(ನ್ಯೂಸ್ ಕಡಬ) newskadaba.com ಕಡಬ,ಸೆ.29. ಐತ್ತೂರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಗ್ರಾ.ಪಂ.ಅಧ್ಯಕ್ಷ ಸತೀಶ್ ಕೆ.ಯವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ವಿವಿಧ ಯೋಜನೆ ಹಾಗೂ ಕಾಮಗಾರಿಗಳ ಕುರಿತು ಚರ್ಚಿಸಲಾಯಿತು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶೌಚಾಲಯ ನಿರ್ಮಿಸಲು ಬಾಕಿ ಇರುವ ಕುಟುಂಬಗಳಿಗೆ ಶೌಚಾಲಯ ನಿರ್ಮಿಸುವಂತೆ ಪಂಚಾಯತ್ನಿಂದ ನೋಟಿಸ್ ನೀಡಲು ಸಭೆಯಲ್ಲಿ ತಿರ್ಮಾನಿಸಲಾಯಿತು. ಗಾಂಧೀ ಜಯಂತಿ ದಿನಾಚರಣೆಯ ದಿನವಾದ ಅ.2ರಂದು ಸ್ವಚ್ಛ ಸಂಕಲ್ಪ ಕಾರ್ಯಕ್ರಮ ನಿಮಿತ್ತ ಗ್ರಾಮ ಪಂಚಾಯತ್ ವಠಾರದಲ್ಲಿ ಸ್ವಚ್ಛತೆ ಕಾರ್ಯಕ್ರಮ ಹಾಗೂ ಜಾಗೃತಿ ಜಾಥಾ ಕಾರ್ಯಕ್ರಮ ಏರ್ಪಡಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಅ.10 ರಂದು ಪಂಚಾಯತ್ನಲ್ಲಿ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆಯನ್ನು ಹಾಗೂ ಮಕ್ಕಳಿಗೆ ಆಟೋಟ ಸ್ಫರ್ಧೆ ನಡೆಸಲು ತಿರ್ಮಾನಿಸಲಾಯಿತು. ಮುಂದಿನ ವರ್ಷದಿಂದ ವರ್ಷಕ್ಕೊಂದು ವಾರ್ಡ್ನಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸುವುದಾಗಿ ಸಭೆಯಲ್ಲಿ ನಿರ್ಣಯಿಸಲಾಯಿತು. ಐತ್ತೂರು ಗ್ರಾಮದ ಬೂತ್ ಸಂಖ್ಯೆ 41ರ ಮತದಾನವು ಮರ್ದಾಳ ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿದ್ದು ಅದನ್ನು ಮುಂದಿನ ದಿನಗಳಲ್ಲಿ ಪಂಚಾಯತ್ ಸಭಾಭವನದಲ್ಲಿ ನಡೆಸಬೇಕು ಹಾಗೂ ಕಳೆದ ಗ್ರಾ.ಪಂ.ಪಿ.ಡಿ.ಓ. ಆಗಿದ್ದ ಜಯರಾಜ್ರವರು ಧೀರ್ಘವಾದಿ ರಜೆ ಮಾಡಿದ್ದು ಸಭೆ ಕರೆಯದೆ ಪಂಚಾಯತ್ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆ ಎಸಗಿ ಕರ್ತವ್ಯ ಲೋಪ ಮಾಡಿರುತ್ತಾರೆ. ಇದರ ಬಗ್ಗೆ ಜಿ.ಪಂ.ಕಾರ್ಯನಿರ್ವಾಹಣಾಧಿಕಾರಿಯವರಿಗೆ ದೂರು ನೀಡಿ ಒಂದು ವರ್ಷ ಕಳೆದರೂ ಪಂಚಾಯತ್ಗೆ ಯಾವುದೇ ಉತ್ತರ ಬಂದಿಲ್ಲ ಈ ಕುರಿತು ಸರಕಾರಕ್ಕೆ ಮತ್ತೆ ಬರೆಯಲು ಸಭೆಯಲ್ಲಿ ತಿರ್ಮಾನಿಸಲಾಯಿತು. ಗ್ರಾ.ಪಂ. ವ್ಯಾಪ್ತಿಯ ಅಂತಿಬೆಟ್ಟು, ಕೋಕಳ, ಸುಳ್ಯ ಹಾಗೂ ಇತರ ಕಡೆಯ ಪಂಚಾಯತ್ ನಿವೇಶನದಲ್ಲಿ ಇರುವ ಮರಗಳನ್ನು ತೆರವುಗೊಳಿಸುವ ಕುರಿತು ಅರಣ್ಯ ಇಲಾಖೆ ಅನುಮತಿ ನೀಡಿದೆ ಆದರೆ ಸುಪ್ರೀಂಕೋರ್ಟ್ ಆದೇಶದಂತೆ 1 ಮರ ತೆರವಿನ ಬದಲಾಗಿ 10 ಗಿಡ ಗಿಡಗಳನ್ನು ನೆಟ್ಟು, ಅದನ್ನು 5ವರ್ಷದವರೆಗೆ ಸಾಕಿ ಬೆಳೆಸ ಬೇಕು ಎಂಬ ಆದೇಶ ಇದೆ ಇದಕ್ಕೆ ಪಂಚಾಯತ್ನಿಂದ ರೂ 30000ವನ್ನು ಅನುದಾನ ತೆಗೆದಿರಿಸಲು ಅವಕಾಶವಿದ್ದು ಅನುದಾನ ತೆಗೆದಿರಿಸಲು ನಿರ್ಣಯಿಸಲಾಯಿತು.
ಸಭೆಯಲ್ಲಿ ತಾಲೂಕು ಪಂಚಾಯತ್ ಸದಸ್ಯೆ ಪಿ.ವೈ. ಕುಸುಮ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸಾವಿತ್ರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಲ್ಪೆಡ್ ಲಾರೆನ್ಸ್ ರೊಡ್ರಿಗೆಸ್, ಸದಸ್ಯರಾದ ಪಿ.ಪಿ. ಮಥ್ಯಾಸ್, ಎಂ.ಪಿ. ಯೂಸುಫ್, ಶ್ರೀಧರ ಗೌಡ ಸುಳ್ಯ, ಧರ್ಮಪಾಲ, ಇಸ್ಮಾಯಿಲ್, ಗೋಮತಿ, ಜಯಲಕ್ಷ್ಮಿ, ನಸೀರಾ ಉಪಸ್ಥಿತರಿದ್ದರು. ಕಾರ್ಯದರ್ಶಿ ವೆಂಕಟರಮಣ ಸ್ವಾಗತಿಸಿ, ಶಿಬು ವರದಿ ಮಂಡಿಸಿ ವಂದಿಸಿದರು. ಸಿಬ್ಬಂದಿಗಳಾದ ತಾರಾನಾಥ ಹಾಗೂ ದೇವಿಕಾ ಸಹಕರಿಸಿದರು.