(ನ್ಯೂಸ್ ಕಡಬ) newskadaba.com ನವದೆಹಲಿ, ಅ.24. ಕೊರೋನಾ ಲಸಿಕೆ ಲಭ್ಯವಾಗುತ್ತಿದ್ದಂತೆ ದೇಶದ 130 ಕೋಟಿ ಜನರಿಗೆ ಲಸಿಕೆ ವಿತರಿಸಲು ವಿಶೇಷ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತದೆ. ಕೇಂದ್ರ ಸರ್ಕಾರವೇ ನೇರವಾಗಿ ಲಸಿಕೆ ಖರೀದಿಸಿ ಆದ್ಯತಾ ವಲಯಗಳಿಗೆ ಉಚಿತವಾಗಿ ಹಂಚಿಕೆ ಮಾಡಲಾಗುವುದು. ರಾಜ್ಯ, ಜಿಲ್ಲೆಗಳಲ್ಲಿರುವ ವ್ಯವಸ್ಥೆಗಳ ಮೂಲಕ ಲಸಿಕೆಯನ್ನು ಪೂರೈಕೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
ಕೊರೋನಾ ಲಸಿಕೆ ವಿತರಣೆ ಕುರಿತಂತೆ ಕೇಂದ್ರ ಸರ್ಕಾರದಿಂದ ವಿಶೇಷ ಯೋಜನೆ ರೂಪಿಸುತ್ತಿದ್ದು, ಪ್ರತ್ಯೇಕ ಯೋಜನೆ ರೂಪಿಸಬಾರದೆಂದು ರಾಜ್ಯಸರ್ಕಾರಗಳಿಗೆ ಮಾಹಿತಿ ನೀಡಲಾಗಿದೆ. ಭಾರತದಲ್ಲಿ ನವೆಂಬರ್ ಅಂತ್ಯದ ವೇಳೆಗೆ ಆದ್ಯತಾ ಗುಂಪನ್ನು ಪಟ್ಟಿ ಮಾಡುವಂತೆ ರಾಜ್ಯಗಳಿಗೆ ಕೇಂದ್ರದಿಂದ ಸೂಚನೆ ನೀಡಲಾಗಿದೆ. ಲಸಿಕೆ ಪಡೆದ ಫಲಾನುಭವಿಗಳ ಸಂಪರ್ಕವನ್ನು ಕಾಯ್ದುಕೊಳ್ಳಲು ಆಧಾರ್ ಕಾರ್ಡ್ ಸಂಖ್ಯೆಯೊಂದಿಗೆ ಜೋಡಣೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ. ವೈದ್ಯರು ಸೇರಿದಂತೆ ಆರೋಗ್ಯ ಕ್ಷೇತ್ರದ ಸಿಬ್ಬಂದಿ, ಕೊರೋನಾ ಕರ್ತವ್ಯದಲ್ಲಿ ತೊಡಗಿರುವ ಸ್ಥಳೀಯ ಸಂಸ್ಥೆಗಳ ನೌಕರರು, ಪೊಲೀಸರು, ಸೇನಾ ಪಡೆ ಸಿಬ್ಬಂದಿ, 50 ವರ್ಷಕ್ಕೂ ಹಿರಿಯ ವಯಸ್ಸಿನ 26 ಕೋಟಿ ಮಂದಿ, ಆರೋಗ್ಯ ಸಮಸ್ಯೆ ಹೊಂದಿರುವ 50 ವರ್ಷದೊಳಗಿನ ಜನತೆಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗುವುದು ಎಂದು ಹೇಳಲಾಗಿದೆ.