(ನ್ಯೂಸ್ ಕಡಬ) newskadaba.com ಕಡಬ,ಸೆ.27. ಬಿಳಿನೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಟ್ಟಣ ಸಮೀಪದ ಮೇರೊಂಜಿ ಎಂಬಲ್ಲಿ ಕಟ್ಟಡ ನಿರ್ಮಾಣಕ್ಕೆ ಸಕಾಲದಲ್ಲಿ ಪರವಾಣಿಗೆ ನೀಡದೆ ಸತಾಯಿಸಲಾಗಿದೆ ಎನ್ನುವ ಆರೋಪದಲ್ಲಿ ಉದ್ಯಮಿ ಕೆ.ಟಿ.ತೋಮ್ಸ್‌ನ್ ಅವರು ಪಂ. ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಿದನ್ನು ಸೋಮವಾರ ಪಂಚಾಯಿತಿ ಅನುಮತಿ ನೀಡಿರುವ ಬೆನ್ನಲ್ಲೇ ವಾಪಾಸ್ಸು ಪಡೆದಿದ್ದಾರೆ.
ಕೆ.ಟಿ.ತೋಮ್ಸ್‌ನ ಅವರು ನೆಟ್ಟಣ ಸಮೀಪದ ಮೇರೊಂಜಿಯಲ್ಲಿ ತನ್ನ ಜಮೀನಿನಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸಲು ಅನುಮತಿ ನೀಡುವಂತೆ ದಾಖಲೆ ಸಮೇತ ಅರ್ಜಿ ಸಲ್ಲಿಸಿದ್ದರು. ಆದರೆ ಇದೇ ವೇಳೆ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಯಲ್ಲಿ ಬಂದ್ ಆಗಿದ್ದ ನೆಟ್ಟಣ ರಸ್ತೆ ಬದಿಯಲ್ಲಿದ್ದ ಮದ್ಯದಂಗಡಿಯನ್ನು ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗುತ್ತದೆ ಎನ್ನುವ ಆರೋಪದಲ್ಲಿ ಸಾರ್ವಜನಿಕರು ಪಂಚಾಯಿತಿಗೆ ಆಕ್ಷೇಪನಾ ಪತ್ರ ನೀಡಿದ್ದರು ಮಾತ್ರವಲ್ಲ ಗ್ರಾಮ ಸಭೆಯಲ್ಲಿ ಕೂಡಾ ಆರೋಪ ವ್ಯಕ್ತವಾಗಿತ್ತು. ಈ ಹಿನ್ನೆಯಲ್ಲಿ ಕಟ್ಟಡ ಪರವಾಣಿಗೆ ನೀಡಿರಲಿಲ್ಲ ಎಂದು ಪಂಚಾಯಿತಿ ಆಡಳಿತ ಮಂಡಳಿ ಹೇಳಿಕೊಂಡಿತ್ತು. ನೆಟ್ಟದಲ್ಲಿ ಬಾರ್ ಬೇಕು, ಬೇಡಾ ಎನ್ನುವ ಎರಡು ತಂಡಗಳು ಆಗಾಗ ತಮ್ಮ ಹಕ್ಕೊತ್ತಾಯವನ್ನು ಮಂಡಿಸುತ್ತಲೇ ಬಂದಿದ್ದವು. ಇದೇ ಹಿನ್ನೆಯಲ್ಲಿ ಮೇರೊಂಜಿಯಲ್ಲಿ ನಿರ್ಮಾಣವಾಗುವ ಕಟ್ಟಡಕ್ಕೆ ಸ್ಥಳಾಂತರವಾಗುತ್ತದೆ ಎನ್ನುವ ಆರೋಪ ವ್ಯಕ್ತವಾಯಿತು. ಈ ಎಲ್ಲಾ ಬೆಳವಣಿಗೆಯನ್ನು ಮುಂದಿಟ್ಟುಕೊಂಡು ಪಂಚಾಯಿತಿ ಕಟ್ಟಡ ಪರವಾಣಿಗೆ ಅರ್ಜಿ ನೀಡಿ 60 ದಿನ ಕಳೆದರೂ ಪರವಾಣಿಗೆ ನೀಡಲು ಮಿನಾಮೇಷ ಎನಿಸಿತ್ತು. ಈ ಮಧ್ಯೆ ಪಂಚಾಯಿತಿ ಹಾಗೂ ತೋಮ್ಸ್‌ನ ಮಧ್ಯೆ ಆರೋಪ ಪ್ರತ್ಯಾರೋಪಗಳು ನಡೆದು ಹೋಗಿದ್ದವು. ತಾನು ಎಲ್ಲಾ ದಾಖಲೆಗಳನ್ನು ನೀಡಿದರೂ ನನಗೆ ವಿನಾಕಾರಣ ಸತಾಯಿಸಲಾಗುತ್ತದೆ. ಸೆ 23 ರ ಒಳಗೆ ಅನುಮತಿ ನೀಡದಿದ್ದರೆ ಸೆ 25 ಕ್ಕೆ ಪಂಚಾಯಿತಿ ಎದುರು ಧರಣಿ ಕೂರುವ ಎಚ್ಚರಿಕೆಯನ್ನು ಪತ್ರಿಕಾಗೋಷ್ಠಿಯಲ್ಲಿ ತೋಮ್ಸ್‌ನ್ ನೀಡಿದ್ದರು. ಬಳಿಕ ನಡೆದ ಬೆಳವಣಿಗೆಯಲ್ಲಿ ಇಲ್ಲಿನ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಪಿ,ವಗೀಸ್ ಅವರು ರಾಜಿ ಸಂಧಾನ ಮಾಡಿ ಕಟ್ಟಡ ಪರವಾಣಿಗೆ ನೀಡುವಂತೆ ಪಂಚಾತಿ ಆಡಳಿತ ಮಂಡಳಿಯನ್ನು ಒಪ್ಪಿಸಿದ್ದರು ಎನ್ನಲಾಗಿದೆ.
ಜಿಲ್ಲಾ ಪಮಚಾಯಿತಿ ಸದಸ್ಯರ ಭರವಸೆಯಂತೆ ಸೋಮವಾರ ಹತ್ತು ಗಂಟೆಗೆ ಕಟ್ಟಡ ಪರವಾಣಿಗೆ ದೊರೆಯುತ್ತದೆ ಎನ್ನುವ ನೆಲೆಯಲ್ಲಿ ಧರಣಿಯನ್ನು ಕೈಬಿಡಲು ನಿರ್ಧರಿಸಿ, ಬೆಳಿಗ್ಗೆ ಪಂಚಾಯಿತಿಗೆ ಹೋದರೆ ಅಲ್ಲಿ ಅಧ್ಯಕ್ಷರ ಅನುಪಸ್ಥಿತಿಯಿಂದಾಗಿ, ಸಿಬಂದಿಗಳು ಕಾಯುವಂತೆ ಸಲಹೆ ನೀಡಿದರು. ಅಧ್ಯಕ್ಷರು ಇಲ್ಲದೆ ಮತ್ತೆ ತಡ ಮಾಡಲಾಗುತ್ತಿದೆ ಎಂದು ಆರೋಪಿಸಿ ತೋಮ್ಸ್‌ನ್ ಹಾಗೂ ಅವರ ಪತ್ನಿ ಮೇರಿ ಮೋಳಿ ಪಂಚಾಯತಿ ಜಗಳಿಯಲ್ಲಿ ಧರಣಿ ಕೂತರು. ಇದಾದ ಬಳಿಕ ಅಧ್ಯಕ್ಷರು ಬಂದು ಪರವಾಣಿಗೆಯ ಎಲ್ಲಾ ಪ್ರಕ್ರಿಯೆ ನಡೆದು ಮದ್ಯಾಹ್ನ ಹನ್ನೆರಡು ಗಂಟೆಯ ಹೊತ್ತಿಗೆ ಪರವಾಣಿಗೆ ನೀಡಲಾಯಿತು. ನನಗೆ ಜಿಲ್ಲಾ ಪಂಚಾಯಿತಿ ಸದ್ಯರು ಭರವಸೆ ನೀಡಿರುವ ಹಿನ್ನೆಯಲ್ಲಿ ನಾನು ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವ ನಿರ್ಧಾರ ಮಾಡಿದ್ದೆ, ಆದರೆ ಪಂಚಾಯಿತಿಯಲ್ಲಿ ಮತ್ತೆ ವಿಳಂಬ ಧೋರಣೆ ಅನುಸರಿಸಿರುವುದರಿಂದ ಅನಿವಾರ್ಯವಾಗಿ ಧರಣಿ ಕುಳಿತುಕೊಳ್ಳಬೇಕಾಯಿತು. ಸೆ 28 ಗುರುವಾರ ನಡೆಯುವ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಡೋರ್ ನಂಬರ್ ನೀಡುವ ಭರವಸೆಯನ್ನು ನೀಡಲಾಗಿದೆ. ಒಂದು ವೇಳೆ ಅಂದು ಡೋರ್ ನಂಬರ್ ನೀಡಲು ನಿರ್ಣಯ ಕೈಗೊಳ್ಳದಿದ್ದರೆ. ಮತ್ತೆ ಧರಣಿ ಕೂರುತ್ತೇನೆ ಎಂದು ತೋಮ್ಸ್‌ನ್ ಎಚ್ಚರಿಸಿದರು.
ತೋಮ್ಸ್‌ನ್ ಅವರ ಧರಣಿ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿರುವ ರೈತ ಸಂಘದ ವಿಕ್ಟರ್ ಮಾರ್ಟಿಸ್, ಕಡಬ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಸಿ.ಪಿಲಿಫ್, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸಿ.ಪಿ.ಸೈಮನ್, ಸಾಮಾಜಿಕ ಕಾರ್ಯಕರ್ತ ಸಿ.ಕೆ.ಆ್ಯಂಟನಿ, ಬಿಳಿನೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ವಾಳ್ತಾಜೆ, ಸೇರಿದಂತೆ ಹಲವರು ಪಂಚಾಯಿತಿ ವಠಾರದಲ್ಲಿ ಜಮಾಯಿಸಿದ್ದರು. ಕಡಬ ಪೋಲೀಸರು ಬಂದೋಬಸ್ತ್ ಒದಗಿಸಿದ್ದರು.
ತೋಮ್ಸ್‌ನ ಅವರು ಪಂಚಾಯಿತಿಯಿಂದ ಅನುಮತಿ ಪಡೆಯದೆ ಮೇರೊಂಜಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಮಾಡಿದ್ದಾರೆ. ಮಾತ್ರವಲ್ಲ ಕಟ್ಟಡ ನಿರ್ಮಾಣಕ್ಕೆ ಸಾರ್ವಜನಿಕರಿಂದ ಆಕ್ಷೇಪ ಬಂದಿರುವ ಹಿನ್ನೆಯಲ್ಲಿ ಎಲ್ಲವನ್ನೂ ಪರಿಶೀಲಿಸಿ ಪರವಾಣಿಗೆ ನೀಡುವಾಗ ತಡವಾಗಿದೆ, ಇದಕ್ಕಾಗಿ ಪಂಚಾಯಿತಿ ಹಾಗೂ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿರುವುದು ಸರಿಯಲ್ಲ. ಅನುಮತಿ ಇಲ್ಲದೆ ಕಟ್ಟಡ ನಿರ್ಮಾಣ ಮಾಡಿರುವುದರಿಂದ ದಂಡ ವಿಧಿಸಲಾಗಿದೆ. ಅದನ್ನು ಅವರು ಪಾವತಿಸಿದ ಬಳಿಕ ಪರವಾಣಿಗೆ ನೀಡಲಾಗಿದೆ. ಡೋರ್ ನಂಬರ್ ನೀಡುವ ಬಗ್ಗೆ ಸೆ 28 ರಂದು ನಡೆಯುವ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೀರ್ಮಾಣಕ್ಕೆ ಬರಲಾಗುವುದು.