(ನ್ಯೂಸ್ ಕಡಬ) newskadaba.com ಬೆಳ್ತಂಗಡಿ,ಸೆ.26. ದೇವಸ್ಥಾನಕ್ಕೆಂದು ಹೊರಟ ದಂಪತಿಗಳು ರಸ್ತೆ ಬದಿ ನಿಂತಿರುವುದನ್ನು ಗಮನಿಸಿದ ಅಪರಿಚಿತರು ನಿಮಗೆ ಮಕ್ಕಳಾಗುವ ಕಷಾಯ ನೀಡುತ್ತೇವೆಂದು ಹೇಳಿ ಮನೆಯಲ್ಲಿದ್ದ ಹಣ ದೋಚಿ ಪರಾರಿಯಾಗಿರುವ ಪ್ರಕರಣ ಬೆಳ್ತಂಗಡಿ ತಾಲೂಕಿನ ಬಳಂಜದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಸೆ. 16 ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬಳಂಜದ ಪುರುಷೋತ್ತಮ ದಂಪತಿಗಳು ದೇವಸ್ಥಾನಕ್ಕೆ ಹೋಗುವ ಸಲುವಾಗಿ ತೆಂಕ ಕಾರಂದುರು ಬಳಿಯ ಕಾಪಿನಡ್ಕದಲ್ಲಿ ನಿಂತಿದ್ದರು. ಈ ವೇಳೆ ಕಾರಿನಲ್ಲಿ ಆಗಮಿಸಿದ ಅಪರಿಚಿತರು ಇವರ ಮುಂದೆ ಕಾರು ನಿಲ್ಲಿಸಿ ಪರಿಚಿತರಂತೆ ಮಾತನಾಡಿದರು. ಹೀಗೆ ಪೂರ್ವಾಪರ ವಿಚಾರಿಸಿದ ಬಳಿಕ ದಂಪತಿಗೆ ಮಕ್ಕಳಾಗದಿರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು.
ಬಳಿಕ ಮಕ್ಕಳಾಗುವುದಕ್ಕೆ ನಾವು ಔಷಧಿ ನೀಡುತ್ತೇವೆ ಎಂದು ದಂಪತಿಗಳನ್ನು ಅವರ ಮನೆಗೆ ಕರೆದೊಯ್ದದರು. ಬಳಿಕ ಮನೆಯವರಿಂದ ಜೀರಿಗೆ ಹುಡಿ ಪಡೆದು ಅದನ್ನು ಯಾವುದೋ ದ್ರಾವಣಕ್ಕೆ ಮಿಶ್ರಮಾಡಿ ಈಗಲೆ ಕುಡಿಯಿರಿ ಎಂದು ದಂಪತಿಗೆ ಸಲಹೆ ನೀಡಿದರು.
ಖದೀಮರು ನೀಡಿದ್ದ ದ್ರಾವಣ ಕುಡಿದ ದಂಪತಿಗಳು ಪ್ರಜ್ಞೆ ಕಳೆದುಕೊಂಡಿದ್ದರು. ಇವರಿಗೆ ಮತ್ತೆ ಪ್ರಜ್ಞೆ ಬಂದಾಗ ದುಷ್ಕರ್ಮಿಗಳು ಪರಾರಿಯಾಗಿದ್ದು ಮನೆಯ ಕಪಾಟಿನಲ್ಲಿದ್ದ 40 ಸಾವಿರ ಹಣವನ್ನು ಕದ್ದೊಯ್ದಿರುವುದು ಬೆಳಕಿದೆ ಬಂದಿದೆ. ಈ ಬಗ್ಗೆ ಪುರುಷೋತ್ತಮ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.