(ನ್ಯೂಸ್ ಕಡಬ) newskadaba.com ಸುಳ್ಯ, ನ. 05: ತಿಂಗಳ ಹಿಂದೆ ಸರಕಾರದಿಂದ ಬಿಡುಗಡೆಗೊಂಡಿದ್ದ ಅತಿವೃಷ್ಟಿ/ಪ್ರವಾಹ ಪೀಡಿತ ತಾಲೂಕು ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯವನ್ನು ಹೊರತುಪಡಿಸಿ ಉಳಿದ ಎಲ್ಲಾ ತಾಲೂಕುಗಳನ್ನು ಆ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿತ್ತು. ಇದೀಗ ಮತ್ತೆ ಸುಳ್ಯ ತಾಲೂಕನ್ನು ಸೇರ್ಪಡೆಗೊಳಿಸಿ ಸರಕಾರದಿಂದ ಆದೇಶ ಮಾಡಲಾಗಿದೆ.
ಸುಳ್ಯ ತಾಲೂಕಿನಲ್ಲಿ ಈ ಬಾರಿ ವಿಪರೀತ ಮಳೆಯಾಗಿದ್ದು, ಕೃಷಿ ಸೇರಿದಂತೆ, ಮನೆಗಳಿಗೂ ಹಾನಿಯಾಗಿತ್ತು. ಅತಿವೃಷ್ಟಿ ಪಟ್ಟಿಯಲ್ಲಿ ಸುಳ್ಯ ಸೇರದಿದ್ದುದರಿಂದ ತಾಲೂಕಿನಲ್ಲಿ ಆದ ನಷ್ಟಗಳಿಗೂ ಪರಿಹಾರ ಸಿಗದೆ ಸ್ಥಿತಿ ಎದುರಾಗಿತ್ತು. ಬಳಿಕ ಶಾಸಕರು ಎಸ್.ಅಂಗಾರರು ಸರಕಾರಕ್ಕೆ ಪತ್ರ ಬರೆದು ಅತಿವೃಷ್ಟಿ ಪಟ್ಟಿಗೆ ಸುಳ್ಯ ತಾಲೂಕನ್ನು ಸೇರಿಸುವಂತೆ ಮನವಿ ಮಾಡಿಕೊಂಡಿದ್ದರು. ಅಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ವರದಿ ನೀಡಿದ್ದರು. ಕಾಂಗ್ರೇಸ್ ಪಕ್ಷದ ವತಿಯಿಂದ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು. ಇದೀಗ ಸುಳ್ಯ ತಾಲೂಕನ್ನು ಈ ಪಟ್ಟಿಗೆ ಸೇರ್ಪಡೆಗೊಳಿಸಿ ಕಂದಾಯ ಇಲಾಖೆಯ ಅಪರ ಕಾರ್ಯದರ್ಶಿಯವರು ಆದೇಶ ಮಾಡಿದ್ದಾರೆ.