(ನ್ಯೂಸ್ ಕಡಬ) newskadaba.com ನ. 01. ಅಂಡಾಶಯದ ನಾರುಗಡ್ಡೆ ಮಹಿಳೆಯರಲ್ಲಿ ಕಂಡು ಬರುವ ದೈಹಿಕ ಸಮಸ್ಯೆಯಾಗಿದ್ದು, ಆಂಗ್ಲ ಭಾಷೆಯಲ್ಲಿ ‘ಚಾಕೋಲೆಟ್ ಸಿಸ್ಟ್’ ಎಂದೂ ಕರೆಯುತ್ತಾರೆ. ಇದು ಅಂಡಾಶಯದ ಒಳಭಾಗದ ಒಳಪದರದಲ್ಲಿ ಹೆಪ್ಪುಗಟ್ಟಿದ ರಕ್ತವನ್ನು ಹೊಂದಿರುವ ಚಿಕ್ಕ ಚಿಕ್ಕ ಗಡ್ಡೆಗಳಾಗಿದ್ದು, ಕೆಲವೊಮ್ಮೆ ದ್ರಾಕ್ಷಿಯಂತೆ ಗೊಂಚಲಾಗಿ ಕಂಡು ಬರುತ್ತದೆ. ಆರಂಭಿಕ ಹಂತದಲ್ಲಿ ಇವುಗಳ ಇರುವಿಕೆ ಯಾವುದೇ ಲಕ್ಷಣಗಳನ್ನು ತೋರದೇ ಇರಬಹುದು. ಕ್ರಮೇಣ ಈ ಗಡ್ಡೆಗಳ ಗಾತ್ರ ದೊಡ್ಡದಾದಂತೆ ಕೆಲವು ಗಡ್ಡೆಗಳು ಒಡೆದು ಅದರೊಳಗಿನ ರಕ್ತಸ್ರಾವವಾಗಿ ಕಿಬ್ಬೊಟ್ಟೆಯ ಬಳಿ ತೀವ್ರತರವಾದ ನೋವು ಕಾಣಿಸಿಕೊಳ್ಳಬಹುದು. ಇನ್ನು ಕೆಲವೊಮ್ಮೆ ಈ ಚಿಕ್ಕ ಗಡ್ಡೆಗಳು ತನ್ನಿಂತಾನೇ ಕರಗಿ ಹೋಗಬಹುದು. ಅತೀ ವಿರಳ ಸಂದರ್ಭಗಳಲ್ಲಿ ಈ ಮೆದುವಾದ ಗಡ್ಡೆಗಳು ಅಲ್ಲಿಯೇ ಘನೀಕರಿಸಿ ಅದರೊಳಗಿನ ಜೀವಕೋಶಗಳು ಕ್ಯಾನ್ಸರ್ ಗಡ್ಡೆಗಳಾಗಿ ಪರಿವರ್ತಿನೆಯಾಗಬಹುದು. ಸಕಾಲದಲ್ಲಿ ಗುರುತಿಸಿ, ಅಲ್ಟ್ರಾಸೌಂಡ್ ಪರೀಕ್ಷೆ ಮೂಲಕ ಈ ಗಡ್ಡೆಗಳ ಗಾತ್ರ, ಸಂಖ್ಯೆ ಮತ್ತು ಸಂಕೀರ್ಣತೆಯನ್ನು ಅರಿತು ಸ್ತ್ರೀರೋಗ ತಜ್ಞರು ಚಿಕಿತ್ಸೆ ನೀಡುತ್ತಾರೆ. ಈ ಗಡ್ಡೆಗಳನ್ನು ಆರಂಭದಲ್ಲಿಯೇ ಗುರುತಿಸಿ ಅದು ಮತ್ತಷ್ಟು ದೊಡ್ಡದಾಗದಂತೆ ತಡೆಯಲು ಔಷಧಿ ನೀಡಿ ಮುಂದೆ ಬರುವ ಅಪಾಯವನ್ನು ತಡೆಯಲು ಸಾಧ್ಯವಿದೆ.
ಮಹಿಳೆಯ ಗರ್ಭಾಶಯದ ಒಳಭಾಗದ ಪದರವನ್ನು ಎಂಡೋಮೆಟ್ರಿಯಮ್ ಎನ್ನುತ್ತಾರೆ. ಗರ್ಭ ಧರಿಸುವ ಪ್ರಾಯದ ಎಲ್ಲಾ ಮಹಿಳೆಯರಲ್ಲೂ ಈ ಪದರ ಕಂಡುಬರುತ್ತದೆ. ತಿಂಗಳಿಗೊಮ್ಮೆ ರಸದೂತದ ವ್ಯತ್ಯಾಸದ ಪರಿಣಾಮವಾಗಿ ಈ ಪದರ ಕಳಚಿಕೊಂಡ ಮಹಿಳೆಯರಲ್ಲಿ ಋತುಚಕ್ರ ಮತ್ತು ಋತುಸ್ರಾವಕ್ಕೆ ಕಾರಣವಾಗುತ್ತದೆ. ರಸದೂತಗಳು ಮಹಿಳೆಯ ಗರ್ಭಾಶಯದೊಳಗಿನ ಅಂಡಾಣುಗಳು ವೀರ್ಯಾಣುಗಳು ಜೊತೆ ಕೂಡಲು ಬೇಕಾದ ವಾತಾವರಣವನ್ನು ಕಲ್ಪಿಸುತ್ತದೆ. ಅಂಡಾಣುಗಳು ಮತ್ತು ವೀರ್ಯಾಣುಗಳು ಸಂಪರ್ಕಕ್ಕೆ ಬರದೇ ಇದ್ದಾಗ ಗರ್ಭಾಶಯದ ಒಳಪದರವಾದ ಎಂಡೋಮೆಟ್ರಿಯಮ್ ಪೊರೆ ಕಳಚಿಕೊಂಡು ದೇಹದಿಂದ ಹೊರಹಾಕಲ್ಪಡುತ್ತದೆ. ಇನ್ನು ಕೆಲವೊಮ್ಮೆ ಗರ್ಭಾಶಯದ ಒಳಭಾಗದಲ್ಲಿನ ಈ ಪದರ ಗರ್ಭಾಶಯದ ಹೊರಭಾಗಗಳಾದ ಅಂಡಾಶಯ, ಪೆಲೋಪಿಯನ್ ನಳಿಕೆ ಮತ್ತು ಗರ್ಭಾಶಯದ ಸುತ್ತಲಿನ ಭಾಗಗಳಲ್ಲಿ ಬೆಳೆಯುತ್ತದೆ. ಇದನ್ನೇ ಎಂಡೋಮೆಟ್ರಿಯಾಸಿಸ್ ಎನ್ನುತ್ತಾರೆ. ಈ ಸಮಯದಲ್ಲಿ ಮಹಿಳೆಯರಿಗೆ ಋತುಚಕ್ರದ ಸಮಯದಲ್ಲಿ ಉಂಟಾಗುವಂತೆ ಕಿಬ್ಬೊಟ್ಟೆ ನೋವು, ರಕ್ತಸ್ರಾವ ಮತ್ತು ವಿಪರೀತ ಯಾತನೆ ಕಂಡುಬರುತ್ತದೆ. ಇದರ ಜೊತೆಗೆ ಸೊಂಟ ನೋವು ಮತ್ತು ಸಂತಾನಹೀನತೆಗೂ ಕಾರಣವಾಗುತ್ತದೆ. ದೈಹಿಕ ಸಂಪರ್ಕದ ಸಮಯದಲ್ಲಿ ನೋವು ಕೂಡಾ ಇರುತ್ತದೆ. ದೈಹಿಕ ನೋವಿನ ಜೊತೆಗೆ ಮಾನಸಿಕ ಕಿರಿಕಿರಿ, ಒತ್ತಡ ಮತ್ತು ಆತಂಕ ಕಂಡು ಬರುತ್ತದೆ.
ಏನಿದು ಚಾಕೋಲೇಟ್ ಸಿಸ್ಟ್ ಗಳು?
ಇದು ಕ್ಯಾನ್ಸರ್ ಅಲ್ಲದ ರಕ್ತ ಮತ್ತು ದ್ರವ ತುಂಬಿದ ಚೀಲಗಳಾಗಿದ್ದು ಇದು ಅಂಡಾಶಯದ ಒಳಗೆ ಕಂಡುಬರುತ್ತದೆ. ಈ ಗಡ್ಡೆಗಳು ಕಂದು ಅಥವಾ ಬ್ರೌನ್ ಅಥವಾ ಕರಗಿದ ಚಾಕೋಲೇಟ್ ಬಣ್ಣವನ್ನು ಹೊಂದಿರುವುದರಿಂದ ಚಾಕೋಲೆಟ್ ಸಿಸ್ಟ್ ಎಂದೂ ಕರೆಯುತ್ತದೆ. ಅಂಡಾಶಯದ ಎಂಡೋಮೆಟ್ರಿಯೋಮಾ ಎಂದೂ ಇವುಗಳನ್ನು ಕರೆಯಲಾಗುತ್ತದೆ. ಋತುಸ್ರಾವದ ಸಮಯದಲ್ಲಿನ ಉಂಟಾದ ರಕ್ತಸ್ರಾವ ಅಂಡಾಶಯದೊಳಗೆ ಹೆಪ್ಪುಗಟ್ಟಿ ಗಡ್ಡೆಗಳಾಗಿ ಮಾರ್ಪಾಡಾಗುತ್ತದೆ. ಒಂದು ಅಥವಾ ಎರಡೂ ಅಂಡಾಶಯಗಳನ್ನು ಇದು ಕಾಡಬಹುದು. ಅವುಗಳ ಸಂಖ್ಯೆ ಕೇವಲ ಒಂದು ಇರಬಹುದು ಅಥವಾ ಹತ್ತಾರು ಗಡ್ಡೆಗಳು ಇರಬಹುದು. ಎಂಡೋಮೆಟ್ರಿಯಾಸಿಸ್ ಸಮಸ್ಯೆಯಿಂದ ಬಳಲುತ್ತಿರುವ 20 ರಿಂದ 40 ಶೇಕಡಾ ಮಹಿಳೆಯರಲ್ಲಿ ಈ ಚಾಕೋಲೆಟ್ ಸಿಸ್ಟ್ ಕಂಡು ಬರಬಹುದು. ಗರ್ಭಕೊಳದ ಒಳಪದರವಾದ ಎಂಡೋಮೆಟ್ರಿಯಮ್ ಅಂಡಾಶಯದ ಒಳಭಾಗಕ್ಕೆ ಬೆಳೆದು ಅದರೊಳಗೆ ಹೆಪ್ಪುಗಟ್ಟಿದ ರಕ್ತ ಸೇರಿಕೊಂಡು ಈ ರೀತಿ ಗಡ್ಡೆ ಅಥವಾ ಚಾಕೋಲೆಟ್ ಸಿಸ್ಟ್ ಆಗುತ್ತದೆ ಎಂದು ಅಂದಾಜಿಸಲಾಗಿದೆ.
ರೋಗದ ಲಕ್ಷಣಗಳು:-
ಕೆಲವೊಂದು ಮಹಿಳೆಯರಲ್ಲಿ ಯಾವುದೇ ಲಕ್ಷಣಗಳು ಕಾಣಿಸದೆ ಇರಬಹುದು. ಇನ್ನು ಕೆಲವರಲ್ಲಿ ಲಕ್ಷಣಗಳು ಕಂಡುಬರುತ್ತದೆ. ಈ ಗಡ್ಡೆಗಳು 2 ರಿಂದ 20m ವರೆಗೂ ಇರಬಹುದು. ಈ ಗಡ್ಡೆಗಳ ಗಾತ್ರಕ್ಕೂ ಲಕ್ಷಣಗಳಿಗೂ ಸಂಬಂಧವಿರುವುದಿಲ್ಲ. ಈ ರೋಗದ ಲಕ್ಷಣಗಳು ಹೆಚ್ಚಾಗಿ ಎಂಡೋಮೆಟ್ರಿಯೋಸಿಸ್ ರೋಗದ ಲಕ್ಷಣಗಳಂತೆ ಕಂಡು ಬರುತ್ತದೆ.
1) .ವಿಪರೀತ ನೋವು, ಸ್ನಾಯು ಸೆಳೆತ ಇರುತ್ತದೆ.
2). ಸೊಂಟದ ಬಳಿ ವಿಪರೀತ ನೋವು ಇದು ನಿಮ್ಮ ಋತು ಚಕ್ರಕ್ಕೆ ಸಂಬಂಧ ಇಲ್ಲದೇ ಇರಬಹುದು.
3). ಋತುಚಕ್ರದ ದಿನಗಳಲ್ಲಿ ವ್ಯತ್ಯಾಸ ಬರಬಹುದು.
4). ದೈಹಿಕ ಸಮಾಗಮದ ಸಂದರ್ಭದಲ್ಲಿ ನೋವು ಕಂಡು ಬರಬಹುದು.
5). ಸಂತಾನ ಹೀನತೆ ಅಥವಾ ಗರ್ಭಧಾರಣೆಗೆ ಅಡ್ಡಿ ಉಂಟಾಗಬಹುದು.
ಯಾವಾಗ ಈ ಗಡ್ಡೆಗಳು ತನ್ನಿಂತಾನೇ ಒಡೆದಾಗ ವಿಪರೀತ ನೋವು ಮತ್ತು ರಕ್ತಸ್ರಾವ ಇರುತ್ತದೆ. ಇದೊಂದು ವೈದ್ಯಕೀಯ ತುರ್ತು ಪರಿಸ್ಥಿತಿ ಆಗಿದ್ದ ತಕ್ಷಣವೇ ವೈದ್ಯರನ್ನು ಕಾಣಬೇಕಾದ ಅನಿವಾರ್ಯತೆ ಇರುತ್ತದೆ.
ಯಾಕಾಗಿ ಉಂಟಾಗುತ್ತದೆ: ಈ ಗಡ್ಡೆಗಳ ಒಳಭಾಗದ ಪದರ ಗರ್ಭಾಶಯದ ಪದರದಂತೆ ಇರುತ್ತದೆ. ಈ ಕಾರಣದಿಂದ ಎಂಡೋಮೆಟ್ರಿಯೋಸಿಸ್ ಕಾರಣದಿಂದಲೇ ಈ ಗಡ್ಡೆ ಬರುತ್ತದೆ ಎಂದೂ ಅಂದಾಜಿಲಾಗಿದೆ. ಈ ಗಡ್ಡೆಗಳು ಮಹಿಳೆಯರ ರಸದೂತಗಳು ಏರುಪೇರಿಗೆ ಪೂರಕವಾಗಿ ಸ್ಪಂದಿಸುತ್ತದೆ. ದೇಹದಿಂದ ಹೊರಹೋಗಬೇಕಾದ ಅಂಗಾಂಶ ಮತ್ತು ಹೆಪ್ಪುಗಟ್ಟಿದ ರಕ್ತ ಅಂಡಾಶಯದ ಒಳಗೆ ಸೇರಿಕೊಂಡು ಗಡ್ಡೆಗಳಾಗಿ ಪರಿವರ್ತನೆ ಆಗಿ ತೊಂದರೆಗಳಿಗೆ ಕಾರಣವಾಗುತ್ತದೆ.
ಹೇಗೆ ಪತ್ತೆ ಹಚ್ಚುವುದು?
1). ರೋಗದ ಲಕ್ಷಣಗಳಾದ ನೋವು, ರಕ್ತಸ್ರಾವ, ಸ್ನಾಯುಸೆಳೆತ ಮತ್ತು ಋತುಚಕ್ರದ ಸಮಯದಲ್ಲಿ ನೋವು ಜಾಸ್ತಿಯಾಗುತ್ತದೆ.
2). ಸ್ತ್ರೀರೋಗ ತಜ್ಞರು ಕೂಲಂಕುಶವಾಗಿ ದೈಹಿಕ ತಪಾಸಣೆ ಮಾಡಿದಾಗ ಪತ್ತೆ ಹಚ್ಚುತ್ತಾರೆ.
3). ಗರ್ಭಧಾರಣೆ ಹೊಂದದೆ ಇದ್ದಾಗ ವೈದ್ಯರು ಈ ರೀತಿ ತೊಂದರೆ ಇರಬಹುದು ಎಂದು ಅಂದಾಜಿಸುತ್ತಾರೆ ಮತ್ತು ಅಲ್ಟ್ರಾ ಸೌಂಡ್ ಪರೀಕ್ಷೆ ಮಾಡಿ ಗಡ್ಡೆಯನ್ನು ಪತ್ತೆ ಹಚ್ಚುತ್ತಾರೆ. ಅಗತ್ಯವಿದ್ದಲ್ಲಿ ಸೂಜಿಯನ್ನು ಗರ್ಭಾಶಯದೊಳಗೆ ತೂರಿಸಿ ಅಂಗಾಂಶ ಪಡೆಯ ಸೂಕ್ಷ್ಮ ದರ್ಶಕದ ಅಡಿಯಲ್ಲಿ ಪರೀಕ್ಷಿಸಿ ಕ್ಯಾನ್ಸರ್ ಗಡ್ಡೆ ಅಲ್ಲ ಎಂದೂ ನಿರ್ಧರಿಸುತ್ತಾರೆ.
ಚಿಕಿತ್ಸೆ ಹೇಗೆ?
ರೋಗಿಯ ವಯಸ್ಸು, ರೋಗದ ಲಕ್ಷಣ ಎಷ್ಟು ಅಂಡಾಶಯಗಳು ಈ ಸಿಸ್ಟ್ ನಿಂದ ತೊಂದರೆಗೊಳಗಾಗಿದೆ ಮತ್ತು ರೋಗಿಯ ಚರಿತ್ರೆಯನ್ನು ಆಧರಿಸಿ ಚಿಕಿತ್ಸೆಯನ್ನು ವೈದ್ಯರು ನಿರ್ಧರಿಸುತ್ತಾರೆ. ಅತೀ ಚಿಕ್ಕ ಗಡ್ಡೆಗಳು ಮತ್ತು ಯಾವುದೇ ರೀತಿ ಲಕ್ಷಣಗಳು ಇಲ್ಲವಾದಲ್ಲಿ ವೈದ್ಯರು ರೋಗಿಯನ್ನು ನಿರಂತರವಾಗಿ ಪರಿಶೀಲಿಸುತ್ತಾ ಇರುತ್ತಾರೆ. ರೋಗದ ಲಕ್ಷಣಗಳು ಕಂಡು ಬಂದಲ್ಲಿ ಅಥವಾ ಗಡ್ಡೆಯ ಗಾತ್ರ ಹೆಚ್ಚಾದಲ್ಲಿ ಚಿಕಿತ್ಸೆಗೆ ಸೂಚಿಸುತ್ತಾರೆ.
1). ಔಷಧಿ ಚಿಕಿತ್ಸೆ: ಗರ್ಭನಿರೋಧಕ ಔಷಧಿ ಬಳಸಿ ಅಂಡಾಣುಗಳು ಉತ್ಪತ್ತಿಯಾಗದಂತೆ ಮಾಡಿ ಈ ಗಡ್ಡೆಗಳು ಗಾತ್ರದಲ್ಲಿ ದೊಡ್ಡದಾಗದಂತೆ ತಡೆಯಲಾಗುತ್ತದೆ ಮತ್ತು ಅದರಿಂದ ಉಂಟಾಗುವ ನೋವು ಮತ್ತು ಯಾತನೆಯನ್ನು ನಿವಾರಿಸಲಾಗುತ್ತದೆ. ಈ ಔಷಧಿಗಳಿಂದ ಗಡ್ಡೆಗಳನ್ನು ನಾಶಪಡಿಸಲು ಸಾಧ್ಯವಿಲ್ಲ. ಆದರೆ ಗಡ್ಡೆಗಳು ಬೆಳೆಯದಂತೆ ತಡೆಯಬಹುದಾಗಿದೆ. ಈ ರೀತಿ ರಸದೂತಗಳನ್ನು ವೈದ್ಯರ ಸಲಹೆ ಇಲ್ಲದೆ ತೆಗೆದುಕೊಳ್ಳಲೇಬಾರದು.
2). ಶಸ್ತ್ರಚಿಕಿತ್ಸೆ: ಕೆಲವೊಮ್ಮೆ ಮಹಿಳೆಯರು ವಿಪರೀತ ನೋವು ಯಾತನೆ ಇದ್ದು, ಗಡ್ಡೆಗಳು 4 m ಗಿಂತ ಜಾಸ್ತಿ ಇದ್ದಾಗ ಶಸ್ತ್ರಚಿಕಿತ್ಸೆಗೆ ವೈದ್ಯರು ಸೂಚಿಸಬಹುದು. ಮಕ್ಕಳಾಗದೇ ಇರುವ ಮಹಿಳೆಯರಲ್ಲಿ ಶಸ್ತ್ರಚಿಕಿತ್ಸೆಗೆ ವೈದ್ಯರು ಸೂಚಿಸಬಹುದು. ಆ ಮೂಲಕ ಮುಂದೆ ಮಕ್ಕಳಾಗಲು ಪೂರಕವಾದ ವಾತಾವರಣ ನಿರ್ಮಿಸಲಾಗುತ್ತದೆ. ಇನ್ನು ಈ ಗಡ್ಡೆಗಳಲ್ಲಿ ಒಂದು ಶೇಕಡಾ ಗಡ್ಡೆಗಳು ಕ್ಯಾನ್ಸರ್ ಆಗಿ ಪರಿವರ್ತನೆ ಆಗುವ ಸಾಧ್ಯತೆಯೂ ಇರುತ್ತದೆ. ಅಂತಹಾ ಸಂದರ್ಭಗಳಲ್ಲಿ ವಿಶೇಷ ಕ್ಯಾನ್ಸರ್ ಸೂಚಕ ಮಾರ್ಕರ್‍ಗಳನ್ನು ರಕ್ತದಲ್ಲಿ ಪತ್ತೆ ಹಚ್ಚಿ ಶಸ್ತ್ರಚಿಕಿತ್ಸೆಗೆ ಸೂಚಿಸಲಾಗುತ್ತದೆ. ಈಗ ಲ್ಯಾಪರೋಸ್ಕೋಪಿ ಎಂಬ ವಿಶೇಷ ಸಲಕರಣೆಯಿಂದ ಸಣ್ಣದಾದ ಗಾಯ ಮಾಡಿ ನೇರವಾಗಿ ಗಡ್ಡೆಯನ್ನು ತೆಗೆಯಲಾಗುತ್ತದೆ. ಇಡೀ ಹೊಟ್ಟೆಯನ್ನು ಕೊಯ್ದು ಗರ್ಭಾಶಯವನ್ನು ಕಿತ್ತು ಹಾಕಬೇಕಾದ ಅನಿವಾರ್ಯತೆ ಇರುವುದಿಲ್ಲ.
3). ನೋವು ನಿವಾರಕ ಔಷಧಿ: ವಿಪರೀತ ನೋವು ಇದ್ದಾಗ ವೈದ್ಯರು ನೋವು ನಿವಾರಣೆಗೆ ಔಷಧಿ ನೀಡುತ್ತಾರೆ.
ಕೊನೆಮಾತು: ಚಾಕೋಲೆಟ್ ಸಿಸ್ಟ್ ಅಥವಾ ಅಂಡಾಶಯದ ಎಂಡೋಮೆಟ್ರಿಯೋಮಾ ಎಂಬ ಹೆಸರಿನಿಂದ ಕರೆಯಲ್ಪಡುವ ಈ ಅಂಡಾಶಯದ ನಾರು ಗಡ್ಡೆ ರೋಗ ಒಂದು ರೀತಿಯ ‘ಎಂಡೋಮೆಟ್ರಿಯೋಸಿಸ್’ ರೋಗವಾಗಿದ್ದು, ಮಹಿಳೆಯರ ದೇಹದಲ್ಲಿ ನಿರಂತರವಾಗಿ ಉತ್ಪತ್ತಿಯಾಗುವ ರಸದೂತಗಳಿಂದಾಗಿ ಉಂಟಾಗುತ್ತದೆ. ಇದೊಂದು ಅತ್ಯಂತ ನೋವಿನ ಮತ್ತು ಯಾತನಾಮಯ ಸ್ಥಿತಿಯಾಗಿದ್ದು, ವೈದ್ಯರ ಸಲಹೆ ಮತ್ತು ಮಾರ್ಗದರ್ಶನ ಅತೀ ಅಗತ್ಯ. ಸಕಾಲದಲ್ಲಿ ತಜ್ಞ ವೈದ್ಯರ ಸಲಹೆ, ಸೂಚನೆ ಮತ್ತು ಚಿಕಿತ್ಸೆ ಪಡೆದಲ್ಲಿ ಮುಂದೆ ಉಂಟಾಗುವ ತೊಂದರೆಗಳನ್ನು ತಪ್ಪಿಸಬಹುದಾಗಿದೆ. ಇದರ ಜೊತೆಗೆ ಜೀವನ ಶೈಲಿ ಬದಲಾವಣೆ,. ಆಹಾರ ಪದ್ಧತಿ ಬದಲಾವಣೆ ಕೂಡಾ ಅಗತ್ಯ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ದೇಹದಲ್ಲಿ ಉರಿಯೂತಕ್ಕೆ ಕಾರಣವಾಗುವ ಮತ್ತು ಇಸ್ಟ್ರೋಜನ್ ರಸದೂತವನ್ನು ಕೆರಳಿಸುವ ಆಹಾರಗಳಾದ ಆಲ್ಕೋಹಾಲ್ ಕೆಫೆನ್, ಗ್ಲುಟಿನ್, ರೆಡ್‍ಮೀಟ್ ಮತ್ತು ‘ಸಾಚುರೇಟೆಡ್’ ಕೊಬ್ಬು ಪದಾರ್ಥಗಳನ್ನು ಅತೀ ಕಡಿಮೆ ತಿನ್ನತಕ್ಕದ್ದು. ವಿಟಮಿನ್ ಮತ್ತು ಪೋಷಕಾಂಶ ಜಾಸ್ತಿ ಇರುವ ಮತ್ತು ಉರಿಯೂತ ತಗ್ಗಿಸುವ ಆಹಾರಗಳನ್ನು ಹಸಿ ತರಕಾರಿ, ಹಣ್ಣು ಹಂಪಲು, ನಾರುಯುಕ್ತ ಆಹಾರಗಳನ್ನು ಜಾಸ್ತಿ ಸೇವಿಸಬೇಕು. ಆಂಟಿ ಆಕ್ಸಿಡೆಂಟ್ ಜಾಸ್ತಿ ಇರುವ ತರಕಾರಿ, ದ್ವಿದಳ ಧಾನ್ಯ, ಸೊಪ್ಪು ತರಕಾರಿ ಹಣ್ಣು ಹಂಪಲುಗಳನ್ನು ಜಾಸ್ತಿ ಸೇವಿಸಿದಲ್ಲಿ ಉರಿಯೂತ ಕಡಿಮೆಯಾಗಿ ರಸದೂತಗಳ ಕೆರಳುವಿಕೆ ನಿಯಂತ್ರಣಕ್ಕೆ ಬರಲು ರೋಗದ ಲಕ್ಷಣಗಳು ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಒಟ್ಟಿನಲ್ಲಿ ಆರೋಗ್ಯಪೂರ್ಣ ಜೀವನ ಶೈಲಿ ಸಮತೋಲಿತ ಆಹಾರ ಮತ್ತು ತಜ್ಞ ವೈದ್ಯರ ಸೂಕ್ತ ಸಲಹೆ ಮತ್ತು ಮಾರ್ಗದರ್ಶನದಿಂದ ಈ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಿದೆ.