(ನ್ಯೂಸ್ ಕಡಬ) newskadaba.com ಮಂಗಳೂರು,ಸೆ.26. ತಲಪಾಡಿ ಗ್ರಾಮದ ತಚ್ಚಾಣಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಶೇಖರ್ ಯಾನೆ ಕ್ಯಾಮು (32) ನನ್ನು ಸೋಮವಾರ ಇಕೊನಮಿಕ್ ಅಂಡ್ ನಾರ್ಕೊಟಿಕ್ ಕ್ರೈಂ ಪೊಲೀಸ್ ಠಾಣಾ ಪೊಲೀಸರು ಬಂಧಿಸಿ 7,000 ರೂ. ಮೌಲ್ಯದ 433 ಗ್ರಾಂ ಗಾಂಜಾ, ವಶಪಡಿಸಿಕೊಂಡಿದ್ದಾರೆ.
ಈತನನ್ನು ಕೇರಳ ಮೂಲದ ಮಂಜೇಶ್ವರ ತೂಮಿನಾಡು ಸಮೀಪದ ಕಣ್ವತೀರ್ಥದ ಶೇಖರ್ ಯಾನೆ ಕ್ಯಾಮು (32) ಎಂದು ಗುರುತಿಸಲಾಗಿದೆ. ಈತ ತಲಪಾಡಿ ಗ್ರಾಮದ ತಚ್ಚಾಣಿ ಎಂಬಲ್ಲಿ ಗಾಂಜಾದೊಂದಿಗೆ ಇರುವ ಮಾಹಿತಿ ತಿಳಿದ ಪೊಲೀಸರು ದಾಳಿ ನಡೆಸಿ ಈತನನ್ನು ಬಂಧಿಸಿದ್ದಾರೆ. ಈತನ ಬಳಿ ಇದ್ದ 10 ಪ್ಯಾಕೇಟ್‌ನಲ್ಲಿದ್ದ ಒಟ್ಟು 433 ಗ್ರಾಂ ತೂಕದ ಗಾಂಜಾ, ಗಾಂಜಾ ಮಾರಾಟ ಮಾಡಿದ 700 ರೂ. ನಗದು ಮತ್ತು ಒಂದು ಮೊಬೈಲ್‌ನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಪೊಲೀಸ್ ಆಯುಕ್ತ ಟಿ. ಸುರೇಶ್ ಅವರ ಆದೇಶದಂತೆ ಡಿಸಿಪಿ ಹನುಮಂತ ರಾಯ ಅವರ ನಿರ್ದೇಶನ ಮತ್ತು ಸಿಸಿಬಿ ಎಸಿಪಿ ವೆಲೆಂಟೈನ್ ಡಿ’ಸೋಜಾ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಕೊನಮಿಕ್ ಅಂಡ್ ನಾರ್ಕೊಟಿಕ್ ಕ್ರೈಂ ಠಾಣಾ ಪೊಲೀಸ್ ನಿರೀಕ್ಷಕ ಮೊಹಮ್ಮದ್ ಶರೀಫ್, ಸಿಬ್ಬಂದಿಯಾದ ಶಾಜು ನಾಯರ್, ಲಕ್ಷ್ಮೀಶ, ಕಿಶೋರ್ ಪೂಜಾರಿ ಹಾಗೂ ಚಾಲಕ ಭಾಸ್ಕರ್ ಇದ್ದರು.