(ನ್ಯೂಸ್ ಕಡಬ) newskadaba.com ಉಜಿರೆ, ಅ. 28. ಹೇರಳ ಹಣ ವೆಚ್ಚಮಾಡಿ ಹೊಸ ದೇವಸ್ಥಾನಗಳ ನಿರ್ಮಾಣಕ್ಕಿಂತ ಐತಿಹಾಸಿಕ ಹಿನ್ನೆಲೆಯ ಪುರಾತನ ದೇಗುಲಗಳ ರಕ್ಷಣೆಯ ಕಾರ್ಯ ಹೆಚ್ಚು ಮಹತ್ವಪೂರ್ಣವಾದದ್ದು ಎಂಬ ಆಶಯದೊಂದಿಗೆ 1991ರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷರಾಗಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ (ರಿ) ಪ್ರಾರಂಭಿಸಲಾಯಿತು.
ರಾಜ್ಯದ 25 ಜಿಲ್ಲೆಗಳಲ್ಲಿ ಈವರೆಗೆ ಒಟ್ಟು ರೂ. 253 ದೇವಾಲಯಗಳು ಮತ್ತು ಪ್ರಾಚೀನ ಸ್ಮಾರಕಗಳ ಸಂರಕ್ಷಣಾ ಕಾರ್ಯಕ್ಕಾಗಿ ರೂ. 29.34 ಕೋಟಿ ವಿನಿಯೋಗಿಸಲಾಗಿದೆ. ಇದರಲ್ಲಿ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ರೂ. 10.46 ಕೋಟಿ, ಸರ್ಕಾರದ ವತಿಯಿಂದ ರೂ. 9 ಕೋಟಿ, ದೇವಾಲಯ ಸಮಿತಿಯಿಂದ ರೂ. 9.88 ಕೋಟಿ ವಿನಿಯೋಗಿಸಲಾಗಿದೆ. 2019 – 20 ರ ಸಾಲಿನಲ್ಲಿ 12 ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಕ್ಕಾಗಿ ರೂ. 17.65 ಕೋಟಿಯ ವೆಚ್ಚದ ಯೋಜನೆ ರೂಪಿಸಲಾಗಿದೆ. ಒಟ್ಟು ವೆಚ್ಚದಲ್ಲಿ ಶೇಕಡಾ 40 ಧರ್ಮೋತ್ಥಾನ ಟ್ರಸ್ಟ್, ಶೇಕಡ 40 ಕರ್ನಾಟಕ ಸರ್ಕಾರ ಹಾಗೂ ಶೇಕಡ 20 ನ್ನು ದೇವಾಲಯದ ಸಮಿತಿಯವರು ಭರಿಸಬೇಕು. ಜೀರ್ಣೋದ್ಧಾರದ ಬಳಿಕ ದೇವಸ್ಥಾನದ ನಿರ್ವಹಣೆಯನ್ನು ಆಯಾ ಊರಿನ ಸಮಿತಿಯವರಿಗೆ ಬಿಟ್ಟು ಕೊಡಲಾಗುತ್ತದೆ.