಳನ್ನು ಕೈಗೊಳ್ಳಲು ಆರ್ಥಿಕ ಸಹಾಯ ಒದಗಿಸಲು ಪ್ರಧಾನಮಂತ್ರಿ ಬೀದಿ ಬದಿ ಆತ್ಮನಿರ್ಭರ್ ಯೋಜನೆಯನ್ನು ಜಾರಿಗೆ ತಂದಿದ್ದು ಅರ್ಹ ಫಲಾನುಭವಿಗಳು ಇದರ ಉಪಯೋಗ ಪಡೆಯುವಂತೆ ಅಧಿಕಾರಿಗಳು ಒತ್ತು ನೀಡಬೇಕೆಂದರು. ಈ ಯೋಜನೆಯು ಕಳೆದ ಜೂನ್ ನಿಂದ ಜಾರಿಗೆ ಬಂದಿದ್ದು ಪ್ರತೀ ಅರ್ಹ ಫಲಾನುಭವಿಗಳಿಗೆ ರೂ.10,000 ಬ್ಯಾಂಕ್ ಸಾಲವನ್ನ ಶೇ 7% ಬಡ್ಡಿ ಸಹಾಯ ಧನದೊಂದಿಗೆ ನೀಡಲಾಗುತ್ತಿದ್ದು ಇದರ ಮರುಪಾವತಿಯನ್ನ 12 ಮಾಸಿಕ ಕಂತುಗಳಲ್ಲಿ ಪಾವತಿ ಮಾಡಬಹುದಾಗಿದೆ ಎಂದರು.
ಈ ಯೋಜನೆಯ ಡಿಜಿಟಲ್ ವ್ಯವಹಾರ ಪ್ರೋತ್ಸಾಹ ನೀಡುವುದರೊಂದಿಗೆ ನಿಯಮಿತವಾಗಿ ಸಾಲ ಮರುಪಾವತಿ ಮಾಡಿದ್ದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ರೂ.1,200 ಕ್ಯಾಶ್‍ಬ್ಯಾಕ್ ಪಡೆಯಲು ಅವಕಾಶವಿದೆ ಎಂದರು.
ಜಿಲ್ಲೆಯು ಮಹಾನಗರ ಪಾಲಿಕೆ. ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಅರ್ಹ ಫಲಾನುಭವಿಗಳಿಂದ ಅರ್ಜಿ ಪಡೆದು ಅವರುಗಳನ್ನು ಫಲಾನುಭವಿಗಳನ್ನಾಗಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು. ಈ ಯೋಜನೆಯ ಬಗ್ಗೆ ಅರಿವು ಮೂಡಿಸಿ ಹೂ, ಹಣ್ಣು, ಎಳೆನೀರು, ಮೀನು, ಗೃಹೋಪಯೋಗಿ ವಸ್ತುಗಳು, ತರಕಾರಿ ಮುಂತಾದವುಗಳನ್ನು ತಲೆಹೊರೆ, ತಳ್ಳುಗಾಡಿ, ಸೈಕಲ್, ಮೋಟಾರ್ ಸೈಕಲ್ ಮೂಲಕ ಮನೆಮನೆಗೆ ತೆರಳಿ ಅಥವಾ ಬೀದಿಗಳಲ್ಲಿ ವ್ಯಾಪಾರ ಮಾಡುತ್ತಿರುವ ಲಾಭವನ್ನು ಪಡೆಯಬಹುದಾಗಿದೆ ಎಂದರು. ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್, ಮಹಾನಗರ ಪಾಲಿಕೆಯ ಜಂಟಿ ಆಯುಕ್ತರು ಸಂತೋಷ್. ಈ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರವೀಣ್, ಹಾಗೂ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳು, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಡೇ-ನಲ್ಮ್ ಅಭಿಯಾನ ವ್ಯವಸ್ಥಾಪಕರು ಹಾಗೂ ಡೇ-ನಲ್ಮ್ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.